“ಹಳ್ಳಿಯ ಶಾಲೆಯಲ್ಲಿ ಕಲಿಯುವ ಬಡಮಕ್ಕಳ ಕಲಾಸಕ್ತಿಯನ್ನು ಅರಳಿಸಿ ಪೋಷಿಸಿದರೆ ಅದ್ಭುತ ಕಲಾವಿದರ ಸೃಷ್ಟಿ ಸಾಧ್ಯವಾಗುತ್ತದೆ. ಇದಕ್ಕೆ ನಾನು ತರಬೇತಿ ನೀಡಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಮಾಡಿದ ಸಾಧನೆಯೇ ಮಾದರಿ,” ಎಂದು ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಮಾಧವ ನಾವಡ ವರ್ಕಾಡಿ ಅವರು ನುಡಿದರು.
ಅವರು ಸೆಪ್ಟೆಂಬರ್ 22ರಂದು ರೇಡಿಯೋ ಸಾರಂಗ್’ನ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ವರ್ಕಾಡಿಯ ನಾವಡರ ಬೈಲು ಇವರು ಜನಿಸಿದ ಊರಾದರೆ, ಜಪ್ಪುಮಜಿಲ ಇವರು ನೆಲೆನಿಂತ ಊರು. ವರ್ಕಾಡಿಯ ಶ್ರೀ ಕಾವಿಸುಬ್ರಮಣ್ಯ ದೇವಸ್ಥಾನದಲ್ಲಿ ಭಜನೆ ಹಾಡುತ್ತಾ, ಪುರಾಣ ಕಥೆಗಳ ವಾಚನ ಪಠಣ ಮಾಡುತ್ತಾ ಬೆಳೆದ ಇವರಲ್ಲಿ ಯಕ್ಷಗಾನ ಆಸಕ್ತಿ ಚಿಗುರಲು ದೇವಸ್ಥಾನದ ಹೆಸರಲ್ಲಿ ಸ್ಥಾಪಿತವಾದ ಯಕ್ಷಗಾನ ಮಂಡಳಿ ಕಾರಣವಾಯಿತು. ಸಮರ್ಥ ಯಕ್ಷಗುರುಗಳ ತರಬೇತಿ ದೊರೆತದ್ದು ಹಾಗೂ ವಿದ್ಯಾರ್ಥಿ ದೆಸೆಯಲ್ಲಿ ಶಾಲಾ ವಾರ್ಷಿಕೋತ್ಸವಕ್ಕೆ ಮಾಡಿದ ಯಕ್ಷಗಾನ ಹಿರಣ್ಯಾಕ್ಷ ಪಾತ್ರಕ್ಕೆ ಸಿಕ್ಕ ಪ್ರೋತ್ಸಾಹ ಯಕ್ಷಗಾನ ಕಲಿಕೆಯ ಉತ್ಸಾಹಕ್ಕೆ ಅಮೃತ ಸಿಂಚನವಾಯಿತು, ಅಲ್ಲದೆ ಮುಂದೆ ಕಂಸ, ರಕ್ತಬೀಜ, ದೇವೇಂದ್ರ, ಭೀಷ್ಮ, ನರಕಾಸುರ ಇನ್ನಿತರ ಪಾತ್ರಗಳಲ್ಲಿ ಮಿಂಚಲು ಕಾರಣವಾಯಿತು, ಎಂದು ನುಡಿದರು.
ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನು ಮೋಜಿನ ಗಣಿತ, ಪರಿಸರ ಗೀತೆ ಮೊದಲಾದ ಇವರೇ ರಚಿಸಿದ ಪದ್ಯಗಳಿಂದ ಸರಳವಾಗಿ ಕಲಿಸುವ ಪ್ರಯತ್ನ ಫಲಪ್ರದವಾಯಿತಲ್ಲದೆ ಯಕ್ಷಗಾನದ ಪಾಠ ಕಲಿಕೆ ಸಹ ಯಸಸ್ಸಿನ ಹಾದಿ ಹಿಡಿದದ್ದು ತನ್ನ ಕಲಿಕೆಯ ಶ್ರೇಷ್ಟತೆಗೆ ಸಂದ ಹಿರಿಮೆ, ಎಂದರು.
ಈಗ 61ನೇ ವರ್ಷದ ಇಳಿವಯಸ್ಸಿನಲ್ಲೂ ಮಕ್ಕಳಿಗೆ ಯಕ್ಷಗಾನ ಕಲಿಸುವುದೆಂದರೆ ಇವರು ಯುವಕರಾಗುತ್ತಾರೆ; ಮಕ್ಕಳ ಜೊತೆ ಮಗುವಾಗುತ್ತಾರೆ. ತನ್ನ ದೇಹದ ಅಸ್ವಸ್ಥತೆ ಯಕ್ಷಗಾನದ ಪಾತ್ರ ನಿರ್ವಹಣೆಗೆ ತೊಡಕಾದರೂ ಪ್ರಸ್ತುತ ಸರಯೂ ಯಕ್ಷಬಾಲಾವೃಂದ ಮಕ್ಕಳ ಮೇಳ ಕೋಡಿಕಲ್ ಇದರ ಹಿಮ್ಮೇಳ ವಾದಕನಾಗಲು ಮೃದಂಗ ತನ್ನ ಕೈಹಿಡಿದು ಯಕ್ಷರಂಗದೆಡೆ ನಡೆಸಿತು ಎಂದು ಹೇಳುತ್ತಾ ತನ್ನ ಯಕ್ಷ ಪ್ರೇಮವನ್ನು ಸಾದರಪಡಿಸಿದರು.
ಇತ್ತೀಚೆಗೆ ಯಕ್ಷಗಾನದಲ್ಲಿ ಕೆಲವೊಂದು ಅನಗತ್ಯ ವಿಚಾರಗಳು ಮಿಳಿತಗೊಂಡಿರುವುದು ಖೇದಕರ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ನುಡಿಯುತ್ತಾ ದೀರ್ಘಾವಧಿಯ ಯಕ್ಷಗಾನ ಪ್ರದರ್ಶನಕ್ಕೆ ಪ್ರೇಕ್ಷಕರ ಅನುಪಸ್ಥಿತಿಯಿಂದ ಕಾಲಮಿತಿ ಯಕ್ಷಗಾನ ಬೆಳೆಯಲು ಕಾರಣವಾದರೂ, ಕಾಲಮಿತಿ ಯಕ್ಷಗಾನ, ಯಕ್ಷಗಾನದ ಒಟ್ಟಾರೆ ಬೆಳವಣಿಗೆ ಕುಂಠಿತಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು. ತನಗೆ ಪ್ರೋತ್ಸಾಹ ನೀಡಿದ ಸನ್ಮಿತ್ರರನ್ನು ನೆನೆಪಿಸಿದ ಅವರು ತನ್ನ ಭಾಗವತಿಕೆ, ಸಂಭಾಷಣೆಯ ಮೂಲಕ ಕೇಳುಗರನ್ನು ರಂಜಿಸಿದರು.
ಹಲವಾರು ಕೇಳುಗರು ಕರೆ ಮಾಡಿ ಇವರ ಜೊತೆ ಮಾತನಾಡಿದರು. ಕೊನೆಯಲ್ಲಿ ಕೊರೋನಾ ರೋಗದ ಜಾಗೃತಿಯನ್ನು ಮೂಡಿಸಲು ಕೊರೋನಾ ಘೋಷವಾಕ್ಯ ನುಡಿದರು.
- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್