ವಿಶೇಷ ಚೇತನರನ್ನು ಧನಾತ್ಮಕವಾಗಿ ಗುರುತಿಸಬೇಕು: ಡಾ. ಕಾಮತ್

"ವಿಶೇಷ ಚೇತನರನ್ನು ಧನಾತ್ಮಕವಾಗಿ ಗುರುತಿಸುವ ಮೂಲಕ ಪ್ರೋತ್ಸಾಹಿಸಿ," ಎಂದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಮೂಳೆ ವಿಭಾಗದ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಆರ್ ಕಾಮತ್ ಅವರು ಅಭಿಪ್ರಾಯಪಟ್ಟರು.ಇವರು ಡಿಸೆಂಬರ್ 03ರಂದು ’ವಿಶ್ವ ವಿಕಲಚೇತನ’ ರ ದಿನದ ಪ್ರಯುಕ್ತ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕೊರೋನದ ಈ ದಿನಗಳಲ್ಲಿ ವಿಭಿನ್ನ ಸಾಮರ್ಥ್ಯದವರ ನಾಯಕತ್ವ ಮತ್ತು ಭಾಗಿದಾರಿಕೆಯ ಮೂಲಕ ಈ ಕಠಿಣ ಸಂದಭ೯ಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು, ಮತ್ತು ’ಎಲ್ಲಾ ನ್ಯೂನತೆಗಳು ಕಣ್ಣಿಗೆ ಕಾಣುವುದಿಲ್ಲ’ ಎಂಬ ಈ ವಷ೯ದ ಧೈಯೋದ್ದೇಶಗಳನ್ನು ತಿಳಿಸಿದರು.

ದೈಹಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ ಮತ್ತು ತೀವ್ರ ನರರೋಗ ಸಂಬಂಧಿತರನ್ನು ವಿಕಲಚೇತನರು ಎಂದು ಕರೆಯುತ್ತಾರೆ. ಅದರ ಜೊತೆಗೆ ಕಣ್ಣಿಗೆ ಕಾಣದ ನ್ಯೂನತೆಗಳು ಇವೆ, ಅಂದರೆ ಭಾಷೆಯ ಮೇಲಿನ ಸಮಸ್ಯೆ, ಲೆಕ್ಕಹಾಕೋದಕ್ಕೆ ಕಷ್ಟ ಆಗುವುದು - ಇದೆಲ್ಲ ಕಣ್ಣಿಗೆ ಕಾಣದ ವಿಕಲತೆಗಳು ಹಾಗಾಗಿ ಅಂಥವರನ್ನು ಕಡೆಗಣಿಸುವಂತಿಲ್ಲ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ವಿಕಲಾಂಗ ವ್ಯಕ್ತಿಗಳಿಗಾಗಿ ವಿಶೇಷ ಸೌಲಭ್ಯಗಳನ್ನು ಮಾಡಿಕೊಡಬೇಕು, ಎಂದರು.

ಸರಕಾರದ ವಿವಿಧ ಸೌಲಭ್ಯಗಳನ್ನು ಅವರಿಗೆ ಒದಗಿಸಿಕೊಡುವ ಮೂಲಕ ವಿಶೇಷ ಶಾಲೆಗಳ ಮೂಲಕ ಅತ್ಯುತ್ತಮ ಶಿಕ್ಷಣ ನೀಡುವುದಕ್ಕೂ ಒತ್ತು ನೀಡಬೇಕು. ಇದರಿಂದ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬಹುದು. ಅನುಕಂಪದ  ಬದಲು ಪ್ರೋತ್ಸಾಹವನ್ನು ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇಲ್ಲಿ ವಿಶೇಷ ಚೇತನರಿಗೆ ಹಲವಾರು ಸೌಲಭ್ಯಗಳಿವೆ ಎಂದು ಮಾಹಿತಿಯನ್ನು ನೀಡಿದರು.

ಮೂಢನಂಬಿಕೆಯನ್ನು ಹೊಡೆದೋಡಿಸುವ ಮೂಲಕ ವಿಶೇಷ ಚೇತನರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ನಮ್ಮದು ಎಂಬ ಸಂದೇಶವನ್ನು ನೀಡಿದರು .

 ಈ ಕಾರ್ಯಕ್ರಮದಲ್ಲಿ ಕೇಳುಗರು ಪ್ರಶ್ನೆಗಳನ್ನು ಕೇಳಿ ಡಾ. ಕೆ ಆರ್ ಕಾಮತ್ ಅವರ ಜೊತೆ ಸಂವಾದ ನಡೆಸಿದರು.

- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್