ನಿರಂತರ ಪ್ರಯತ್ನವೇ ಸಾಧನೆಯ ಪ್ರೇರಕ ಶಕ್ತಿ: ರಾಮಕೃಷ್ಣ ಶಿರೂರು

“ನನ್ನ ತಂದೆ ಶಿಕ್ಷಕ ವೃತ್ತಿಯಲ್ಲಿದ್ದದರಿಂದ  ನನಗೂ  ಸಹ  ಶಿಕ್ಷಕನಾಗಲು  ಆಸಕ್ತಿ ಹುಟ್ಟಿತು. ಮಕ್ಕಳಿಗೆ  ಜ್ಞಾನ ಹಂಚುವ  ಈ ವೃತ್ತಿ ನಿಜಕ್ಕೂ ಶ್ರೇಷ್ಠ,” ಎಂದು ಶಿಕ್ಷಕ ಹಾಗೂ ಸಾಹಿತ್ಯ  ಸಂಘಟಕ  ರಾಮಕೃಷ್ಣ ಶಿರೂರು ಅವರು ಭಾವತುಂಬಿ  ನುಡಿದರು.

ಅಕ್ಟೋಬರ್ 20ರಂದು ಬುಧವಾರ  ರೇಡಿಯೋ ಸಾರಂಗ್’ನ  ಹೃದಯರಾಗ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಮೂಲತ  ಉಡುಪಿ ತಾಲೂಕಿನ ಶಿರೂರಿನ  ರಾಮಕೃಷ್ಣ ಇವರು  ಮೇಲ್ಪಂಕ್ತಿ ಶಾನುಭೋಗರ ಮನೆತನದ  ಹಿನ್ನೆಲೆಯುಳ್ಳವರು . ಎಂ.ಎ. ಬಿ.ಎಡ್. ಪದವೀಧರರಾದ ಇವರು ಹಿಂದಿ ಭಾಷೆಯಲ್ಲಿ ರಾಜಭಾಷ ವಿದ್ವಾನ್ ಆಗಿದ್ದಾರೆ. ಕಳೆದ 26 ವರುಷಗಳಿಂದ  ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ  ಇವರು ಶಾಲಾ  ಮಕ್ಕಳಿಗಾಗಿ  ಸಾಹಿತ್ಯ, ಸಂಗೀತ, ಯಕ್ಷಗಾನ, ಕೀರ್ತನ, ಸಾಂಸ್ಕತಿಕ ಸಂಘಟನೆಯಾಗಿ ಸಾಹಿತ್ಯ ಸೌರಭ ಆರಂಭಿಸಿದ್ದರಿಂದ  ಹಲವಾರು ವಿದ್ಯಾರ್ಥಿಗಳನ್ನು ಕಲಾರಂಗಕ್ಕೆ ಪರಿಚಯಿಸಲು ಸಾಧ್ಯವಾಯಿತು ಎಂದು  ಹೇಳಿದರು.

ಹಲವಾರು ಭಜನಾ ಸಪ್ತಾಹಗಳಲ್ಲಿ ಭಾಗವಹಿಸಿದ್ದು ಸಂಗೀತ ಆಸಕ್ತಿ ಚಿಗುರಲು ಕಾರಣವಾಯಿ ಅಲ್ಲದೆ  ಹಾರ್ಮೋನಿಯಂ ವಾದಕನಾಗಲು  ಸಾಧ್ಯವಾಯಿತು ಎಂದರು.

ಪ್ರೌಢಶಾಲಾ  ಸಹಶಿಕ್ಷಕರ  ಬಗ್ಗೆ ವೇತನ ಹಾಗೂ ಇನ್ನಿತರ ಸೌಲಭ್ಯಕ್ಕಾಗಿ ಹೋರಾಟ ನಡೆಸಲು ಸ್ಥಾಪಿಸಿದ ಪ್ರೌಢಶಾಲಾ  ಸಹಶಿಕ್ಷಕರ ಸಂಘದ ಅಧ್ಯಕ್ಷನಾದದ್ದು ಶಿಕ್ಷಕರ ಸಮಸ್ಯೆ ಬಗ್ಗೆ ಹೋರಾಡಲು ಶಕ್ತಿ  ನೀಡಿತು, ಎಂದರು.

ದಣಿವರಿಯದೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಫಲವಾಗಿ  ಸಾಮಾಜಿಕವಾಗಿ  ಉತ್ತಮ ಶಿಕ್ಷಕ  ರಾಜ್ಯಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿ ಗೌರವಗಳು ಲಭಿಸಿದ್ದು ಶ್ರಮಕ್ಕೆ ಸಂದ  ಪ್ರತಿಫಲ  ಎಂದು ಮಾರ್ಮಿಕವಾಗಿ ನುಡಿದರು.

ಭಕ್ತಿಗೀತೆ, ಭಾವಗೀತೆ ಹಾಡಿ ಕವಿತಾವಾಚನ ಮಾಡಿ ಕೇಳುಗರೊಂದಿಗೆ ಮಾತನಾಡಿ ರಾಮಕೃಷ್ಣ ಶಿರೂರು ಅವರು ಖುಷಿಪಟ್ಟರು.

- ಎಡ್ವರ್ಡ್ ಲೋಬೊ ರೇಡಿಯ ಸಾರಂಗ್