ಸಾರಂಗ್ ತಂಡದಿಂದ ಜನಧ್ವನಿ, ರೇಡಿಯೋ ನೇಥಲ್ ಸಮುದಾಯ ಬಾನುಲಿಗಳ ಭೇಟಿ

ರೇಡಿಯೋ ಸಾರಂಗ್ 107.8 FM ಸಮುದಾಯ ಬಾನುಲಿಯು ಇತ್ತೀಚೆಗೆ ಹೆಚ್.ಡಿ. ಕೋಟೆ ತಾಲೂಕಿನ ಸರಗೂರಿನಲ್ಲಿರುವ ಜನಧ್ವನಿ 90.8 FM ಹಾಗೂ ಆಲಪ್ಪುರದಲ್ಲಿರುವ ರೇಡಿಯೋ ನೇಥಲ್ 107.8 FM ಸಮುದಾಯ ಕೇಂದ್ರಗಳಿಗೆ ಆಗಸ್ಟ್ 5-7ರಂದು ಭೇಟಿ ನೀಡಿತು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಜನಧ್ವನಿ ಸಮುದಾಯ ಬಾನುಲಿಯು ಅಲ್ಲಿನ ಜನರಿಗೆ ಅಗತ್ಯ ಮಾಹಿತಿ ಹಾಗೂ ಜಾಗೃತಿಗಾಗಿ 2012ರಲ್ಲಿ ಆರಂಭವಾಯಿತು. ಬಾನುಲಿಯು ದಿನದಲ್ಲಿ 14 ಗಂಟೆಗಳ ಕಾಲ ಅಲ್ಲಿನ ಬುಡಕಟ್ಟು ಹಾಗೂ ಆದಿವಾಸಿ ಜನರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣದ ಮೂಲಕ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೇಡಿಯೋ ಜನಧ್ವನಿ ಪ್ರಸಾರಮಾಡುತ್ತಿದೆ. ಜನಧ್ವನಿ ಸಮುದಾಯ ಬಾನುಲಿಯ ಕಾರ್ಯನಿರ್ವಾಹಕರಾದ ಶ್ರೀ ನಿಂಗರಾಜು ಅವರು ರೇಡಿಯೋ ಕಾರ್ಯಾಚರಿಸುವ ಬಗೆಗಿನ ಮಾಹಿತಿಗಳನ್ನು ಸಾರಂಗ್ ತಂಡದೊಂದಿಗೆ ಹಂಚಿಕೊಂಡರು.

ಮುಂದೆ ರೇಡಿಯೋ ಸಾರಂಗ್ ತಂಡವು ಕೇರಳದ ಅಲಪ್ಪುರದಲ್ಲಿ ಕಾರ್ಯಾಚರಿಸುತ್ತಿರುವ ರೇಡಿಯೋ ನೇಥಲ್ ಗೆ ಭೇಟಿ ಕೊಟ್ಟಿತು. ದ್ವೀಪದ ಮಧ್ಯೆ ಪ್ರವಾಸಿ ತಾಣವಾಗಿ ಹಿನ್ನೀರಿನ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಅಲೆಪ್ಪಿಯಲ್ಲಿ ಕಾರ್ಯಾಚರಿಸುತ್ತಿರುವ ರೇಡಿಯೋ ನೇಥಲ್ ನ ನಿರ್ದೇಶಕರಾದ ರೆ.ಫಾ. ಝ್ಸೇವಿಯರ್ ರೇಡಿಯೋದ ಬಗ್ಗೆ ಮಾಹಿತಿ ನೀಡಿದರು. ಇದು ಕಳೆದ 6 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ರೇಡಿಯೋ ಬಾನುಲಿಯಾಗಿದ್ದು ಪ್ರಮುಖವಾಗಿ ಮೀನುಗಾರ ಸಮುದಾಯವನ್ನು ಗಮನದಲ್ಲಿಟ್ಟು ಕಾರ್ಯ ರೂಪಿಸುತ್ತಿದೆ. 2018ರಲ್ಲಿ ನೆರೆ ಪರಿಸ್ಥಿತಿಯ ಸಂದರ್ಭದಲ್ಲಿ ರೇಡಿಯೋ ನೇಥಲ್ ಕೇಂದ್ರವು ಸಮುದಾಯದ ಜನರ ಹಿತಕ್ಕಾಗಿ ನೆರವಾದ ಬಗೆ; ಕೋವಿಡ್ 19 ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ ಸಮುದಾಯ ಜಾಗೃತಿಗಾಗಿ ಮಾಡಿದ ನಿರಂತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ರೇಡಿಯೋ ಸಾರಂಗ್ 107.8FM ನ ನಿರ್ದೇಶಕರಾದ ಡಾ.ಫಾ. ಮೆಲ್ವಿನ್ ಪಿಂಟೋ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.   

-ಶ್ವೇತಾ ಇಂದಾಜೆ