ಹೃದಯರಾಗದಲ್ಲಿ ತುಳು ರಂಗನಟ ಯಾದವ ಮಣ್ಣಗುಡ್ಡ

ತುಳು ಚಿತ್ರರಂಗದ ರಾಜಕುಮಾರ್ K.N, ಟೇಲರ್ ಇವರ ನಾಟಕ ತಂಡದಲ್ಲಿ ಅಭಿನಯಿಸಿದ್ದು ನನ್ನೊಳಗಿನ ಕಲಾವಿದ ಚಿಗಿತು ಕಲಾರಂಗದಲ್ಲಿ ಬೇರುಬಿಡಲು ಕಾರಣವಾಯಿತು ಎಂದು ರಂಗಭೂಮಿ ಕಲಾವಿದ ಯಾದವ ಮಣ್ಣಗುಡ್ಡ ಮನದುಂಬಿ ನುಡಿದರು.

ಅವರು ರೇಡಿಯೋ ಸಾರಂಗ್’ನಲ್ಲಿ ಆಗಸ್ಟ್ 18ರಂದು ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು.

ವಿಜಯಕುಮಾರ್ ಕೊಡಿಯಾಲ್’ಬೈಲ್ ಇವರ ’ಕಡಲಮಗೆ’ ನಾಟಕದ ಕಥಾಪಾತ್ರ ರಂಗಾಸಕ್ತರ ಮನಗೆದ್ದದ್ದು ನಟನೆಯಿಂದ ಜೀವನ ಸಾಗಿಸಲು ಸಾಧ್ಯ ಎಂದು ವಿಶ್ವಾಸ ಮೂಡಿಸಿತಲ್ಲದೆ ಹಲವಾರು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಲು ಪ್ರೇರಣೆಯಾಯಿತು ಎಂದರು.

ಕೊಡಿಯಾಲ್’ಬೈಲ್ ಯಾದವ ಅವರು ಹುಟ್ಟಿ ಬೆಳೆದ ಊರಾದರೆ ತಾಯಿಯ ಊರು ಮಣ್ಣಗುಡ್ಡ ಎಂಬುದು ಇವರ ಹೆಸರಿನ ಜೊತೆ ಬೆಸೆದು ಖ್ಯಾತಿ ತಂದಿತು ಎಂದು ಸ್ಮರಿಸುತ್ತಾ ಹೆಚ್ಚಿನ ವಿದ್ಯಾಭ್ಯಾಸ ಪಡೆಯದೆ ಇದ್ದದ್ದು ಬದುಕು ಸಾಗಿಸಲು ತೊಡಕಾಯಿತಾದರೂ ತನ್ನದೇ ಸ್ವಂತ ಉದ್ಯಮ ಆಲೂಗಡ್ಡೆ ಚಿಪ್ಸ್ ಮಾರಾಟ ಮಾಡ್ತಾ ಒಂದಷ್ಟು ಸಮಯ ಬಿಝಯಾಗಿದ್ದೆ ಎಂದರು. ಕ್ರಮೇಣ ಉದ್ಯಮದಲ್ಲಿ ಏರಿಳಿತ ಕಂಡು ರಂಗಭೂಮಿಯನ್ನೆ ಬದುಕಿನ ನೆಲೆಯನ್ನಾಗಿಸಿದೆ, ಎಂದರು.

ತುಳು, ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಇವರು ಲಾಕ್’ಡೌನ್’ನಿಂದಾಗಿ ರಂಗಚಟುವಟಿಕೆ ಸ್ತಬ್ಧವಾದಾಗ ಅನಿವಾರ್ಯವಾಗಿ ಬಣ್ಣ ಕಳಚಿದ ಯಾದವ ಅವರು ಆರೋಗ್ಯ ಕಾರ್ಯಕರ್ತನಾಗಿ ಈಗ ದುಡಿಯುತ್ತಿದ್ದೇನೆ ಎಂದರು.

ಕುಟುಂಬದ ಪ್ರೋತ್ಸಾಹ ಬದುಕು ಮುನ್ನಡೆಸಲು ಸಹಕಾರಿಯಾದರೆ ರಂಗಪ್ರದರ್ಶನ ಕಾಣದೆ ರಂಗಾಭಿಮಾನಿಗಳ ದರ್ಶನವಾಗದೆ ನನ್ನೊಳಗಿನ ಕಲಾವಿದ ಸೊರಗುತ್ತಿದ್ದಾನೆ ಎಂದು ಮಾರ್ಮಿಕವಾಗಿ ನುಡಿಯುತ್ತಾ ಕಳವಳ ವ್ಯಕ್ತಪಡಿಸಿದರು.

ರೇಡಿಯೋ ಸಾರಂಗ್ ಕೇಳುತ್ತಿದ್ದೇನೆ, ರೇಡಿಯೋ ಸಾರಂಗ್ ನಮ್ಮ ಜಿಲ್ಲೆಯ ಹೆಮ್ಮೆ ಎಂದ ಇವರು ತೆರೆಮರೆಯ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡುವ ಸಾರಂಗ್ ಇನ್ನಷ್ಟು ಎತ್ತರಕ್ಕೆ ಬೆಳಯಲಿ ಎಂದು ಅಶಿಸಿದರು. ನನ್ನಂತ ಕಲಾವಿದನನ್ನು ಲೋಕಮುಖಕ್ಕ ಪರಿಚಯಿಸಿದ್ದು ಅತ್ಯಂತ ಖುಷಿ ತಂದಿದೆ ಎಂದರು.

ಹಲವಾರು ಕೇಳುಗರ ಕರೆ ಮಾಡಿ ಇವರ ಜೊತೆ ಸಂವಾದಿಸದರು.

- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್