ವಾರ್ಡ್ ಸಮಿತಿ ಕುರಿತು ಡಾ. ರೋಸ್ ವೀರಾ ಜೊತೆ ಜನದನಿ

ಆಗಸ್ಟ್ 12 ಜನದನಿ ನೇರಪ್ರಸಾರದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ರಾಜ್ಯ ಶಾಸ್ತ್ರದ ಮುಖ್ಯಸ್ಥೆ ಡಾ.ರೋಸ್ ವೀರಾ ಭಾಗವಹಿಸಿ ವಾರ್ಡ್ ಸಮಿತಿಯ ರಚನೆ ಹೇಗೆ ಮತ್ತು ಅದರ ಉದ್ದೇಶದ ಬಗ್ಗೆ ಮಾತನಾಡಿದರು. ಅವರು ಕೂಡ ವಾರ್ಡ್ ಸಮಿತಿಯಲ್ಲಿ ಆಯ್ಕೆಯಾಗಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಜನರ ನೇರವಾದ ಪಾತ್ರವನ್ನ ಖಾತರಿಪಡಿಸಲು ಹಾಗೂ ವಾರ್ಡಲ್ಲಿ ಉತ್ತಮ ಪಾರದರ್ಶಕ ಆಡಳಿತ ನೀಡುವ ಸಲುವಾಗಿಯೂ ವಾರ್ಡ್ ಸಮಿತಿ ರಚನೆಯಾಗಬೇಕು ಎಂಬುದು ನಾಗರಿಕರ ಹಲವಾರು ವರ್ಷಗಳ ಬೇಡಿಕೆ ಮತ್ತು ಹೋರಾಟನೂ ಆಗಿತ್ತು. ಅದರ ಫಲವಾಗಿ ಇದಕ್ಕೊಂದು ಚಾಲನೆ ಕೂಡಾ ದೊರಕಿದೆ. ಇದರಿಂದ ಪಾರದರ್ಶಕವಾದ ಆಡಳಿತ ನೀಡಬಹುದು ಎಂಬ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟರು.

“ನಮ್ಮದು ಪ್ರಜಾಸತಾತ್ಮಕ ರಾಷ್ಟ್ರ. ಭಾರತ ಸಂವಿಧಾನವು 74ನೇ ತಿದ್ದುಪಡಿಯ ಮೂಲಕ ಪ್ರಜಾಪ್ರಭುತ್ವ ವಿಕೇಂದ್ರೀಕರಣಕ್ಕೆ ಸ್ಪಷ್ಟವಾದ ಆಧ್ಯಾದೇಶವನ್ನು ನೀಡಿದೆ. ಅದು ದೇಶದ ನಗರ ಪ್ರದೇಶಗಳಲ್ಲಿ ಸ್ವಯಂ ಆಡಳಿತ ಸ್ಥಳೀಯ ಸಂಸ್ಥೆಗಳ ಮೂಲಕ ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ತರಲು ಸಾಂಸ್ಥಿಕ  ಚೌಕಟ್ಟನ್ನು ರಚಿಸಲು ಪ್ರಯತ್ನಿಸಿದೆ. ಆದರೂ ಅದು ಸಂಪೂರ್ಣವಾಗಿ ಅನುಷ್ಠಾನಗೊಂಡಿರಲಿಲ್ಲ. ಬೆಂಗಳೂರು ಮಹಾನಗರಪಾಲಿಕೆಯನ್ನ ಹೊರತುಪಡಿಸಿ ಯಾವುದೇ ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚಿಸಿರಲಿಲ್ಲ. ಇದರಿಂದ ಸ್ಥಳೀಯ ಆಡಳಿತದಲ್ಲಿ ಸಮುದಾಯದ ಭಾಗವಹಿಸುವಿಕೆ ಇರುತ್ತಿರಲಿಲ್ಲ,” ಎಂದು ಹೇಳಿದರು.

