ಸಮೋಸಜ್ಜನ ಪ್ರಾಮಾಣಿಕತೆಗೆ ಸಲಾಂ

ಸಮೊಸಜ್ಜ M M ಮಳಗಿಯ ಪ್ರಾಮಾಣಿಕ ಬದುಕಿಗೆ ಮತ್ತೊಂದು ಗರಿ!

ವಯಸ್ಸು 81 ಆದರೂ ದುಡಿದು ಬದುಕು ಕಟ್ಟಿಕೊಂಡ ಆದುನಿಕ ಗಾಂಧಿಯಂತಹ ವ್ಯಕ್ತಿತ್ವ.

ನಗರದ ಸಂತ ಆಲೋಶಿಯಸ್ ಸಂಸ್ಥೆ ಯಲ್ಲಿ ಕಳೆದ 5-6 ದಶಕಗಳಿಂದ LKG ಮಕ್ಕಳಿಂದ  ಹಿಡಿದು Ph.D ಮಾಡುವ ವಿದ್ಯಾರ್ಥಿಗಳಿಗೂ, ಶಿಕ್ಷಕ-ಶಿಕ್ಷಕೇತರ ವರ್ಗಕ್ಕೂ, ಸಂಸ್ಥೆಯ ಆಡಳಿತ ವರ್ಗ ಮತ್ತು ವರಿಷ್ಠ ರಿಗೂ ಸಮೋಸಜ್ಜನ ಮೇಲೆ ದೊಡ್ಡ ಗೌರವವಿದೆ.

ಸಾರಂಗ್ ಕಛೇರಿಗಿಂದು ಸಮೋಸದೊಂದಿಗೆ ಸಮೊಸಜ್ಜನ ಆಗಮನ.  ಆ ಸಂಧರ್ಭದಲ್ಲಿ ಸಮೋಸ ಕೊಟ್ಟು ಸಮೋಸಜ್ಜರವರ ನಿರ್ಗಮನ. ಕೆಲವು ಹೊತ್ತಿನ ಬಳಿಕ ಸಮೋಸಜ್ಜ ಬೊಬ್ಬೆಯಿಡುತ್ತ ಕಛೇರಿಗೆ ಹದಿನೆಂಟರ ಯುವಕನಂತೆ ತಮ್ಮ ಕೈಚೀಲ ಹಾಗೂ ಸಮೋಸದೊಂದಿಗೆ ಮತ್ತೆ ಪ್ರತ್ಯಕ್ಷ.!!

ಕಾರಣ ಕೇಳಿದರೆ ನಾವೆಲ್ಲರೂ ಹೆಮ್ಮೆಪಡುವಂತಹ ಕೆಲಸವನ್ನು ಸಮೋಸಜ್ಜ ಮಾಡಿದ್ದರು.

“ನನ್ನ ಕೈಚೀಲದಲ್ಲಿ ಯಾರದೊ ಪರ್ಸ್ ಸಿಕ್ಕಿದೆ.. ನಿಮ್ಮವರಲ್ಲಿ ಯಾರದ್ದೋ  ಆಗಿರಬೇಕು. ನಾನು ಬೇರೊಂದು ಕಡೆ ಸಮೋಸ ಮಾರುವಾಗ ನನಗದು ಸಿಕ್ಕಿತು,” ಅಂದರು.

ಹೀಗೆ ನಾವು ನಮ್ಮ ಪ್ಯಾಂಟಿನ ಕೀಸೆಗಳನ್ನು ಹುಡುಕುವಾಗ ನಮ್ಮ ಸಿಬ್ಬಂದಿಯೋರ್ವರು ಸಮೋಸ ನೋಡಲು ಸಮೋಸಜ್ಜರ ಕೈಚೀಲದೊಳಗೆ ಬಗ್ಗಿ ನೋಡುವಾಗ ಪರ್ಸ್ ಜಾರಿ ಬಿದ್ದಿರಬೇಕೆಂದು ಖಾತ್ರಿಯಾಯಿತು.

ನಂತರ ತಮ್ಮ ಪರ್ಸಲ್ಲಿ 560 ರೂಪಾಯಿ ಹಣಯಿತ್ತೆಂದು ನನ್ನ ಗೆಳೆಯ ಪರ್ಸ್ ತೆರೆದಾಗ 560 ರೂಪಾಯಿ ಹಾಗೇನೆಯಿದ್ದದು ಕಂಡು ಸಮೋಸಜ್ಜನ ಹತ್ತಿರ ಪ್ರಶ್ನೆಯೊಂದನ್ನು ಕೇಳಿದೆ: “ನೀವು ಪರ್ಸ್ ಮರಳಿಸುದ್ದು ಯಾಕೆ?”

ಸಮೋಸಜ್ಜನ  ಪ್ರತ್ಯುತ್ತರ: “ಸಿಕ್ಕಿದಕ್ಕೆ ಆಸೆ ಪಡಬಾರದು. ದುಡಿದು ಪ್ರಾಮಾಣಿಕ ಬದುಕು ನಡೆಸಬೇಕು. ಆಗ ಭಗವಂತ ಮೆಚ್ಚುತ್ತಾನೆ. ದುರಾಸೆಯಿಂದ ಮಾನವನ ಬದುಕು ಸರ್ವನಾಶವಾಗುತ್ತೆ. ಯಾವತ್ತು ಪರರ ಸೊತ್ತು ಸಿಕ್ಕಿದ್ರೆ ಬಚ್ಚಿಡದೆ ಹಿಂತಿರುಗಿಸಬೇಕು.” 

ಸಮೋಸಜ್ಜನ ಪ್ರಾಮಾಣಿಕತೆಗೆ ಸಲಾಂ

- ರೋಶನ್ ಕ್ರಾಸ್ತಾ, ರೇಡಿಯೋ ಸಾರಂಗ್