ಗ್ರಾಮೀಣ ಪ್ರತಿಭೆಯನ್ನು ಬೆಳೆಸಿದ ಎ.ಕೆ.ವಿ. ಬೇಂಡೆಲ್ ಮನೆಯಿಂದ ಹೃದಯರಾಗ

“ನೈಜವಾದ ಕಲಾಪ್ರತಿಭೆ ಗ್ರಾಮೀಣ ಪ್ರದೇಶಗಳಲ್ಲಿ ಅಗಾಧವಾಗಿದೆ. ಗ್ರಾಮೀಣ ಪ್ರದೇಶದ ಕಲಾವಿದರು ನಾಟಕ ಕಲೆಯನ್ನು, ಇತರ ಕಲೆಯನ್ನು ಜೀವಂತವಾಗಿಸಿದ್ದಾರೆ. ಆದ್ದರಿಂದ ನಾನು ಗ್ರಾಮೀಣ ಪ್ರದೇಶದಲ್ಲಿ ನನ್ನ ನಾಟಕಗಳನ್ನು ಹೆಚ್ಚು ಪ್ರದರ್ಶಿಸಲು ಸಾಧ್ಯವಾಯಿತು. ಹಳ್ಳಿಯ ಜನರು ಕಲಾವಿದರನ್ನು ಪ್ರೋತ್ಸಾಹಿಸುವ ರೀತಿ ಅನನ್ಯ. ಇದು  500ಕ್ಕೂ ಹೆಚ್ಚು ಕಲಾವಿದರನ್ನು ರೂಪಿಸಲು, ಬೆಳೆಸಲು ಹಾಗೂ 27 ನಾಟಕಗಳನ್ನು ರಚಿಸಲು, ಬರೆಯಲು 700ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಲು ಕಾರಣವಾಯಿತು,” ಎಂದು ಹಿರಿಯ ರಂಗಭೂಮಿ ಕಲಾವಿದ ಎ.ಕೆ.ವಿ. ಬೇಂಡೆಲ್ ಅವರು ನುಡಿದರು.

ಅವರು ಸೆಪ್ಟಂಬರ್ 15ರಂದು ಅವರ ಮನೆಯಿಂದ ಪ್ರಸಾರವಾದ  ರೇಡಿಯೋ ಸಾರಂಗ್’ನ 36ನೇ ಸಂಚಿಕೆಯ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು.

ಅಲ್ಫೊನ್ಸ್ ಕುಟೀನಾ ವರ್ಕಾಡಿ ಎಂಬ ಮೂಲನಾಮವನ್ನು ಹೊಂದಿದ ಇವರು ವರ್ಕಾಡಿ ಪ್ರದೇಶದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿ ತನ್ನ 12ನೇ ವಯಸ್ಸಿನಲ್ಲಿ ದಿ.ರಾಮ ಕಿರೋಡಿಯನ್ ಅವರ “ಈ ಪ್ರಾಯೊಡು ಬರುವಾ” ಎನ್ನುವ ನಾಟಕದ ಮೂಲಕ ರಂಗ ಪ್ರವೇಶಿಸಿದ್ದು 16ನೇ ವಯಸ್ಸಿನಲ್ಲಿ “ಪ್ರೀತಿದ ಪರಿಣಾಮ” ಎನ್ನುವ ತುಳು ನಾಟಾಕವನ್ನು ಬರೆದು ಖ್ಯಾತಿ ಪಡೆದರು. “ಕಳೆದ 55 ವರ್ಷಗಳ ರಂಗಾನುಭವ ನನ್ನ ಬದುಕಿನ ಸೆಲೆಯಾಗಿ ನನಗೆ ಅಪಾರ ಅಭಿಮಾನಿಗಳನ್ನು ಸ್ನೇಹಿತರನ್ನು ಗಳಿಸಿಕೊಟ್ಟಿದೆ,” ಎಂದರು.

