ಹಲೋ ವೆನ್ಲಾಕ್ ನಲ್ಲಿ ಅಪಂಡಿಸೈಟಿಸ್ ಕುರಿತು ಮಾಹಿತಿ

ಈ ಬಾರಿಯ ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜನವರಿ 14ರಂದು ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಡಾ. ವಿಶ್ರಂಕ ಎಸ್ ಐತಾಳ್ ಭಾಗವಹಿಸಿ ಅಪೆಂಡಿಸೈಟಿಸ್ ರೋಗಕ್ಕೆ ಸಂಭಂಧಪಟ್ಟು ಮಾತನಾಡಿದರು. ಆರಂಭದಲ್ಲಿ ಅಪೆಂಡಿಕ್ಸ್ ಈ ಪುಟ್ಟ ಅಂಗಾಂಗದ ಬಗ್ಗೆ ವಿವರಿಸಿ ಎಂದಾಗ , ಇದು ನಮ್ಮ ದೇಹದ ಸಣ್ಣ ಮತ್ತು ದೊಡ್ಡ ಕರುಳು ಸೇರುವ ಜಾಗದಲ್ಲಿ ಒಂದು ಚಿಕ್ಕ ಚೀಲದಂತಹ ರಚನೆಯ ಭಾಗ. ಸಾಮಾನ್ಯ 6ಸೆಂ.ಮೀ ನಿಂದ 8ಸೆಂ.ಮೀ ನಷ್ಟು ಇರುತ್ತದೆ. ಇದಕ್ಕೆ ನಾವು ಅಪೆಂಡಿಕ್ಸ್ ಎನ್ನುತ್ತೇವೆ. ಇದರ ಒಳಗಡೆ ಸೇರಿಕೊಳ್ಳುವ ಅಥವಾ ಉತ್ಪತ್ತಿಯಾಗುವ ಜಿಡ್ಡು ಪದಾರ್ಥಗಳು ಆಗಿಂದಾಗ್ಗೆ ಹೊರಬಂದು ಕರುಳಿನಲ್ಲಿ ಬೆರೆತು ಹೋಗುತ್ತವೆ. ಒಂದುಕಡೆ ಮಲವು ಗಟ್ಟಿಯಾದ ಕಲ್ಲಿನಂತಾಗಿ ಅಲ್ಲೇ ಉಳಿಯುತ್ತೆ. ಕೆಲವೊಮ್ಮೆ ಗಾಲ್‌ಸ್ಟೋನ್ ಹಾಗೂ ಜಂತುಗಳು (ಪಿನ್‌ವರ್ಮ್) ಸಹ ಅಡಚಣೆಯನ್ನುಂಟು ಮಾಡಬಹುದು. ಈ ಪ್ರಕ್ರಿಯೆಯಿಂದಾಗಿ ಅಪೆಂಡಿಕ್ಸ್ ಊದಿಕೊಂಡು ಅಪೆಂಡಿಸೈಟಿಸ್’ಗೆ ಕಾರಣವಾಗುತ್ತದೆ. ಆದರೆ ಈ ರೀತಿ ಊದಿಕೊಳ್ಳಲು ನಿರ್ದಿಷ್ಟ ಕಾರಣಗಳು ಇದುವರೆಗೆ ಗೊತ್ತಾಗಿಲ್ಲ. ಇದು ಸುಮಾರು ಶೇ. 50ರಷ್ಟು ಜನರಲ್ಲಿ, ಅದರಲ್ಲೂ ಮೂವತ್ತು ವರ್ಷದ ಒಳಗಿನವರಿಗೆ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಆಹಾರದಲ್ಲಿನ ನಾರಿನ ಅಂಶದ ಕೊರತೆ, ಅತಿಯಾದ ಕೊಬ್ಬು ಹಾಗೂ ಪಿಷ್ಟ ಪದಾರ್ಥಗಳ ಸೇವನೆ ಸಹ ಇದಕ್ಕೆ ಒಂದು ಕಾರಣವಾಗಿರಬಹುದು ಎಂದರು.

