ಶಾಲೆಯಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ್ದಕ್ಕೆ ಬಿದ್ದ ಪೆಟ್ಟು, ಆದ ಅವಮಾನ ತುಳು ಭಾಷೆಯಲ್ಲಿ ಬರೆಯಲು ಪ್ರೇರೇಪಿಸಿತಲ್ಲದೆ ತುಳು ಸಾಹಿತಿಯಾಗಿ ಸಮಾಜ ಗುರುತಿಸುವಂತೆ ಮಾಡಿತು ಎಂದು ತುಳು ಸಾಹಿತಿ ಕುಶಾಲಾಕ್ಷಿ ವಿ ಕುಲಾಲ್ ನುಡಿದರು. ಅವರು ಜೂನ್ 28 ರಂದು ಬುಧವಾರ ಸಂಜೆ ರೇಡಿಯೋ ಸಾರಂಗ್ ನಲ್ಲಿ ನಡೆದ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕುಲಾಲ ಸಂಘ ಕಾಸರಗೋಡು ತಾಲೂಕು ಇದರ ಕುಂಭವಾಣಿ ಪತ್ರಿಕೆಯಲ್ಲಿ ಪ್ರಕಟವಾದ ತನ್ನ ತುಳು ಕವಿತೆಗೆ ಸಿಕ್ಕಿದ ಪ್ರೋತ್ಸಾಹ "ಸುರುತ್ತಪನಿ" ಕವನ ಸಂಕಲನದಿಂದ ಹಿಡಿದು ಕಿರು ಲೇಖನ ಮಾಲೆ, ಎರಡು ತುಳು ಕಾದಂಬರಿ ಸಹಿತ 8 ಪುಸ್ತಕಗಳನ್ನು ಪ್ರಕಟಿಸಲು ಉತ್ತೇಜನ ನೀಡಿತು. ಅಲ್ಲದೇ "ಕಡಲ ಮುತ್ತು" ಕಾದಂಬರಿಗೆ ಪಣಿಯಾಡಿ ಪ್ರಶಸ್ತಿ ಹಾಗೂ "ಪನಿ ಮುತ್ತುಮಾಲೆ" ಕಿರುಲೇಖನ ಮಾಲೆಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗುವಂತಹ ಪ್ರಬುದ್ಧ ಸಾಹಿತ್ಯ ರಚಿಸಲು ಪ್ರೇರಣೆಯಾಯಿತು ಎಂದರು. ತುಳು ಅಲ್ಲದೆ ಕನ್ನಡ,ಮಲಯಾಳಂ, ಹಿಂದಿ ಭಾಷೆಯಲ್ಲಿ ಕವಿತೆ, ಹಾಡು ರಚಿಸಿದ್ದೇನೆ ಎಂದರು.
ಸಾಹಿತಿಯಾಗಲು ಸಹಕರಿಸಿದ ಹಲವರನ್ನು ನೆನೆದ ಇವರು ಕವಿತೆ ವಾಚನ ಮಾಡಿ ಹಾಡಿ ರಂಜಿಸಿ ಹಲವಾರು ಕೇಳುಗರ ಕರೆಗಳಿಗೆ ಉತ್ತರಿಸಿದರು.
- ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್