ನಾವು ಸ್ವಯಂ ಜಾಗ್ರತರಾಗುವುದು ಪ್ರಕೃತಿಗೆ ಕೊಡುವ ದೊಡ್ಡ ಕೊಡುಗೆ: ನಿತಿನ್ ವಾಸ್

ಜುಲಾಯಿ 27ರ ಶುದ್ದ ಜಲ ಸ್ವಚ್ಛ ನೆಲ ಕಾರ್ಯಕ್ರಮದಲ್ಲಿ ಪೇಪರ್ ಸೀಡ್ ಸಂಸ್ಥೆಯ ರೂವಾರಿ ಮತ್ತು ಪರಿಸರ ಪ್ರೇಮಿಯಾಗಿರುವ ನಿತಿನ್ ವಾಸ್ ಭಾಗವಹಿಸಿದ್ದರು. ಆರಂಭದಲ್ಲಿ ತನ್ನ ಹುಟ್ಟೂರನ್ನು ಪರಿಚಯಿಸಿದ ಅವರು ನಂತರ ಪೇಪರ್ ಸೀಡ್ ಸಂಸ್ಥೆಯನ್ನು ಯಾಕಾಗಿ ಆರಂಭಿಸಿದೆ, ಅದರ ಹಿಂದಿರುವ ಉದ್ದೇಶ ಎಲ್ಲವನ್ನೂ ಹಂತ ಹಂತವಾಗಿ ವಿವರಿಸುತ್ತಾ ಹೋದರು.

“ದುಬೈಯಲ್ಲಿ ನಾನು ಹುದ್ದೆಯಲ್ಲಿದ್ದೆ. ಆದರೆ  ಅದನ್ನು ತ್ಯಜಿಸಿ ಊರಿಗೆ ಬಂದು ನೆಲೆಸಿ ಮಾಲಿನ್ಯಮುಕ್ತ ಪರಿಸರ ಸಂರಕ್ಷಣೆ ಮಾಡಬೇಕು, ಸ್ವಚ್ಚತೆ ಬಗ್ಗೆ ತನ್ನಿಂದಾಗುವ ಕೊಡುಗೆ ನೀಡಬೇಕು ಎನ್ನುವ ನೆಲೆಯಲ್ಲಿ ನನ್ನದೇ ಕಲ್ಪನೆಯ ಮೂಲಕ ಪೇಪರ್ ಸೀಡ್ ಸಂಸ್ಥೆಯನ್ನು ಸ್ಥಾಪಿಸಿದೆ,” ಎಂದರು.

ಓದಿ ಬಿಸಾಡುವ ಹಳೆಯ ರದ್ದಿ ಪೇಪರ್’ಗಳನ್ನು ತನ್ನ ಸ್ವಯಂಸೇವಕರ ಮೂಲಕ ಸಂಗ್ರಹಿಸಿ ಹಳೆಯ ವಿಧಾನ ಬಳಸಿ ಹೊಸದಾಗಿ ಪೇಪರ್ ತಯಾರಿಸಿ ಅದರಿಂದ ಆಮಂತ್ರಣ ಪತ್ರಿಕೆ, ಪೆನ್, ಪೆನ್ಸಿಲ್ ವಸ್ತುಗಳನ್ನು ಹೇಗೆ ತಯಾರು ಮಾಡುತ್ತಿದ್ದೇನೆ ಎಂದು ನಿತಿನ್ ಅವರು  ಸವಿವರವಾಗಿ ತಿಳಿಸುತ್ತಾ ಹೋದರು, ಮಾತ್ರವಲ್ಲ ಯಾವ್ಯಾವ ತರಕಾರಿ ಬೀಜಗಳನ್ನು, ವಿವಿಧ ಜಾತಿಯ ಹೂವಿನ ಗಿಡದ ಬೀಜಗಳನ್ನು ಅಳವಡಿಸುತ್ತಿದ್ದೇನೆಂದು ಮತ್ತು ಅದು ಮಣ್ಣಲ್ಲಿ ಹಾಕಿದ್ರೆ ಹೇಗೆ ಮೊಳಕೆ ಒಡೆದು ಗಿಡಗಳಾಗಿ ಬೆಳೆಯುತ್ತೆ ಅಂತ ತಿಳೀಸಿದರು. “ಈ ರೀತಿ ನನ್ನಿಂದ ತಕ್ಕ ಮಟ್ಟಿಗೆ ಪರಿಸರ ಸಂರಕ್ಷಣೆ, ಪ್ಲಾಸ್ಟಿಕನ್ನು ಕಡಿಮೆ ಬಳಕೆ ಮಾಡಲು ಪ್ರಯತ್ನಿಸುತ್ತಿದ್ದೇನೆ” ಅಂದರು.

