ರೇಡಿಯೋ ಸಾರಂಗ್ 107.8 FM ಮಂಗಳೂರು, ಕಮ್ಯೂನಿಟಿ ರೇಡಿಯೋ ಅಸೋಸಿಯೇಷನ್, ಯೂನಿಸೆಫ್ ಹಾಗೂ ಯುವಾ ಸಹಯೋಗದಲ್ಲಿ "ಯಂಗ್ ವಾರಿಯರ್ಸ್" ಮಾಹಿತಿ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಸೆಪ್ಟಂಬರ್ 7ರಂದು ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರಿನ ಕಸ್ತೂರ್’ಬಾ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪ್ರಸನ್ನ ಮಿತ್ರ ಯುವಜನರಿಗೆ ಕೊರೋನ ವೈರಸ್’ನಿಂದ ಹೇಗೆ ಜಾಗ್ರತೆ ವಹಿಸಬಹುದು ಎಂಬುದರ ಕುರಿತು ಜಾಗೃತಿ ಸಂದೇಶ ನೀಡಿದರು.
“ಕೋವಿಡ್ ವೈರಸ್ ಬರದಂತೆ ತಡೆಗಟ್ಟಲು ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರದಿಂದ ಮಾತ್ರ ಸಾಧ್ಯ. ಆದ್ದರಿಂದ ಹೊರಗಡೆ ಬರುವಂತಹ ಅನಿವಾರ್ಯ ಸಂದರ್ಭದಲ್ಲಿ ಈ ಸೂತ್ರಗಳನ್ನು ಅನುಸರಿಸಿ ಕೋವಿಡ್ ದೂರವಿರಿಸಿ,” ಎಂಬುದಾಗಿ ಸಂದೇಶ ನೀಡಿದರು. ಅಲ್ಲದೆ ಈಗ ಕೋವಿಡ್ ತಡೆಗೆ 3 ಲಸಿಕೆಗಳು ಬಂದಿದ್ದು, 18 ವರ್ಷದ ಮೇಲ್ಪಟ್ಟವರು ಇದನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು. ಮತ್ತು 18 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಇನ್ನೂ ಪರೀಕ್ಷಾ ಹಂತದಲ್ಲಿದೆ. ಲಸಿಕೆಯನ್ನು ಸಮುದಾಯದ ಜನರಿಗೆ ತಲುಪಿಸುವಲ್ಲಿ ಯುವಜನರ ಪಾತ್ರ ಬಹಳಷ್ಟಿದೆ. ಈ ಕುರಿತು ತಾವು ಕಾರ್ಯಪ್ರವೃತ್ತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಡಾ. ಪ್ರಸನ್ನ ಮಿತ್ರ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ರೇಡಿಯೋ ಸಾರಂಗ್’ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆರ್ ಜೆ ರೋಷನ್ ಕ್ರಾಸ್ತ ಕುಲಶೇಖರ ನಿರ್ವಹಿಸಿದರು.
- ಶ್ವೇತಾ ಇಂದಾಜೆ, ರೇಡಿಯೋ ಸಾರಂಗ್