ಗ್ರಾಮಗಳ ನಡುವೆ ಸಂಪರ್ಕದ ಕೊಂಡಿ ಯಾದ ಗ್ರಾಮ ಸೇತು: ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ

ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಲಿ. ಜನಪರವಾದ ಯೋಜನೆಗಳು ಜಾರಿಯಾದಾಗ ಮಾತ್ರ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂದು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಹೇಳಿದರು. ಇವರು ಜುಲಾಯಿ14ರಂದು ರೇಡಿಯೋ ಸಾರಂಗ್ ಆಯೋಜಿಸಿದ್ದ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬುದು 1300-1500 ಜನ ವಾಸಿಸುವ ಪುಟ್ಟ ಹಳ್ಳಿ.  ಆದರೆ ಮಳೆಗಾಲ ಬಂದಾಗ ಜನರ ಬದುಕು ದುರ್ಲಭ ವಾಗುತ್ತದೆ.  ಇಲ್ಲಿ ಹರಿಯುವ ಹೊಳೆಗೆ ಸೇತುವೆ ಇಲ್ಲದಿರುವುದರಿಂದ ಇಲ್ಲಿನ ಜನರು ಮೂಲಭೂತ ಸೌಕರ್ಯಗಳನ್ನು ಹೊಂದಲು ಕಷ್ಟಪಡುತ್ತಿದ್ದರು.  ಹೀಗಾಗಿ ಸೇತುವೆ ನಿರ್ಮಿಸಬೇಕು ಎಂದು ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಸೇತುವೆ ಕನಸಾಗಿಯೇ ಉಳಿದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೂಚನೆ ನೀಡಿದ್ದರೂ ಜನಪ್ರತಿನಿಧಿಗಳ ಅಸಡ್ಡೆ ಯಿಂದ ಸೇತುವೆಯ ಕನಸು ಕಮರಿ ಹೋಗಿತ್ತು. ಆಗ ಗ್ರಾಮಸ್ಥರೇ ಸೇರಿ ಯೋಜನೆಯೊಂದನ್ನು ರೂಪಿಸಿ,ಸರಕಾರದ ಯಾವುದೇ ಅನುದಾಗಳಿಲ್ಲದೇ ಊರವರ ಸಹಕಾರ ಹಾಗೂ ಶ್ರಮದಾನದೊಂದಿಗೆ ಸೇತುವೆ ನಿರ್ಮಾಣ ಮಾಡಿ ಗ್ರಾಮಗಳ ನಡುವಿನ ಕೊಂಡಿಯಾಗುತ್ತದೆ.  

ಊರಿನ ಹಲವು ಗ್ರಾಮಸ್ಥರು ಇವರಿಗೆ ಕರೆ ಮಾಡಿ ತಮ್ಮ ಧನ್ಯವಾದಗಳನ್ನು ತಿಳಿಸಿದರು.  ಎಂಡೋಸಲ್ಫಾನ್ ಹೋರಾಟಗಾರ ಶ್ರೀಧರ್ ಗೌಡ ಕೊಕ್ಕಡ ಶುಭಾಶಯಗಳನ್ನು ತಿಳಿಸಿದರು. ಶೋತೃಗಳು ಕರೆಮಾಡಿ ತಮ್ಮ ಊರಿನಲ್ಲಿರುವ ರಸ್ತೆಯ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಳಿಕೊಂಡರು.

ಮೊಗ್ರದಲ್ಲಿ ನಿರ್ಮಾಣವಾಯಿತು "ಗ್ರಾಮ ಸೇತು "

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಪುಟ್ಟ ಹಳ್ಳಿ. ಸುಮಾರು  1300-1500 ಜನಸಂಖ್ಯೆ ಇರುವ ಪ್ರದೇಶ. ಈ ಊರಿನ ವ್ಯಾಪ್ತಿಗೆ ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಸೇರಿದಂತೆ ಒಂದೆರಡು ಪುಟ್ಟ ಪುಟ್ಟ ಊರು ಬರುತ್ತವೆ. ಊರಿನ ಕೇಂದ್ರ ಮೊಗ್ರ ಎಂಬ ಪ್ರದೇಶ. ಊರಿನ ಮತದಾನ ಕೇಂದ್ರವೂ ಮೊಗ್ರ ಶಾಲೆ. ಆದರೆ ಕಳೆದ ಅನೇಕ ವರ್ಷಗಳಿಂದ ಇಲ್ಲಿಗೆ ಸಂಪರ್ಕದ ವ್ಯವಸ್ಥೆ ಇರಲಿಲ್ಲ. ಇದೀಗ ಜನರಿಂದ ಜನರಿಗಾಗಿ ಜನರೇ "ಗ್ರಾಮ ಸೇತು" ಎಂಬ ಹೆಸರಿನಲ್ಲಿ  ಕಾಲು ಸಂಕ ರಚನೆ ಮಾಡಿದ್ದಾರೆ. ಈ ಮೂಲಕ ನಾಡಿಗೆ ಮಾದರಿಯಾಗಿದ್ದಾರೆ.

ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಮೊಗ್ರ ಸರಕಾರಿ ಶಾಲೆ- ಆರೋಗ್ಯ ಉಪಕೇಂದ್ರ-ಅಂಗನವಾಡಿ- ಮೊಗ್ರ‌‌  ಕನ್ನಡ ದೇವತೆ ಯಾನೆ ಪುರುಷ  ದೈವಸ್ಥಾನ, ಭಜನಾ ಮಂದಿರ ಇದೆ. ಆದರೆ ಈ ಕೇಂದ್ರವನ್ನು  ಸಂಪರ್ಕ ಮಾಡಲು, ಬಹುಪಾಲು ಜನರಿಗೆ ಕಷ್ಟವಾಗುತ್ತದೆ. ಕಾರಣ ಇಲ್ಲಿ ಹರಿಯುವ ಹೊಳೆ. ಇದುವರೆಗೂ ಇಲ್ಲಿಗೆ ಸೇತುವೆ ಆಗಿಲ್ಲ. ಈ ಕಾರಣದಿಂದ ಶಾಲೆಗೆ ಬರುವ ಮಕ್ಕಳಿಗೆ ಹೊಳೆ ದಾಟಲು ಕಷ್ಟವಾಗುತ್ತದೆ. ಮಹಿಳೆಯರಿಗೂ ಹೊಳೆ ದಾಟಲು ಆಗುವುದಿಲ್ಲ. ಇನ್ನು ಮಳೆಗಾಲ ಆರೋಗ್ಯ ಸಂಬಂಧಿ ವಿಷಯಗಳಿಗೂ ಕಷ್ಟವಾಗುತ್ತದೆ. ಹೀಗಾಗಿ ಸೇತುವೆ ರಚನೆಯಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇಲ್ಲಿನ ಜನರಿಂದ ಇದೆ. 2006  ರಿಂದಲೂ ವಿವಿಧ ಮಾಧ್ಯಮಗಳ ಮೂಲಕ, ಹಾಗೂ ನೇರವಾಗಿಯೂ ಜನಪ್ರತಿನಿಧಿಗಳಿಗೆ ಇಲ್ಲಿನ  ಜನರು ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಇದುವರೆಗೂ ಸೇತುವೆ ರಚನೆ ಆಗಿಲ್ಲ.  ಜನಪ್ರತಿನಿಧಿಗಳು ಚುನಾವಣೆಯ ಹೊತ್ತಿನಲ್ಲಿ ಭರವಸೆಯನ್ನು ಮಾತ್ರವೇ ನೀಡುತ್ತಾರೆ. ಆದರೆ ಸೇತುವೆ ಕನಸಾಗಿಯೇ ಉಳಿದಿತ್ತು. ಇದಕ್ಕಾಗಿ ವಿವಿಧ ಮಾಧ್ಯಮಗಳ ಮೂಲಕ ಸರಕಾರವನ್ನೂ ಗಮನ ಸೆಳೆಯಲಾಗಿತ್ತು. ಹಾಗಿದ್ದರೂ ಸೇತುವೆ ಆಗಲಿಲ್ಲ.