ಪರಿಸರಸ್ನೇಹಿ ವಸ್ತುಗಳನ್ನು ಜನಸ್ನೇಹಿ ವಸ್ತುಗಳನ್ನಾಗಿ ಮಾಡಲು ಪ್ರಯತ್ನಪಡುತ್ತಿರುವ ಬಗ್ಗೆ ಹಲವಾರು ವಿಚಾರಗಳನ್ನು ನಿತಿನ್ ಅವರು ಕೇಳುಗರಿಗೆ ತಿಳಿಸ್ತಾ ಹೋದರು. ಇತ್ತೀಚೆಗೆ ಪರಿಸರಸ್ನೇಹಿ ಮಾಸ್ಕ್ ಮತ್ತು ಮಂಗಳೂರು ಬೊಂಬೆ ತಯಾರಿಸಿ ರಾಷ್ಟ್ರಾದ್ಯಂತ ಗುರುತಿಸಿಕೊಂಡ ಬಗ್ಗೆ, ತನ್ನ ವಸ್ತುಗಳಿಗೆ ವಿದೇಶಿಗರೂ ಬೇಡಿಕೆ ಇಡುತ್ತಿರುವುದರಿಂದ ಅವರಿಗೂ ರಪ್ತು ಮಾಡುತ್ತಿದ್ದೆ ಅಂತ ಖುಶಿಯಿಂದ ಹೇಳಿದರು.

ಇನ್ನೂ ಯಾವೆಲ್ಲಾ ವಸ್ತುಗಳನ್ನು ತಯಾರು ಮಾಡ್ತಿದ್ರಿ? ಹೇಗೆ ಖರ್ಚುಗಳನ್ನು ಸರಿದೂಗಿಸ್ತೀರಿ ಎಂಬ ಕೇಳುಗರೊಬ್ಬರ ಪ್ರಶ್ನೆಗೆ ಅವರು “ನಾನು ಚಿಕ್ಕ ಚಿಕ್ಕ ಗಣಪತಿ ವಿಗ್ರಹ, ರಕ್ಷಾ ಬಂಧನಕ್ಕೆ ರಾಖಿ, ಬಾವುಟಗಳನ್ನೂ ಮಾಡಿ ಅಲ್ಲಿ ಕೂಡ ಹಲವು ಬಗೆಯ ಬೀಜಗಳನ್ನು ಹಾಕಿ ನಾನಾ ಹಂತದ ಪ್ರಕ್ರಿಯೆಗೆ ಒಳಪಡಿಸಿ ಅದನ್ನು ಸಂಪೂರ್ಣ ನೈಸರ್ಗಿಕ ವಿಧಾನಗಳಿಂದಲೇ ತಯಾರಿಸುತ್ತೇನೆ,” ಅಂದರು.

ಮಾತಿನ ಮಧ್ಯೆ ತಮ್ಮ ತಂದೆಯನ್ನು ನೆನೆದ ನಿತಿನ್ ಅವರು ಭಾವುಕರಾಗಿ ಅವರೇ ನನಗೆ ಪ್ರೇರಣೆಯಾಗಿದ್ದವರು, ಈಗ ಬದುಕಿರುತ್ತಿದ್ದರೆ ಎಷ್ಟು ಸಂತೋಷಪಡುತ್ತಿದ್ದರೋ ಎನ್ನುತ್ತಾ, ಮನೆಯವರು ತನಗೆ ನೀಡುತ್ತಿದ್ದ ಸಹಕಾರವನ್ನು ಸ್ಮರಿಸಿದರು.

ಕೊನೆಯಲ್ಲಿ ಸಾರಂಗ್ ಕೇಳುಗರಿಗೆ ನಿಮ್ಮ ಕಿವಿ ಮಾತು ಏನೆಂದು ಕೇಳಿದಾಗ, “ಪರಿಸರ ಸಂರಕ್ಷಣೆ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ನಾವು ಮುಖ್ಯವಾಗಿ ಗಮನ ಹರಿಸಬೇಕು. ಇದು ನಮ್ಮ ಮೂಲ ಉದ್ದೇಶವಾಗಿರಬೇಕು. ನಾವು ಸ್ವಯಂ ಜಾಗೃತರಾದರೆ ಸಾಕು,  ಅದೇ ನಾವು ಪ್ರಕೃತಿಗೆ ನೀಡುವ ಗೌರವ,” ಎಂದು ಹೇಳಿದರು.

- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್