ಪರಿಸರ ಸ್ನೇಹಿ ಜೀವನದಿಂದ ಓಝೋನ್ ಪದರವನ್ನು ಕಾಪಾಡಬಹುದು: ಡಾ. ಶೆಟ್ಟಿ

"ಮಾಲಿನ್ಯಕಾರಕ ವಸ್ತುಗಳ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿಯಾಗಿ ಜೀವನ ನಡೆಸಿದ್ದಲ್ಲಿ ನಾವು ಓಝೋನ್ ಪದರವನ್ನು ಕಾಪಾಡಬಹುದು," ಎಂದು ಮಂಗಳೂರು ಸಂತ ಆಲೋಶಿಯಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ್ ಶೆಟ್ಟಿ ಅಭಿಪ್ರಾಯಪಟ್ಟರು.

ಇವರು ಸೆಪ್ಟೆಂಬರ್ 16ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಾಯೋಜಿತ ಸರಣಿ ಕಾರ್ಯಕ್ರಮದಲ್ಲಿ ವಿಶ್ವ ಓಝೋನ್ ದಿನದ ಪ್ರಯುಕ್ತ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಹಿಂದಿನ ದಿನಗಳಲ್ಲಿ ಬಳಕೆ ಮಾಡುತ್ತಿದ್ದ ರೆಫ್ರಿಜರೇಟರ್ ಹಾಗೂ ಎ.ಸಿ ತಂಪಾಗಲು ಒಂದು ಅನಿಲವನ್ನು ಬಳಸುತ್ತಿದ್ದರು ಅದುವೇ ಕ್ಲೋರೋ ಪ್ಲೋರೋ ಕಾರ್ಬನ್ (CFC) ಹಾಗೂ ಬ್ಲೋಮೊ ಪ್ಲೋರೊ ಕಾರ್ಬನ್. ಅದು ವಿಭಜನೆಗೊಂಡಾಗ ಅದರಲ್ಲಿ ಉತ್ಪಾದನೆಯಾಗುವ  ಕ್ಲೋರಿನ್ ನಿಂದಾಗಿ ಓಝೋನ್ ಪದರ ನಾಶವಾಗುತ್ತಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ ಹಾಗೂ ಅತಿಯಾದ ಮಾಲಿನ್ಯಕಾರಕಗಳ ಬಿಡುಗಡೆಯಿಂದಲೂ ಓಝೋನ್ ಪದರ ನಾಶವಾಗುತ್ತದೆ, ಎಂದರು.

ಓಝೋನ್ ಪದರದ ನಾಶದಿಂದ ಸೂರ್ಯನ ನೇರಳಾತೀತ ಕಿರಣಗಳು ನೇರವಾಗಿ ಚರ್ಮಕ್ಕೆ ಬೀಳುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು, ಕೂದಲು ಉದುರುವಿಕೆ ಇದೆಲ್ಲವೂ ಕ್ಯಾನ್ಸರ್ ಕಾಯಿಲೆ ಬರಲು ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು, ಹಾಗೂ ಓಝೋನ್ ಪದರ ನಾಶವಾಗುವುದನ್ನು ಹೇಗೆ ತಡೆಗಟ್ಟಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು.

"ನಮ್ಮ ಆಸೆಯನ್ನು ಇತಿ-ಮಿತಿಯಲ್ಲಿ ಇಟ್ಟುಕೊಂಡು ಪರಿಸರ ಸ್ನೇಹಿಯಾಗಿ ಜೀವಿಸುತ್ತ ಪರಿಸರ ಸಂರಕ್ಷಣೆ ಮಾಡಬೇಕು. ನಾವು ಈ ಭೂಮಿಯನ್ನು ನಮ್ಮ ಹಿರಿಯರಿಂದ ಎರವಲು ಪಡೆದಿದ್ದೇವೆ. ಅದನ್ನು ಮುಂದಿನ ಪೀಳಿಗೆಗೆ ಅತ್ಯುತ್ತಮ ರೀತಿಯಲ್ಲಿ ಹಸ್ತಾಂತರಿಸಬೇಕು," ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಿದರು.

ಈ ಕಾರ್ಯಕ್ರಮದಲ್ಲಿ ಹಲವಾರು ಕೇಳುಗರು ಪ್ರಶ್ನೆಗಳನ್ನು ಕೇಳಿ ಡಾ. ಶೆಟ್ಟಿ ಜೊತೆ ಸಂವಾದ ನಡೆಸಿದರು.

- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್