“ಅಂಗವೈಕಲ್ಯ ಎಂಬುದು ಶಾಪವಲ್ಲ, ಇದೊಂದು ವರ. ಸಾಮಾನ್ಯ ಜನರಿಗೆ ಸಾಧ್ಯವಾಗದ ಎಷ್ಟೋ ವಿಷಯಗಳನ್ನು ವಿಕಲಚೇತನರು ತಮ್ಮ ಸ್ವಯಂ ಪ್ರತಿಭೆಯಿಂದ ಸಾಧಿಸಿದ್ದಾರೆ,” ಎಂದು ವಿಕಲಚೇತನ ಹಾಗೂ ಕೆಎಂಸಿ ಆಸ್ಪತ್ರೆಯ ಉದ್ಯೋಗಿ ಸುಬ್ರಹ್ಮಣ್ಯ ಭಟ್ ಅವರು ತಿಳಿಸಿದರು.
ಇವರು ಅತ್ತಾವರದ ಅಂಧರ ಚಲನವಲನ ಕೇಂದ್ರ ಹಾಗೂ ರೇಡಿಯೋ ಸಾರಂಗ್ 107.8 ಎಫ್.ಎಂ. ಆಯೋಜಿಸಿದ ವಿಶ್ವ ವಿಕಲಚೇತನರ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಂಗವೈಕಲ್ಯದಿಂದಾಗಿ ವಿಶೇಷಚೇತನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಿಗೆ ಸರಕಾರದ ಮಟ್ಟದಲ್ಲಿ ಅಥವಾ ಖಾಸಗಿ ಸಂಘ-ಸಂಸ್ಥೆಗಳಿಂದ ಇನ್ನೂ ನೆರವು ಸಿಗಬೇಕು, ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೇಡಿಯೋ ಸಾರಾಂಗ್’ನ ನಿರ್ದೇಶಕರಾದ ಡಾ. ಫಾ. ಮೆಲ್ವಿನ್ ಪಿಂಟೋ ಎಸ್ ಜೆ ಇವರು, ಅಂಧರ ಚಲನವಲನ ಕೇಂದ್ರ ಹಾಗೂ ರೇಡಿಯೋ ಸಾರಂಗ್ ಸಂಬಂಧ ಅನೂಹ್ಯವಾದದ್ದು. ವಿಕಲಚೇತನರಿಗೆ ಸ್ವ-ಉದ್ಯೋಗದತ್ತ ತರಬೇತಿ ನೀಡುವ ಮೂಲಕ ಅಂಧರ ಚಲನವಲನ ಕೇಂದ್ರ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ರೇಡಿಯೋ ಸಾರಂಗ್ ಇಂತಹ ಕೆಲಸಗಳಿಗೆ, ಸಮಾಜದ ಕೆಳಸ್ಥರದ ಜನರಿಗೆ ದನಿಯಾಗಿ ಕೆಲಸ ಮಾಡುತ್ತಿದೆ, ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೋವೀಡ್ ಲಸಿಕೆ ಕುರಿತಂತೆ ಮಾಹಿತಿ ನೀಡಲಾಯಿತು. ಅಂಧರ ಚಲನವಲನ ಕೇಂದ್ರದ ವಿಕಲಚೇತನರಿಗಾಗಿ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಧರ ಚಲನವಲನ ಕೇಂದ್ರದ ವಿಕಲಚೇತನರು, ರೇಡಿಯೋ ಸಾರಂಗ್’ನ ಸಿಬ್ಬಂದಿವರ್ಗ ಭಾಗವಹಿಸಿದ್ದರು. ಅಂಧರ ಚಲನವಲನ ಕೇಂದ್ರದ ವರದರಾಜ್ ಕಾರ್ಯಕ್ರಮ ನಿರೂಪಿಸಿ, ಸೌಮ್ಯ ನಿರ್ವಹಿಸಿದರು.
- ಶ್ವೇತಾ ಇಂದಾಜೆ, ರೇಡಿಯೋ ಸಾರಂಗ್