ಇದೀಗ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ರಚನೆಯ ಪ್ರಕ್ರಿಯೆಗೆ ಚಾಲನೆ ಕೊಟ್ಟಿರುವುದರಿಂದ ರಾಜ್ಯದಲ್ಲೇ ವಾರ್ಡ್ ಸಮಿತಿ ರಚಿಸಿರುವ ಎರಡನೇ ನಗರವಾಗಿಯೂ ಮಂಗಳೂರು ಹೊರಹೊಮ್ಮಿರುವುದು ಒಳ್ಳೆಯ ವಿಚಾರವೆಂದು ತಿಳಿಸಿದರು. ನಂತರದಲ್ಲಿ ವಾರ್ಡ್ ಸಮಿತಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ಅವರು ವಾರ್ಡ್ ಸಮಿತಿ ಎಂದರೇನು, ರಚನೆಯ ಉದ್ದೇಶವೇನು, ಯಾರು ಸದಸ್ಯರಾಗಬಹುದು, ಸದಸ್ಯರ ಆಯ್ಕೆ ಹೇಗೆ, ಜವಾಬ್ದಾರಿಗಳು ಏನೇನು, ಇದರಿಂದ ಉತ್ತಮ ಜನಸ್ನೇಹಿ ಆಡಳಿತವನ್ನು ಹೇಗೆ ನಿರೀಕ್ಷಿಸಬಹುದು, ಹೀಗೆ ಅನೇಕ ಮಾಹಿತಿಗಳನ್ನು ಕೇಳುಗರಿಗೆ ನೀಡ್ತಾ ಹೋದರು.

ಕೊನೆಯಲ್ಲಿ ‘ನಿಮ್ಮನ್ನು ಕೂಡಾ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ ಹೇಗೆ ಫೀಲ್ ಮಾಡ್ತೀರಿ’ಅಂತ ಕೇಳಿದಾಗ ಅವರು ‘ಇದೊಂದು ಕಷ್ಟದ ವಿಚಾರನೇ. ನಾನು ಅರ್ಜಿಯನ್ನು ಸಂತೋಷದಿಂದ ಹಾಕಿಲ್ಲ. ನಮಗೆ ನಮ್ಮದೇ ಆದ ಕೆಲಸದ ಒತ್ತಡ ಇರುತ್ತೆ. ಅದರ ಮಧ್ಯದಲ್ಲೂ ನಾನು ನನ್ನ ವಾರ್ಡ್, ನನ್ನ ಊರಿನ ಬಗ್ಗೆ ಇರುವ ಸಮಸ್ಯೆಗಳನ್ನು ಪರಿಹರಿಸಬೇಕು. ನನ್ನ ವಾರ್ಡನ್ನ ಅಭಿವೃದ್ಧಿ ಪಥದತ್ತ ಕೊಂಡಯ್ಯಲು ನನ್ನಿಂದ ಎಷ್ಟು ಸಾಧ್ಯವಾಗುತ್ತೊ ಅಷ್ಟು ಸಹಾಯ ಮಾಡಲು ಪ್ರಯತ್ನಿಸುವೆನು. ಇತರರನ್ನೂ ಅರ್ಜಿ ಹಾಕಲು ಪ್ರೇರೆಪಿಸಿದ್ದೇನೆ,’ ಪ್ರತಿಯೊಬ್ಬರೂ ಅವರವರ ಜವಾಬ್ದಾರಿಯನ್ನು ಅರಿತುಕೊಂಡರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಕೆಲವು ಕೇಳುಗರು ದೂರವಾಣಿ ಕರೆ ಮಾಡಿ ಡಾ. ರೋಸ್ ವೀರಾ ಜೊತೆ ಸಂವಾದ ನಡೆಸಿದರು. ಸೈಫುಲ್ಲಾ ಕುತ್ತಾರ್ ಕಾರ್ಯಕ್ರಮ ಸಂದರ್ಶನ ನಡೆಸಿಕೊಟ್ಟರು.

- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್