ಗುರುವಾರ ಡಿಸೆoಬರ್ 9 ರಂದು ನಡೆದ ಜನದನಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರಿನ ಕೆಎ೦ಸಿ ಮೆಡಿಕಲ್ ಕಾಲೇಜಿನ ಸಹ ಪ್ರಾದ್ಯಾಪಕರಾದ ಡಾ. ಪ್ರಕಾಶ್ ಹರಿಶ್ಚ೦ದ್ರ ' ಓಮಿಕ್ರಾನ್ ವೈರಸ್ ಆತಂಕ' ಎನ್ನುವ ವಿಷಯದ ಕುರಿತು ಮಾತನಾಡಿದರು.
ಇದು ಕೊರೊನಾದ ರೂಪಾಂತರಿ ಹೊಸ ತಳಿಯಾಗಿದೆ. ಈಗಾಗಲೇ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಪ್ರತ್ಯಕ್ಷವಾಗಿರುವ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್, ಹೆಚ್ಚು ಪ್ರಸರಣ ವೇಗ ಹೊಂದಿದೆಯೇ ವಿನಃ ಅದರಿಂದ ಪ್ರಾಣ ಹಾನಿಯಾಗಲೀ, ತೀವ್ರ ರೋಗ ಲಕ್ಷಣಗಳಾಗಲೀ ಇದುವರೆಗೂ ಎಲ್ಲೂ ವರದಿಯಾಗಿಲ್ಲ, ಎಂದರು.
ಈಗ ವೈರಸ್ ಬಗ್ಗೆ ಅಧ್ಯಯನಗಳು ಶುರುವಾಗಿವೆ. ಒಮಿಕ್ರಾನ್ ವರ್ತನೆ ಬಗ್ಗೆ ಅಂಕಿಅಂಶಗಳು ಹೆಚ್ಚು ಸಿಕ್ಕಾಗ ಮಾತ್ರ ಅಧ್ಯಯನಕ್ಕೆ ಹೆಚ್ಚು ಸಹಕಾರಿಯಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಓಮಿಕ್ರಾನ್ ವೈರಸ್ ಬಗ್ಗೆ ಅಧ್ಯಯನಕ್ಕಿಳಿದಿದೆ. ಪ್ರಾಥಮಿಕವಾಗಿ ಇದೊಂದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ ಎಂಬ ವರದಿಯಷ್ಟೇ ನೀಡಿದೆ. ಆದ್ರೆ ಒಮಿಕ್ರೋನ್ ಬಗ್ಗೆ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇದುವರೆಗೆ ದೇಶದಲ್ಲಿ ಒಮಿಕ್ರೋನ್ ಸೋಂಕಿನಿಂದ ಸಾವು ಸಂಭವಿಸಿಲ್ಲ. ಓಮಿಕ್ರಾನ್ ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದ್ರೆ ಸಾಕು, ಎಂದು ವೈರಸ್ ಬಗ್ಗೆ ಒಂದೊಂದಾಗಿ ಮಾಹಿತಿಯನ್ನ ಕೇಳುಗರಿಗೆ ನೀಡುತ್ತಾ ಹೋದರು.
ಈ ಹಿಂದೆ ಇದ್ದ ವೈರಸ್'ಗೂ ಈಗಿನ ಈ ವೈರಸ್'ಗೂ ಏನು ವ್ಯತಾಸ ಎಂದು ಕೇಳಿದ ಕೇಳುಗರೊಬ್ಬರ ಪ್ರಶ್ನೆಗೆ ಉತ್ತರ ನೀಡುತ್ತಾ, ಒಮಿಕ್ರೋನ್ ಸೋಂಕಿನ ಸಾಮಾನ್ಯ ಲಕ್ಷಣಗಳಲ್ಲಿ ಜ್ವರ, ಕೆಮ್ಮು, ಸುಸ್ತಾಗುವುದು ಹಾಗೂ ವಾಸನೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಗಂಟಲು ನೋವು, ತಲೆ ನೋವು,. ಅತಿಸಾರ, ಚರ್ಮದ ಮೇಲೆ ಊತ ಬರುವುದು ಹಾಗೂ ಕಣ್ಣು ಕೆಂಪು ಬಣ್ಣಕ್ಕೆ ತಿರುಗುವುದು ಮುಂತಾದ ಲಕ್ಷಣಗಳು ಕಾಣಸಿಗಬಹುದು.
ಅದೇ ರೀತಿ ಇದರ ಗಂಭೀರ ಲಕ್ಷಣಗಳು ಏನಂದ್ರೆ, ಉಸಿರಾಟದ ತೊಂದರೆ, ನಡೆದಾಡಲು ಕಷ್ಟವಾಗುವ ಅನುಭವ ಹಾಗೂ ಎದೆನೋವು ಕಾಣಿಸಿಕೊಳ್ಳಬಹುದು. ನಿಮಗೆ ಸಣ್ಣ ಜ್ವರ, ಕೆಮ್ಮು ನೆಗಡಿ, ಸುಸ್ತು, ಕೀಲು ನೋವು ಇದ್ದರೆ ನಿಮ್ಮ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ, ಹಿಂದೇಟು ಹಾಕಬೇಡಿ ಎಂದು ವೈದ್ಯರು ಮನವಿ ಮಾಡಿದರು.
ನಾವು ಇದುವರೆಗೂ ಕೊರೋನಾದಂತಹ ವೈರಸ್ ಹಾಗೂ ಬೇರೆ ಬೇರೆ ತಳಿಗಳನ್ನು ಎದುರಿಸುತ್ತಾ ಬಂದವರು. ಹಾಗೆಯೇ ಮಾಸ್ಕ್ ಹಾಕುವುದು ಅಂತರ ಕಾಪಾಡುವುದು ಲಸಿಕೆ ತೆಗೆದುಕೊಳ್ಳುವುದು ಮಾಡಿದ್ದಲ್ಲಿ ವೈರಸ್'ನಿಂದ ದೂರ ಇರಬಹುದು . ಮುಖ್ಯವಾಗಿ ಲಸಿಕೆಯನ್ನು ಎಲ್ಲರೂ ತೆಗೆದುಕೊಳ್ಳಬೇಕು. ಒಂದು ಹಾಗೂ ಎರಡನೇ ಡೋಸ್ ಯಾರು ತೆಗೆದುಕೊಂಡಿಲ್ಲವೋ ಅವರು ಶೀಘ್ರವೇ ತೆಗೆದುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದರು.
ಈ ಸೋಂಕಿನ ಸಂಪೂರ್ಣ ಅಂತ್ಯ (ಎಂಡೆಮಿಕ್) ಯಾವಾಗ ಎಂದು ನಿಖರವಾಗಿ ಈಗಲೇ ಹೇಳಲಾಗದು, ಎಂದು ಕೇಳುಗರ ಒಂದೊಂದು ಪ್ರಶ್ನೆಗೆ ಉತ್ತರಿಸುತ್ತಾ ಹೋದರು.
- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್