ಗ್ರಾಮೀಣ ಕ್ರೀಡಾ ಪ್ರತಿಭೆ ಅಶ್ವಿನಿ ಅರಳ ಅವರು ಜುಲಾಯಿ 21ರಂದು ರೇಡಿಯೋ ಸಾರಂಗ್ ಹೃದಯರಾಗ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳಿಂದ ಕೇಳುಗರ ಜೊತೆ ಸಂವಾದ ನಡೆಸಿದರು. ಹಲವು ಸಂಕಷ್ಟಗಳ ನಡುವೆಯೂ ತಾನು ಕ್ರೀಡೆಯಲ್ಲಿ ಸಾಧನೆ ಮಾಡಲು ಕುಟುಂಬ ಮತ್ತು ಸ್ನೇಹಿತರ ಪ್ರೀತಿಯೇ ಕಾರಣ ಎಂದರು.
ಅಶ್ವಿನಿಯವರು 100 ಮತ್ತು 200 ಮೀಟರ್ ಓಟದಲ್ಲಿ ಮಾತ್ರವಲ್ಲದೆ ಡಿಸ್ಕಸ್ ಥ್ರೋ ಮತ್ತು ಹೆಪಾಥ್ಲೋನ್ ಸ್ಪರ್ಧೆಗಳಲ್ಲೂ ಕೂಡ ಅಪ್ರತಿಮ ಸಾಧನೆಗೈದಿದ್ದಾರೆ. ಕೇಳುಗರ ಶುಭಾಶಯ ಹಾಗೂ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, "ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಸಾವಯವ ಆಹಾರವನ್ನು ತಿನ್ನಬೇಕು," ಎಂದು ಸಲಹೆ ಕೊಟ್ಟರು.
ಸರಳ ಆಹಾರ ಪದ್ಧತಿ ಹಾಗೂ ಸತತ ಪ್ರಯತ್ನದಿಂದ ಕ್ರೀಡೆಯಲ್ಲಿ ಯಶಸ್ಸು ಗಳಿಸಬಹುದು. ಅಲ್ಲದೆ ಹಲವು ಅಡೆತಡೆಗಳು ಎದುರಾದರೂ ಏಕಾಗ್ರತೆಯಿಂದ ಪರಿಶ್ರಮಪಟ್ಟರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಅಶ್ವಿನಿ ಅರಳ ಅವರು ಅಭಿಪ್ರಾಯಪಟ್ಟರು.
ಆಶ್ವಿನಿ ಅವರಿಗೆ ಪ್ರಜಾವಾಣಿ ಕ್ರೀಡಾರತ್ನ ಪ್ರಶಸ್ತಿ ಕೂಡಾ ದೊರೆತಿದೆ. ಸನ್ಮಾನದ ಜೊತೆ ಹಲವಾರು ಅವಮಾನಗಳು ಎದುರಾದಾಗ ಇವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದೂ ಇದೆ. ಆದರೆ ಧೈರ್ಯದಿಂದ ಮಾನಸಿಕ ಒತ್ತಡದಿಂದ ಹೊರಬಂದರು. ಇವರಿಗೆ ಕ್ರೀಡೆ ಯ ಜೊತೆ, ಕೃಷಿ ಚಟುವಟಿಕೆಯೂ ಆಸಕ್ತಿದಾಯಕವಾದದ್ದು. ಜೊತೆಗೆ, ನೈಸರ್ಗಿಕ, ಸಾವಯವ ಉತ್ಪನ್ನಗಳನ್ನು ಮಾರುವ ’ಮಲ್ನಾಡ್ ಮಳಿಗೆ’ಯನ್ನು ಕೂಡ ಅವರು ನಡೆಸುತ್ತಿದ್ದಾರೆ. ಅಲ್ಲದೆ ಈಗಲೂ ಕ್ರೀಡೆಯಲ್ಲಿ ಭಾಗವಹಿಸುವ ಇವರ ಕ್ರೀಡಾಸ್ಫೂರ್ತಿ ಎಲ್ಲರಿಗೂ ಆಶಾದಾಯಕ. ಅಶ್ವಿನಿ ಅರಳ ಇವರ ಪ್ರತಿಭೆ ಇನ್ನಷ್ಟು ಬೆಳಗಲಿ ಎನ್ನುವುದು ರೇಡಿಯೋ ಸಾರಂಗ್ ನ ಆಶಯ.
- ಶ್ವೇತಾ ಇಂದಾಜೆ, ರೇಡಿಯೋ ಸಾರಂಗ್