ಬಡತನದ ಬೇಗೆಯಿಂದ ಬಸವಳಿದ ನನ್ನ ಕುಟುಂಬಕ್ಕೆ ಆಧಾರ ಸ್ತಂಭವಾಗಲು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮುಂಬಯಿ ಮಹಾನಗರವನ್ನು ಆಶ್ರಯಿಸಿದೆ. ಮೊದಲು ಸುರು ಮಾಡಿದ್ದು ಹೋಟೆಲ್ ಕ್ಲೀನಿಂಗ್ ಕೆಲಸ. ಬರಬರುತ್ತಾ ನನ್ನ ಹೋಟೆಲ್ ಮ್ಯಾನೆಜರ್ ಹುದ್ದೆಗೆ ತಲುಪಿಸಿತು. ಈ ನಡುವೆ ಕೆಲವು ತಿಂಗಳು ಮಾಡಿದ ಪಿಗ್ಮಿ ಕಲೆಕ್ಟರ್ ಕೆಲಸ ಹಲವಾರು ಗೆಳೆಯರನ್ನು ಸಂಪಾದಿಸಿತಲ್ಲದೆ ಜೋಗೇಶ್ವರಿ ಪರಿಸರದಲ್ಲಿ ನೆಲೆಸುವಂತೆ ಮಾಡಿತು. ಮುಂದೆ ಆಗಿದ್ದು ಸಿನಿಮಾ ಮಾಯಾಲೋಕದ ಸಂಪರ್ಕ. ಅದು ಸ್ಪಾಟ್ ಬಾಯ್ ನಿಂದ ಪೈರಿಂಗ್ ಮಾಸ್ಟರ್ ವರೆಗೆ ನನ್ನ ಬೆಳೆಸಿದೆ, ಎಂದು ನವೀನ್ ಲೋಬೋ ನುಡಿದರು. ಅವರು ಜನವರಿ 5ರಂದು ನಡೆದ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಇದುವರೆಗೆ ನಾನು 200 ಚಲನಚಿತ್ರಗಳಿಗೆ, 60 ರಿಯಾಲಿಟಿ ಶೋಗಳಿಗೆ, ಆಲ್ಬಂ ಸಾಂಗ್, ಜಾಹೀರಾತುಗಳಿಗೆ ಫೈರಿಂಗ್ (ಬೆಂಕಿ), ಮಳೆ, ಬಿರುಗಾಳಿ, ಸಿಡಿಲು, ಮಿಂಚು ಇನ್ನಿತರ ಸ್ಪೆಷಲ್ ಇಫೆಕ್ಟ್ ಕೆಲಸವನ್ನು ನಿರ್ವಹಿಸಿದ್ದೇನೆ, ಎಂದ ಅವರು, ಮೊದಲು ಶೇಖರ್ ಸುಮನ್’ರವರ ‘ರಿಪೋರ್ಟರ್’ಸೀರಿಯಲ್’ಗೆ ಸ್ಪಾಟ್ ಬಾಯ್ ಆಗಿ ಈಗ ನನ್ನದೆ ಸ್ವತ: ತಂಡವನ್ನು ಕಟ್ಟಿಕೊಳ್ಳುವಷ್ಟು ಸಾಮಥ್ರ್ಯ ನನ್ನದಾಗಿದೆ ಎಂದು ಹರ್ಶಿಸಿದರು.
ಸಲ್ಮಾನ್ ಖಾನ್, ಶಾರೂಕ್ ಖಾನ್, ಹೃತಿಕ್ ರೋಷನ್, ಅಮಿತಾಬ್ ಬಚ್ಚನ್, ಸನ್ನಿ ಡೇವಲ್ ಹೀಗೆ ಹಲವಾರು ನಟರ ಚಿತ್ರಗಳಲ್ಲದೆ, ಕಾಮಿಡಿ ವಿತ್ ಕಪಿಲ್, ಭೂಗಿ ವೂಗಿ, ಕತ್ರೋಂಕಾ ಕಿಲಾಡಿ ಮುಂತಾದ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದೇನೆ, ಎಂದು ಹೆಮ್ಮೆಯಿಂದ ನುಡಿದರು. ಈ ಅಪಾಯಕಾರಿ ಸಾಹಸಮಯ ಕೆಲಸ ಮಾಡುವಾಗ ದೈಹಿಕ ತೊಂದರೆಗೆ ಒಳಗಾಗಿ ಕಾಲು ಮುರಿದು ಆಸ್ಪತ್ರೆ ಸೇರಿದ್ದು, ಬೆಂಕಿಯ ಜೊತೆ ಸರಸವಾಡುವಾಗ ಮೈ ಸುಟ್ಟಿದ್ದು ಇದೆ, ಎಂದರು.
ಜೀವನ ಸಾಗಿಸಲು ನಾವು ಯಾವಾಗಲೂ ಇಂಥ ಸವಾಲುಗಳನ್ನು ಎದುರಿಸಿದರೆ ಸಾಧಕನಾಗುವ ಸಾಧ್ಯತೆ ನಿಚ್ಚಳವಾಗಿದೆ, ಮಾತ್ರವಲ್ಲ ಅದ್ಭುತವನ್ನು ಸೃಷ್ಟಿಸಬಹುದು ಎಂದು ನೆವಿಲ್ ಅವರು ನುಡಿದರು.
ನನ್ನ ಜೀವ ಮುಂಬಯಿಯಲ್ಲಿದ್ದರೂ, ಮನಸ್ಸು ಯಾವಾಗಲೂ ಮಂಗಳೂರನ್ನು ನೆನೆಸುತ್ತಾ ನನ್ನೂರಿಗೆ ಮಿಡಿಯುತ್ತೆ ಎಂದರು. ಮರಾಠಿ, ಹಿಂದಿ, ಕನ್ನಡ ಸಿನಿಮಾಗಳಲ್ಲಿ ದುಡಿದ ನನಗೆ ತುಳು ಚಲನಚಿತ್ರದಲ್ಲಿ ಕೆಲಸ ಮಾಡಬೇಕೆಂಬ ಆಸೆ ಇದೆ, ಜೊತೆಗೆ ನನ್ನದೆ ಸ್ವಂತ ಮನೆ ಹೊಂದಬೇಕೆಂಬ ಕನಸಿದೆ, ಎಂದರು.
ತನ್ನ ಬೆಳವಣಿಗೆಗೆ ಶಾಲಾ ಸಹಪಾಟಿ ಪತ್ರಕರ್ತ ರೊನ್ಸ್, ಬಂಟ್ವಾಳ್, ಸಂಜಯ್ ಶೆಟ್ಟಿ, ನಿತಿನ್ ಪೂಜಾರಿ ಇವರನ್ನು ನೆನೆಸಿದ ಅವರು, ತನ್ನ ಕುಟುಂಬವನ್ನೂ ನೆನಪಿಸಿದರು.
ಈ ಕಾರ್ಯಕ್ರಮದಲ್ಲಿ ಹಲವಾರು ಕೇಳುಗರೊಂದಿಗೆ, ಆಪ್ತರೊಂದಿಗೆ ಮಾತನಾಡಿ ಸಂಭ್ರಮಿಸಿದರು.
- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್