ಪೌರ ಕಾರ್ಮಿಕರಿಗೆ ಸನ್ಮಾನ 

"ನಮ್ಮ ಭೂಮಿ ಸಂತೋಷವಾಗಿರಬೇಕಾದರೆ, ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ. ಈ   ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಅಪಾರವಾದ ಶ್ರಮವಿದೆ. ಇಂದು ತ್ಯಾಜ್ಯ ಎನ್ನುವುದು ಸಮಸ್ಯೆಯಾಗಿ ಉಳಿದಿಲ್ಲ. ಇದು ಲಾಭದಾಯಕ ಉದ್ದಿಮೆಯಾಗಿದೆ. ನಮ್ಮ ಮನೆಯ ಕಸವನ್ನು ನಾವು ಸರಿಯಾಗಿ ನಿರ್ವಹಣೆ ಮಾಡುವುದೇ ನಾವು ಪೌರಕಾರ್ಮಿಕರಿಗೆ ನೀಡುವ ನಿಜವಾದ ಸನ್ಮಾನ," ಎಂದು ಎಂದು ಉಜಿರೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಅಭಿಪ್ರಾಯಪಟ್ಟರು.

 

ಇವರು ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಪರಿಸರ ಕಾಳಜಿ ಕೇಂದ್ರ, ರೇಡಿಯೋ ಸಾರಂಗ್ 107.8 ಎಫ್.ಎಂ ಮಂಗಳೂರು, ಆಯೋಜಿಸಿದ್ದ ಗ್ರೀನ್ ಹಂಟ್- ಸ್ವಚ್ಛ ಜಾಗೃತಿ ಸ್ಪರ್ಧೆ ಹಾಗೂ ಪೌರ ಧ್ವನಿ- ಪೌರ ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. "ಪೌರ ಕಾರ್ಮಿಕರ ಪರವಾಗಿ ತಾವು ಪೌರ ಕಾರ್ಮಿಕರ ದನಿಯಾಗಿ ಬಂದಿರುವುದು ಸಂತೋಷ ನೀಡಿದೆ. ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಸ್ವಚ್ಛ ಭಾರತದ ಕಲ್ಪನೆಯೊಂದಿಗೆ ಹಲವಾರು ಕೆಲಸಗಳು ನಡೆಯುತ್ತಿದೆ. ಇಷ್ಟು ಮುಂದುವರಿದ ದೇಶವಾಗಿದ್ದರೂ ಸ್ವಚ್ಛತೆಯ ಕಡೆಗೆ ಜನರು ಜಾಗೃತರಾಗಿಲ್ಲ. ನಾವು ನಮ್ಮ ಕರ್ತವ್ಯಗಳನ್ನು ಮಾಡದಿರುವುದರಿಂದಲೇ ಇಂದಿಗೂ ನಾವು ಪೌರ ಕಾರ್ಮಿಕರನ್ನು, ಸರಕಾರವನ್ನು ದೂಷಿಸುವಂತಹ ಕೆಲಸಗಳಾಗುತ್ತಿದೆ. ನಮ್ಮ ಮನೆಯ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದಲೇ ಇಂದು ಈ ದುಸ್ಥಿತಿ ಒದಗಿ ಬಂದಿದೆ. ಪ್ರತೀ ದಿನ ನಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಆಯ್ದು, ಅದನ್ನು ಹಲವಾರು ವಿಧಾನಗಳಲ್ಲಿ ವಿಂಗಡಿಸಿ ಪೌರ ಕಾರ್ಮಿಕರು ನಿಜವಾದ ಅರ್ಥದಲ್ಲಿ ಸ್ವಚ್ಛ ಸೇನಾನಿಗಳಾಗಿದ್ದಾರೆ," ಎಂದು ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 46  ಸ್ವಚ್ಛತಾಕರ್ಮಿಗಳನ್ನು ಸನ್ಮಾನಿಸಲಾಯಿತು. ಸ್ವಚ್ಛತಾ ಕರ್ಮಿಗಳ ಪರವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಅನಿಲ್ ಅವರು, ಸ್ವಚ್ಛತಾ ಕರ್ಮಿಗಳು ಇನ್ನೂ ಸಮಾಜದ ಕೆಳಸ್ತರದಲ್ಲಿ ಬದುಕುತ್ತಿದ್ದಾರೆ. ಅವರನ್ನು ಗುರುತಿಸುವ ಗೌರವಿಸುವ ಕೆಲಸಗಳು ಆಗಬೇಕಾಗಿದೆ ಎಂದು ನುಡಿದರು.