ಇದುವರೆಗೂ ಈ ಹೊಳೆ ದಾಟಲು ಗ್ರಾಮ ಪಂಚಾಯತ್‌ ಅಡಿಕೆ ಮರದ ಪಾಲವನ್ನು ಹಾಕುತ್ತಿತ್ತು. ಇದರ ಮೇಲೆ ಶಾಲಾ ಮಕ್ಕಳು ದಾಟಬೇಕಿತ್ತು, ಮಹಿಳೆಯರೂ ದಾಟಬೇಕು. ಊರವರ ಸುರಕ್ಷತೆ ಹಾಗೂ ಮಳೆಗಾಲ ದ್ವಿಚಕ್ರ ಸವಾರರಿಗೆ ಅನುಕೂಲವಾಗುವಂತೆ  ಈ ಬಾರಿ ಸೇತುವೆ, ಅಡಿಕೆ ಮರದ ಪಾಲದ ಬದಲಾಗಿ ಕಬ್ಬಿಣದ  ಕಾಲು ಸಂಕವನ್ನು ಊರವರೇ  ನಿರ್ಮಿಸಿ  ದ್ವಿಚಕ್ರ ವಾಹನ ಸಹಿತ ಊರವರು ಭದ್ರತೆಯಿಂದ ನಡೆದಾಡುವಂತೆ ಮಾಡಲು ಯೋಜನೆ ರೂಪಿಸಿ, ತೂಗುಸೇತುವೆಗಳ ಸರದಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಳ್ಯದ ಗಿರೀಶ್ ಭಾರಧ್ವಾಜ್ ಅವರ ಪುತ್ರ ಪತಂಜಲಿ ಭಾರಧ್ವಾಜ್ ಅವರ ನೇತೃತ್ವದಲ್ಲಿ  ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗುವಂತೆ ಕಬ್ಬಿಣದ ಕಾಲು ಸಂಕ  ರಚನೆ ಮಾಡಲು ಮಾತುಕತೆ ನಡೆಸಿ ಅಂದಾಜುಪಟ್ಟಿ ‌ತಯಾರಿಸಿ ಇದೀಗ ಕಬ್ಬಿಣದ ಕಾಲು ಸಂಕವನ್ನು  ನಿರ್ಮಿಸಿದ್ದಾರೆ. ಇದಕ್ಕಾಗಿ ಊರ ಜನರು ಶ್ರಮದಾನದ ಮೂಲಕ ನೆರವು ಹಾಗೂ ಧನ ಸಹಾಯ ಮಾಡಿದರೆ, ಪರವೂರಿನ ಅನೇಕ ದಾನಿಗಳು ನೆರವು ನೀಡಿದ್ದಾರೆ. ಖಾಸಗಿ ಕಂಪನಿಗಳೂ ಸಹಾಯ ಮಾಡಿವೆ. ಸುಮಾರು 1.3 ಲಕ್ಷರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. 

 ಇದೇ ಸೇತುವೆ ಬೇಡಿಕೆ ಹಾಗೂ ರಸ್ತೆ ಬೇಡಿಕೆ ಮುಂದಿಟ್ಟು ವಿವಿಧ ಹೋರಾಟಗಳನ್ನು ಅನೇಕ ವರ್ಷಗಳಿಂದ  ಮಾಡಿರುವ ಗ್ರಾಮಸ್ಥರು ಕಳೆದ ಬಾರಿಯ ಗ್ರಾ ಪಂ ಚುನಾವಣೆಯ ಸಂದರ್ಭ ಹೋರಾಟದ ನೆಲೆಯಲ್ಲಿಯೇ ಸ್ಫರ್ಧೆ ಮಾಡಿದ್ದರು. ಇದೀಗ ಸರಕಾರದ ಯಾವ ಅನುದಾನಗಳೂ ಇಲ್ಲದೆ ಗ್ರಾಮಸ್ಥರೇ ಕಾಲು ಸಂಕ ನಿರ್ಮಾಣ ಮಾಡಿ ಸದ್ಯ ಮಕ್ಕಳು ಹಾಗೂ ಮಹಿಳೆಯರು ಸುರಕ್ಷಿತವಾಗಿ ಓಡಾಡುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

 ಈ ಸೇತುವೆ ರಚನೆಯ ಹಿಂದೆ  ಯುವಕರ ತಂಡವು ಸತತ ಕೆಲಸ ಮಾಡಿತ್ತು. ಜೂ.5 ರಂದು ಅಂದಾಜುಪಟ್ಟಿ ತಯಾರಿಸಿ ಜೂ.24 ರಂದು ಕಾಮಗಾರಿ ಮುಕ್ತಾಯಗೊಂಡಿಡ್ದು ಅತೀ ವೇಗದಲ್ಲಿ ಈ ಕಾಮಗಾರಿ ಮುಗಿದಿರುವುದು  ಗ್ರಾಮಸ್ಥರ ಕಾಳಜಿ ಹಾಗೂ ಸೇತುವೆಯ ಬೇಡಿಕೆಗೆ ಸಾಕ್ಷಿಯಾಗಿದೆ. ಈ ಸೇತುವೆ ಸುಮಾರು 19.2 ಮೀಟರ್‌ ಉದ್ದವಿದ್ದು ಸುಮಾರು 1.2 ಮೀಟರ್‌ ಅಗಲಿವಿದೆ. ನಡೆದಾಡುವುದು  ಮಾತ್ರವಲ್ಲ ದ್ವಿಚಕ್ರ  ವಾಹನ ಕೂಡಾ ಓಡಾಡಬಹುದಾಗಿದೆ.

- ಶ್ವೇತಾ ಇಂಡಾಜೆ, ರೇಡಿಯೋ ಸಾರಂಗ್