ದುಃಖವ ಮರೆಯಲು ಕಲೆಯನ್ನು ಆಶ್ರಯಿಸಿದೆ:  ಜಯಂತಿ ಸುವರ್ಣ ಬಂದ್ಯೋಡು 

 
ಕುಟುಂಬದಲ್ಲಿನ ಆಪ್ತರ ಅಗಲಿಕೆಯ ದುಃಖವ ಮರೆಯಲು ನಾನು ಕಲಾ ಚಟುವಟಿಕೆಯನ್ನು ಬೆಳೆಸಿಕೊಂಡೆ. ಇದು ನನ್ನನ್ನು ಸಂತೈಸಿತದಲ್ಲದೆ ಲೋಕಮುಖಕ್ಕೆ ನನ್ನ ಪರಿಚಯಿಸಿತು, ಎಂದು ಬಹುಮುಖ ಪ್ರತಿಭೆ ಜಯಂತಿ ಸುವರ್ಣ ಬಂದ್ಯೋಡು ಅವರು ನುಡಿದರು.
 
ಅವರು ಜನವರಿ 26ರಂದು ರೇಡಿಯೋ ಸಾರಂಗ್ ನ ಹೃದಯರಾಗ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
 
 
 
ಬಾಲ್ಯದಿಂದಲೂ ನೃತ್ಯದ ಒಲವಿದ್ದ ನನಗೆ ಊರಿನ ಒಂದು ಕಾರ್ಯಕ್ರಮದಲ್ಲಿ ನೃತ್ಯ ಕಾರ್ಯಕ್ರಮ ನೀಡಲು ಕರೆ ಬಂದಾಗ ನನ್ನದೇ  ನೃತ್ಯತಂಡ ನಿರ್ಮಿಸಿ ಪ್ರದರ್ಶನ ನೀಡಿದ್ದು ಈ ಕಾರ್ಯಕ್ರಮ ಜನಮೆಚ್ಚುಗೆ ಪಡೆದದ್ದು ನೃತ್ಯವಲ್ಲದೆ ಯಕ್ಷಗಾನ, ತಾಳಮದ್ದಳೆ, ನಾಟಕ, ಬೀದಿನಾಟಕ, ಸಿನಿಮಾ,ಕುಣಿತ, ಭಜನೆ, ಸಂಗೀತ ಮೊದಲಾದ ನನ್ನ ಆಸಕ್ತಿಗಳು ಪ್ರವಹಿಸುವಂತೆ ಮಾಡಿತು, ಎಂದರಲ್ಲದೆ  ಮನೆಯವರ, ಊರಿನವರ ಪ್ರೋತ್ಸಾಹ ನನ್ನಲ್ಲಿ ಇನ್ನಷ್ಟು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಲು ಹೊಸ ಹೊಸ ವಿಷಯಗಳತ್ತ ಆಕರ್ಷಿಸಿತು. ಜೊತೆಗೆ ಆರೋಗ್ಯ ಕಾರ್ಯಕರ್ತೆಯಾಗಿ ಮಾಡಿದ ಸಮಾಜಸೇವೆ ನನಗೆ ಇನ್ನಷ್ಟು ಜನರ ಸ್ನೇಹ ಸಂಪರ್ಕ ಮತ್ತು ಮನಶ್ಯಾಂತಿ ತಂದಿತು, ಎಂದರು.
 
ಇವರು ಜೀವನೋಪಾಯಕ್ಕಾಗಿ ಬ್ಯೂಟಿಶನ್ ವೃತ್ತಿ ಮಾಡುತ್ತಿದ್ದು ಡ್ಯಾನ್ಸ್ ಯಕ್ಷಗಾನ ನಾಟಕಕ್ಕೆ ಧರಿಸುವ ಉಡುಗೆ ತೊಡುಗೆ ಕಿರೀಟಗಳನ್ನು ತಯಾರಿಸುತ್ತಿದ್ದಾರೆ. ರುಚಿರುಚಿಯಾದ ಅಡುಗೆ ಮಾಡುವುದು ಇವರ ಮತ್ತೊಂದು ಹವ್ಯಾಸ.  ಮೊದಲು ಹೋಟೆಲು ನಡೆಸುತಿದ್ದ ಇವರು ಈಗ ಕ್ಯಾಟರಿಂಗ್, ಮನೆ ಅಡುಗೆ ತಯಾರಿಸುತ್ತಿದ್ದಾರೆ. ಇದಲ್ಲದೆ ಗಾಯನ ಕ್ಷೇತ್ರದಲ್ಲಿ ಒಳ್ಳೆಯ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. 'ಸ್ಟೇಟ್ ಆರ್ಟಿಸ್ಟ್ ಅಸೋಸಿಯೇಷನ್ ಆಫ್ ಕೇರಳ' ಇದರ ಮಹಿಳಾ ಕಾರ್ಯದರ್ಶಿಯಾಗಿ ದುಡಿದಿದ್ದಾರೆ.
 
ಯಕ್ಷಗಾನದಲ್ಲಿ ಇನ್ನಷ್ಟು ಸಾಧನೆ ಮಾಡುತ್ತಾ ವೇಷ ಹಾಗೂ ಭಾಗವತಿಕೆಯಲ್ಲಿ ಮಿಂಚಬೇಕೆಂಬ ಕನಸು ನನ್ನದು ಎಂದ ಇವರು ಸಮಯದ ಸದುಪಯೋಗ ನಮ್ಮನ್ನು ಸಾಧಕರನ್ನಾಗಿ ನಿರ್ಮಿಸುತ್ತೆ, ಎಂದರು. 
 
ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಖುಷಿಪಟ್ಟ ಇವರು ಕೇಳುಗರ ಕರೆಗಳಿಗೆ ಉತ್ತರಿಸಿದರು.
 
- ಎಡ್ವರ್ಡ್ ಲೋಬೋ ರೇಡಿಯೋ ಸಾರಂಗ್