ಕೈಯ ಸ್ವಾಧೀನವನ್ನೇ ಕಳೆದುಕೊಂಡಿದ್ದ ಮಗುವೊಂದು ಕೈ ಎತ್ತಿ ರವಿ ಮಾಮ ಟಾಟಾ ಎಂದಾಗ......

ರವಿ ಕಟಪಾಡಿ. ಬಹುಶಃ ಈ ಹೆಸರು ಕೇಳಿರದ ಕರಾವಳಿಗರು ತುಂಬಾ ಕಡಿಮೆ. ಪ್ರತೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಅನ್ನಾಹಾರ, ನೀರು ಬಿಟ್ಟು ವಿಶೇಷ ವೇಷ ಹಾಕಿ, ಅದರಲ್ಲಿ ಬರುವಂತಹ ಹಣವನ್ನು ಅನಾರೋಗ್ಯ ಮಕ್ಕಳ ಚಿಕಿತ್ಸೆಗೆ ಕೊಡುವುದು ರವಿ ಕಟಪಾಡಿಯವರ ವಿಶೇಷ ಗುಣ. ಕೋನ್ ಬನೆಗಾ ಕರೋಡ್’ಪತಿ  ಮೊತ್ತವು ಸೇರಿ ಇದುವರೆಗೆ ಸುಮಾರು 40ಕ್ಕಿಂತಲೂ ಅಧಿಕ ಮಕ್ಕಳಿಗೆ ಸುಮಾರು 83 ಲಕ್ಷದಷ್ಟು ಸಹಾಯ ನೀಡಿರುವ ರವಿ ಕಟಪಾಡಿಯವರು ಸೆಪ್ಟಂಬರ್ 28ರಂದು ರೇಡಿಯೋ ಸಾರಂಗ್ ರೇಡಿಯೋ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಜೀವನ ಪ್ರಯಾಣವನ್ನು ಹಂಚಿಕೊಂಡರು.

ತನಗಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎಂಬ ಭಾವನೆಯೊಂದಿಗೆ ಸೇವೆ ಸಲ್ಲಿಸುವ ರವಿಯವರು ತನ್ನ ಸೇವೆಯ ಹಿಂದೆ ರವಿ ಫ್ರೆಂಡ್ಸ್ ಕಟಪಾಡಿ ತಂಡದ ಸರ್ವ ಸದಸ್ಯರ ನೆರವನ್ನು ಸ್ಮರಿಸಿಕೊಂಡರು. ತನಗಿರುವ 3 ಸೆಂಟ್ಸ್ ಜಾಗ, ಸೆಂಟ್ರಿಂಗ್ ಉದ್ಯೋಗ  ಜೀವನಕ್ಕೆ ಸಂತೋಷ ನೀಡುತ್ತಿದೆ. ತನ್ನ ದುಡಿಮೆಯ ಹಣವನ್ನೂ ಕೂಡ ಸಮಾಜ ಕಾರ್ಯಕ್ಕೆ ವಿನಿಯೋಗಿಸುವ ಅವರ ಗುಣದ ಬಗ್ಗೆ  ರವಿಯವರ ಆಪ್ತರೊಬ್ಬರು ಕರೆ ಮಾಡಿ ತಿಳಿಸಿದರು.

ಕೈಯ ಸ್ವಾಧೀನವನ್ನೆ ಕಳೆದುಕೊಂಡ ಮಗುವೊಂದು ಈಗ ಕೈ ಎತ್ತಿ ರವಿ ಮಾಮ ಟಾಟ ಎಂದಾಗ ಸೇವೆಯ ಸಾರ್ಥಕ ಭಾವನೆ ಮೂಡುತ್ತದೆ, ಎಂದರು ರವಿ. “ಕೇವಲ ನನ್ನ ಜೊತೆ ಸೆಲ್ಫಿ ತೆಗೆಯುವುದು ಮಾತ್ರವಲ್ಲ ಅದರಿಂದ ಇತರರಲ್ಲೂ ಸೇವೆ ಮಾಡುವ ಸ್ಫೂರ್ತಿಯನ್ನು ಮೂಡಿಸಬೇಕಾಗಿದೆ,” ಎಂದು ಒಂದು ಗಂಟೆಯ ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ರವಿ ಕಟಪಾಡಿಯವರು ತನ್ನ ಅನೇಕ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅನೇಕ ಕೇಳುಗರು ಕರೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ನಂತರ ಸಾರಂಗ್ ವತಿಯಿಂದ ರವಿ ಕಟಪಾಡಿಯವರನ್ನು ಸನ್ಮಾನಿಸಲಾಯಿತು. ಮೆಂಗಲೋರ್ ಜೆಸ್ಯುಯಿಟ್ ಎಜುಕೇಶನ್ ಸೊಸಾಯ್ಟಿಯ ಕಾರ್ಯದರ್ಶಿ ಫಾ. ಸಿರಿಲ್ ಡಿ’ಮೆಲ್ಲೋ, ಸಾರಂಗ್ ನಿರ್ದೇಶಕ ಡಾ. (ಫಾ.) ಮೆಲ್ವಿನ್ ಪಿಂಟೊ ಉಪಸ್ತಿತರಿದ್ದರು. RJ ಕಾರ್ಯಕ್ರಮ ನಿರ್ವಹಿಸಿದರು.

- ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್