ಪ್ರೂಫ್ ರೀಡಿಂಗ್ ಮಾಡುತ್ತಾ ಸಾಹಿತಿಯಾದೆ: ಚಾರ್ಲಿ ಡಿ’ಸೋಜಾ

“ಹಲವಾರು ಬರಹಗಾರರ ಲೇಖನದ ಪ್ರೂಫ್ ರೀಡಿಂಗ್ ಮಾಡುತ್ತಾ, ನಾನು ಉದ್ಯೋಗಿಯಾಗಿದ್ದ ’ರಾಕ್ಣೊ’ ಪತ್ರಿಕಾ ಕಛೇರಿಗೆ ಬಂದ ಬಂದ ಸಾಹಿತಿಗಳ ಸಹವಾಸ ನನ್ನಲ್ಲಿ ಸಾಹಿತ್ಯಾಸಕ್ತಿ ಚಿಗುರಲು ಕಾರಣವಾಯಿತು,” ಎಂದು ಕವಿ, ಸಾಹಿತಿ ಚಾರ್ಲಿ ಡಿ’ಸೋಜಾ ವಾಮಂಜೂರು ಅಭಿಪ್ರಾಯಪಟ್ಟರು.

ಅವರು ಅಕ್ಟೋಬರ್ 11ರಂದು ರೇಡಿಯೋ ಸಾರಂಗ್’ನ ’ತಾಳೊ ಉಮಾಳೊ’ ಕೊಂಕಣಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮೂಲತ: ಕೊಡಿಯಾಲ್’ಬೈಲ್ ವಾರ್ಡಿನ ಮಣ್ಣಗುಡ್ಡ ನಿವಾಸಿಯಾಗಿ ತನ್ನ ಬಾಲ್ಯದ ದಿನಗಳನ್ನು ಕಳೆದ ಚಾರ್ಲಿ ಇವರು ಯೆಯ್ಯಾಡಿ, ದೇರೆಬೈಲ್ ಮುಂತಾದ ಊರುಗಳಲ್ಲಿ ನೆಲೆಸಿ ಪ್ರಸ್ತುತ ವಾಮಂಜೂರು ನಿವಾಸಿಯಾಗಿದ್ದಾರೆ.

ಡಿಪ್ಲೊಮಾ ಇನ್ ಜರ್ನಲಿಸಂ ಕೋರ್ಸ್ ಮಾಡಿದ ಇವರು ಕೊಡಿಯಾಲ್’ಬೈಲ್ ಪ್ರೆಸ್ಸಿನಲ್ಲಿ 12 ವರ್ಷ, ಸಂತ ಅಲೋಷಿಯಸ್ ಕಾಲೇಜಿನಲ್ಲಿ ಟೈಪಿಸ್ಟ್ ಆಗಿ ಎರಡು ವರ್ಷ, ಬೆಂಗಳೂರಿನ ಲೋಟಸ್ ಪ್ರಿಂಟರ್ಸ್’ನಲ್ಲಿ ಎರಡು ವರ್ಷ ಹಾಗೂ ರಾಕ್ಣೊ ಪತ್ರಿಕೆಯಲ್ಲ್ 25 ವರ್ಷ ಮಾಡಿದ ಸೇವೆಯನ್ನು ಪ್ರಾಂಜಲ ಮನಸ್ಸಿನಿಂದ ಸ್ಮರಿಸಿದರು.  “ಅದರಲ್ಲೂ ರಾಕ್ಣೊ ಸಂಪಾದಕರಾದ ಫಾ. ಮಾರ್ಕ್ ವಾಲ್ಡರ್ ಅವರು ಮನೆಗೆ ಬಂದು ಕರೆದು ರಾಕ್ಣೊ ಪತ್ರಿಕೆಯಲ್ಲಿ ಸಹ ಸಂಪಾದಕ ಹುದ್ದೆಯನ್ನು ನೀಡಿದ್ದು, 25 ವರ್ಷ ಆ ಪತ್ರಿಕೆಯಲ್ಲಿ 5 ಜನ ಸಂಪಾದಕರ ಜೊತೆ ಕೆಲಸ ನಿರ್ವಹಿಸಿದ್ದು, ಹಲವಾರು ಗೆಳೆಯರನ್ನು ಗಳಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು,” ಎಂದು ನುಡಿದರು.

ಶ್ರೀ ಚಾರ್ಲಿ ಅವರು ಕೊಂಕಣಿ, ಕನ್ನಡ, ತುಳು ಭಾಷೆಗಳಲ್ಲಿ ಕವಿತೆ, ಕಥೆ, ಲೇಖನ ಬರೆಯುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಸಾಹಿತ್ಯ ಪ್ರಕಟವಾಗಿದೆ. ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳು ಬಿತ್ತರವಾಗಿವೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿದ ’ಭೊಗ್ಣಾಂಚಿ ಲ್ಹಾರಾಂ’ ಕವಿತಾ ಸಂಕಲನ ಹಾಗೂ ’ಪಯ್ಶಾಂಚೊ ದೆಂವ್ಚಾರ್’ ಇವರದೇ ’ಶಶಿ ಪ್ರಕಾಶನ’ದಲ್ಲಿ ಪ್ರಕಟವಾಗಿ ಜನ ಪ್ರೀತಿ ಗಳಿಸಿವೆ. ಇವರು ಹಲವಾರು ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ.

72 ವರ್ಷ ವಯಸ್ಸಿನ ಚಾರ್ಲಿ ಅವರು ಈಗಲೂ ಜೀವನೋತ್ಸಾಹ ತುಂಬಿ ಕ್ರಿಯಾಶೀಲರಾಗಿದ್ದಾರೆ. “ಕುಟುಂಬದವರ ಪ್ರೋತ್ಸಾಹ, ಆರೈಕೆ, ಉತ್ತಮ ಆರೋಗ್ಯಕರ ಜೀವನಶೈಲಿ ನನ್ನ ವಯಸ್ಸನ್ನು ಮರೆಮಾಚಿದೆ,” ಎಂದರು. ರೇಡಿಯೋ ಸಾರಂಗ್’ನ ತಾಳೊ ಉಮಾಳೊ ನೇರಪ್ರಸಾರದ ಕಾರ್ಯಕ್ರಮದಲ್ಲಿ ತನ್ನ ಕೊಂಕಣಿ, ಕನ್ನಡ, ತುಳು ಕವಿತೆಗಳನ್ನು, ಹಾಡುಗಳನ್ನು ಹಾಡಿ ಹರ್ಷಿಸಿದ ಚಾರ್ಲಿ ಅವರು ಹಲವಾರು ಕೇಳುಗರೊಂದಿಗೆ ಮಾತನಾಡಿ ಸಂಭ್ರಮಿಸಿದರು.

- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್