ಅಪೆಂಡಿಸೈಟಿಸ್’ನ ಲಕ್ಷಣಗಳ ಬಗ್ಗೆ ಕೇಳಿದಾಗ, ಆರಂಭದಲ್ಲಿ ಹೊಟ್ಟೆನೋವು, ಸಣ್ಣದಾಗಿ ಕಿಬ್ಬೊಟ್ಟೆ ಬಳಿ, ಹೊಕ್ಕುಳ ಸುತ್ತ ನೋವಿನ ತೀವ್ರತೆ ಜಾಸ್ತಿಯಾಗಿ ಬಲಭಾಗದ ಕಿಬ್ಬೊಟ್ಟೆಯ ಬಳಿ ವ್ಯಾಪಿಸುತ್ತದೆ. ಇದರ ಜತೆಗೆ ಜ್ವರ, ವಾಂತಿ ಹಸಿವಿಲ್ಲದಿರುವುದು, ಒಮ್ಮೊಮ್ಮೆಮಲಬದ್ದತೆ ಅತಿಭೇಧಿಯೂ ಆಗಬಹುದು. ಹಾಗಾಗಿ ಈ ರೀತಿ ಕಂಡು ಬಂದಾಗ  ಕೂಡಲೇ ತಡಮಾಡದೇ ವೈದ್ಯರನ್ನು ಸಂಪರ್ಕಿಸಬೇಕು, ಎಂದರು.

ಈ ರೋಗದ ವಿಚಾರವಾಗಿ ಬಂದ ಕರೆಗಳಿಗೆ ಉತ್ತರಿಸುತ್ತಾ ಹೋದ ಅವರು, ಅಪೆಂಡಿಸೈಟಿಸ್ ರೋಗ ಔಷದಗಳಿಂದ ಕಡಿಮೆಯಾಗುವ ರೋಗವಲ್ಲ.ಶೇ.99 ರಷ್ಟು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ನಾವು ಅಲ್ಟ್ರಾಸೌಂಡ್ ಮೂಲಕ ಮತ್ತು ರಕ್ತ ಪರೀಕ್ಷೆ ಮಾಡಿದಾಗಲೂ ಬಿಳಿರಕ್ತಕಣಗಳು ಸಾವಿರಕ್ಕಿಂತ ಹೆಚ್ಚಿದ್ದಲ್ಲಿ ಅಪೆಂಡಿಸೈಟಿಸ್’ನ ಸಮಸ್ಯೆ ಖಚಿತಪಡಿಸಿಯೂ ಹೀಗೆ ಎಲ್ಲಾ ಪರೀಕ್ಷೆಗಳ ಮೂಲಕ ರೋಗ ನಿರ್ಣಯ ಮಾಡ್ತೀವಿ. ಹಾಗಾಗಿ ವೈದ್ಯರಿಗೆ ನಿಮ್ಮ ಸಮ್ಮತಿ ನೀಡಿದಾಗ ಎಲ್ಲವೂ ಸುಖಾಂತ್ಯಗೊಳಿಸಬಹುದು. ಇಲ್ಲವಾದಲ್ಲಿ ಅಪೆಂಡಿಕ್ಸ್ ಒಡೆದು ಹೋಗಿ ಅದರೊಳಗಿನ ಕೀವು ಹೊಟ್ಟೆ ಭಾಗಕ್ಕೆ ಸೇರಿ ಪ್ರಾಣಾಪಾಯವಾಗುವ ಸಾಧ್ಯತೆ ಇರುತ್ತದೆ, ಎಂಬ ಎಚ್ಚರಿಕೆ ನೀಡಿದರು. ಹಾಗೂ ಸರ್ಜರಿಯ ಮೂಲಕ ಅಪೆಂಡಿಕ್ಸ್ ಹೊರತೆಗೆದ ನಂತರ ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ರೋಗಿಯು ಚೇತರಿಸಿಕೊಳ್ಳುತ್ತಾನೆ. ಲ್ಯಾಪರೋಸ್ಕೋಪಿಕ್ ಸರ್ಜರಿಯಲ್ಲಿ ರೋಗಿ ಬೇಗನೆ ಚೇತರಿಸಿಕೊಳ್ಳುತ್ತಾನೆ ಎಂಬ ಮಾಹಿತಿಯನ್ನೂ ನೀಡಿದರು. ಬಂದ ಏಳೆಂಟು ಕರೆಗಳಿಗೂ, ಅವರು ಕೇಳಿದ ಪ್ರಶ್ನೆಗಳಿಗೂ ಸಂಶಯಗಳಿಗೂ ಪರಿಹಾರ ನೀಡಿದರು.

- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್