“1975ರಲ್ಲಿ ನಾನು ಪೋಲೀಸ್ ಇಲಾಖೆಯನ್ನು ಸೇರಿ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಕೆಲಸ ಸೇರಿದ ಸಮಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಡಾ. ರಾಜ್ ಕುಮಾರ್ ನೈಟ್ ಕಾರ್ಯಕ್ರಮದಲ್ಲಿ ಅಭಿಮಾನಿಗಳ ನೂಕು ನುಗ್ಗಲು ಉಂಟಾದಾಗ ಮೊದಲು ಬೆತ್ತ ಹಿಡಿದು, ಮನಸ್ಸು ಅಳುಕಿದರೂ ಲಾಠಿ ಬೀಸಿದ್ದು, ನಂತರ ಲಾಠಿ ನನ್ನ ಜತೆಯಾದದ್ದು , 40 ವರ್ಷ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಾನು ನಿವೃತ್ತ ಜೀವನ ನಡೆಸ್ತಾ ಇರೋದು ಕನಸೋ ಎಂಬಂತೆ ಭಾವಿಸ್ತಾ ಇದೆ,” ಎಂದು ಮಾರ್ಮಿಕವಾಗಿ ನುಡಿದರು.

“ಪೋಲೀಸ್ ಕೆಲಸದ ಜೊತೆ ನನ್ನ ಮನೆಯವರ, ಸಹೋದ್ಯೋಗಿಗಳ ಸಹಕಾರ ನನ್ನ ನಾಟಕ ಕಲೆಯ ಮುನ್ನಡೆಗೆ ಭದ್ರ ನೆಲೆ ಒದಗಿಸಿತಲ್ಲದೆ ‘ಬೊಗ್ಸಾಣೆ’ (ಕೊಂಕಣಿ), ‘ಹಲೋ ಯಮ’ (ಕನ್ನಡ), ಮತ್ತು ‘ಮಾರಿಬಲೆ’ (ತುಳು) ಸಿನೆಮಾಗಳಲ್ಲಿ ಅಭಿನಯಿಸಿ ‘ಎಂಚಲಾ ಬದ್ಕೊಲಿ’ ಧಾರಾವಾಹಿಗೆ ಸಹನಿರ್ದೇಶಕನಾಗಲು ಕಾರಣವಾಯಿತು,” ಎಂದರು. ದೆಹಲಿಯ ಕನ್ನಡ ಸಂಘದ ವತಿಯಿಂದ ಕರ್ನಾಟಕ ವಾರ್ತಾ ಇಲಾಖೆ ಸಾದರಪಡಿಸಿದ ನಾಟಕ 'ರೊಟ್ಟಿ ಋಣ' ನಾಟಕದ ಅಭಿನಯಕ್ಕೆ ಉತ್ತಮ ನಟನಾ ಪ್ರಶಸ್ತಿ ಲಭಿಸಿರುತ್ತದೆ.

ನಾಟಕರಚನೆ, ಗೀತರಚನೆ, ನಿರ್ದೇಶನ, ಕವಿತೆ, ಲೇಖನ ಬರೆಯುವುದು ಇವರ ಹವ್ಯಾಸವಾಗಿದ್ದು ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನ, ಕವಿತೆಗಳು ಪ್ರಕಟಾವಾಗಿದ್ದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಮಂಗಳೂರಿನ ಬಜ್ಜೋಡಿ ಎಂಬಲ್ಲಿ ಪ್ರಸ್ತುತ ನಿವೃತ್ತ ಜೀವನವನ್ನು ತನ್ನ ಕುಟುಂಬದೊಂದಿಗೆ ಕಳೆಯುತ್ತಿದ್ದು ಪುಟ್ಟ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. 

“ಹಳೆಯ ಗೆಳೆಯರನ್ನು ನೇರಪ್ರಸಾರದಲ್ಲಿ ಫೋನ್ ಮೂಲಕ ಮಾತನಾಡಿಸಿದ್ದು ಇಂದಿನ ಅವಿಸ್ಮರಣೀಯ ಅನುಭವವಾಗಿದೆ,” ಎಂದು ಹೇಳುತ್ತಾ, “ಇದು ನನಗೆ ಇನ್ನೂ ನಾಟಕರಂಗದಲ್ಲಿ ಮುಂದುವರೆಯಲು ಆಸೆ, ಆಸಕ್ತಿ ತಂದಿದೆ,” ಎಂದು ಕಣ್ಣಾಲಿ ತುಂಬಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಲವಾರು ಕೇಳುಗರು ಅವರ ಜೊತೆ ಮಾತನಾಡಿದರು. ರೇಡಿಯೋ ಸಾರಂಗ್ ವತಿಯಿಂದ ಶ್ರೀ ಬೇಂಡೆಲ್ ಅವರಿಗೆ ಗೃಹ ಸನ್ಮಾನ ನಡೆಸಲಾಯಿತು.

- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್