ಕಲಾಸಕ್ತ ಕುಟುಂಬವೇ ನನ್ನ ಬದುಕಿನ ಬೆಳಕು: ಪ್ರಮೋದ್ ಸಪ್ರೆ

“ನನ್ನ ಕಲಾ ಕುಟುಂಬ, ನನ್ನ ತಂದೆ, ನನ್ನ ಅಜ್ಜ ನನ್ನ ಸಂಗೀತಾಸಕ್ತಿಗೆ ನೀರೆರೆದ ಪೋಷಕರು; ನನ್ನ ಬದುಕಿಗೆ ಬೆಳಕು ನೀಡಿದವರು. ಎರಡನೇ ಕ್ಲಾಸ್’ನಲ್ಲಿ ಕಲಿಯುತ್ತಿದ್ದಾಗ ಪಾಠದ ಹಾಡಿಗೆ ಟ್ಯೂನ್ ಮಾಡಿ ಸೈ ಎನಿಸಿಕೊಂಡ ಗಳಿಗೆಯಿಂದ ಸಂಗೀತ ನನ್ನ ಉಸಿರಾಯಿತು. ನಂತರ ಎಚ್. ಕೆ. ನಾರಾಯಣ ಅವರ ಬಳಿ ಸುಗಮ ಸಂಗೀತ, ಅನಿಲ್ ಸಿಂಧೆ ಬಳಿ ಶಾಸ್ತ್ರೀಯ ಸಂಗೀತ ಅಭ್ಯಸಿಸಿದೆ. ಹೀಗೆ ಸಂಗೀತದ ಬಗ್ಗೆ ಅನುಭವ ವಿಸ್ತರಿಸಿಕೊಂಡೆ,” ಎಂದು ಕನ್ನಡ ಸೇವಾರತ್ನ, ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ಅಭಿಪ್ರಾಯಪಟ್ಟರು.

ಅವರು ರೇಡಿಯೋ ಸಾರಂಗ್’ನಲ್ಲಿ ಜನವರಿ 12ರಂದು ನಡೆದ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದರು.

ಕಳೆದ 22 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರು ಕನ್ನಡ, ತುಳು, ಹಿಂದಿ, ಸಂಸ್ಕೃತ, ಮಲಯಾಳ, ತಮಿಳು, ಪಂಜಾಬಿ, ಉರ್ದು ಭಾಷೆಗಳ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ ಎಂದು ಹೇಳಿದರು. ಇವರ ಸಂಗೀತ ನಿರ್ದೇಶನದ ಪಿ. ಶೇಷಾದ್ರಿಯವರ ಮೂವಿಗೆ ಇಂಡಿಯನ್ ಫೈನಲಿಸ್ಟ್ ನಿಹಾಲ್ ತಾವ್ರೋಗೆ ಮೊತ್ತ ಮೊದಲು ಮೂವಿಗೆ ಹಾಡಲು ಅವಕಾಶ ಕೊಟ್ಟ ಬಗ್ಗೆ ಖುಷಿಯನ್ನು ಹಂಚಿಕೊಂಡರು.

ಸಂಗೀತ ನಿರ್ದೇಶಕ ಮುರಳೀಧರ ಕಾಮತ್, ಖ್ಯಾತ ಗಾಯಕ ರಮೇಶ್ಚಂದ್ರ ನೀಡಿದ ಸಹಕಾರವನ್ನು ನೆನೆದ ಇವರು ದಾಸರಪದ ಸೇರಿದಂತೆ ಬೇರೆ ಬೇರೆ ಭಾಷೆಗಳ ಎರಡು ಸಾವಿರ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ ಹರುಷ ಒಂದೆಡೆಯಾದರೆ, ಹಾಡುಗಳು ಸೂಪರ್ ಹಿಟ್ ಆದಾಗ ಅದರ ಕ್ರೆಡಿಟ್ ಸಂಗೀತ ನಿರ್ದೇಶಕರಿಗೆ ಸಿಗದೆ ಹಾಡುಗಾರರ ಪಾಲಾಗ್ತಾ ಇರುವುದು ವಿಷಾದನೀಯ ಎಂದರು.

ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಪ್ರವೀಣ್. ಡಿ. ರಾವ್ ಸಾಂಗತ್ಯದಲ್ಲಿ ನಡೆದ ಆನ್ಲೈನ್ ಸಂಗೀತದ ಕಾರ್ಯಕ್ರಮದಲ್ಲಿ ಒಂದಷ್ಟು ಸಾಹಿತಿಗಳ 16 ಹಾಡಿಗೆ ನಾನು ಮಾಡಿದ ಸಂಗೀತ ನಿರ್ದೇಶನ ಪ್ರಪಂಚಾದ್ಯಂತ ಜನ ಮೆಚ್ಚುಗೆ ಪಡೆದದ್ದು ನಂತರ ಹೆಚ್ಚಿನ ಬೇಡಿಕೆ ಬಂದು ಸಂಗೀತದಿಂದ ನಿತ್ಯಜೀವನ ಕಷ್ಟಕರವೆನಿಸಿದ ನನಗೆ ನಿರಾಳತೆ ಒದಗಿಸಿತು ಎಂದರು.

ಮಂದಾರ ರಾಮಾಯಣ ಬರೆದ ತುಳು ವಾಲ್ಮೀಕಿ ಕವಿ ಮಂದಾರ ಕೇಶವಭಟ್ಟರ ಮೊಮ್ಮಗನಾಗಿದ್ದು ನನಗೆ ಹೆಮ್ಮೆ ಎನಿಸಿದೆ ಎಂದ ಇವರು ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಅಜ್ಜ ಬಾಳಿ ಬದುಕಿದ ಪಚ್ಚನಾಡಿಯ ತ್ಯಾಜ್ಯ ಬಿದ್ದು ಹಾಳಾದ ಮನೆಯನ್ನು ನವೀಕರಿಸುವ ಯೋಜನೆ ಬಗ್ಗೆ ವಿವರಿಸಿದರು. ಹೊಸ ಪ್ರತಿಭೆಗಳ ವಿಕಸನಕ್ಕೆ ’ಐ ಲೈಸಾ’ ಸಂಗೀತಾಸಕ್ತರ ತಂಡದ ಕಾರ್ಯದಲ್ಲಿ ಕೈಜೋಡಿಸಿದ್ದೇನೆ ಎಂದು ತಮ್ಮ ಸಮಾಜಮುಖಿ ಚಿಂತನೆಯನ್ನು ಹಂಚಿಕೊಂಡರು.

ನೇರಪ್ರಸಾರ ಕಾರ್ಯಕ್ರಮದಲ್ಲಿ ಹಾಡು ಹಾಡಿ ಕೇಳುಗರನ್ನು ರಂಜಿಸಿದ ಇವರು ಕೇಳುಗರ ಹಾಗೂ ಆಪ್ತರ ಕರೆಗಳಿಗೆ ಉತ್ತರಿಸಿದರು.

- ಎಡ್ವರ್ಡ್ ಲೋಬೋ ರೇಡಿಯೋ ಸಾರಂಗ್