ಬಿ.ಕೆ. ಮಾಧವ ರಾವ್ ತಮ್ಮ ಊರಿನ ನೆರೆಮನೆಯ ಚಿತ್ರ ಕಲಾವಿದನೊಬ್ಬ ಚಿತ್ರ ಬಿಡಿಸುವುದನ್ನು ಗಮನಿಸಿ, ಗ್ರಹಿಸಿ ಏಕಲವ್ಯನಂತೆ ತನಗೆ ತಾನೇ ಗುರುವಾಗಿ ಬೆಳೆದ ಚಿತ್ರ ಕಲಾವಿದ. ಬಡತನದಲ್ಲಿ ಶಾಲೆ ಕಲಿಯುವುದೇ ಕಷ್ಟವಾಗಿರುವಾಗ ಚಿತ್ರ ಕಲಾಸಕ್ತಿಗೆ ಪ್ರೋತ್ಸಾಹ ಸಿಗುವುದು ಅಸಾಧ್ಯದ ಮಾತಾಗಿತ್ತು. ಆದರೂ ಛಲ ಬಿಡದೆ ಚಿತ್ರಕಲೆಯ ಅಪಾರ ಜ್ಞಾನವನ್ನು ಚಿತ್ತಬಿತ್ತಿಯಲ್ಲಿ ಬೆಳೆಸಿ ಚಿತ್ರಿಸಿ ರಾಷ್ಟೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ.
ಜುಲಾಯಿ 28ರಂದು ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಧವ ರಾವ್ ತಮ್ಮ ಕಲಾಬದುಕಿನ ಬಗ್ಗೆ ಮಾತಾಡಿದರು. ಇವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ B.Com ಪದವಿ ಕಲಿಯುತ್ತಿದ್ದಾಗ ಕಾಲೇಜಿನ ನೋಟೀಸ್ ಬೋರ್ಡಿನಲ್ಲಿ ಸಹಪಾಠಿಯೊಬ್ಬರು ಬಿಡಿಸಿದ ನೈಜ 100ರ ನೋಟನ್ನು ಹೋಲುವ ಚಿತ್ರವನ್ನು ವೀಕ್ಷಿಸಿ ಪ್ರೇರಣೆ ಪಡೆದು ಚಿತ್ರರಚನೆಗೆ ಗಂಭೀರವಾಗಿ ತೊಡಗಿಸಿಕೊಂಡರು. ಆಯಿಲ್ ಪೇಂಯ್ಟಿಂಗ್, ಜಲವರ್ಣ, ಆಕ್ರಿಲಿಕ್, ಮಸಿ ಪೆನ್ಸಿಲ್’ನಿಂದ ಪ್ರಕೃತಿ, ಚುಕ್ಕಿಚಿತ್ರ, ಗಣ್ಯರ ಚಿತ್ರಗಳನ್ನು ಬಿಡಿಸಿ ಖ್ಯಾತರಾಗಿದ್ದಾರೆ.
ಮಾಧವ ರಾವ್ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತನ್ನ ಯಶಸ್ಸಿಗೆ ಮನೆಯವರ ಪ್ರೋತ್ಸಾಹ, ಗೆಳೆಯರ ಒತ್ತಾಸೆ, ತಾನು ಕೆಲಸ ಮಾಡುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಿಬ್ಬಂದಿಗಳ ಸಹಕಾರವು ಅನನ್ಯವೆಂದು ಸ್ಮರಿಸಿದರು.
ಅಂಚೆಕಾರ್ಡಿನ ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಅಂಚೆ ಕುಂಚ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನ ಪಡೆದಿದ್ದು ನಿರಂತರ ಕಲಾಸಕ್ತಿ ಚಿಗುರಲು ಸಾಧ್ಯವಾಯಿತು ಎಂದರು. ನಾಟಕ ಕಲಾವಿದ ಮಾ. ಹಿರಣ್ಣಯ್ಯ, ಚಿತ್ರನಟ ವಿಜಯ ರಾಭವೇಂದ್ರ, ಪೇಜಾವರ ಸ್ವಾಮೀಜಿ, ಡಾ. ವೀರೇಂದ್ರ ಹೆಗ್ಗಡೆಯವರ ಮೆಚ್ಚುಗೆ ಪಡೆದಿದ್ದಾರೆ. ಇವರ ಕಲಾಸಾಧನೆಗೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ. ಇವರು ಗ್ರೀಟಿಂಗ್ ಕಾರ್ಡ್, ವೆಡ್ಡಿಂಗ್ ಕಾರ್ಡ್’ನಲ್ಲಿ ರಚಿಸಿದ ನವಿಲುಗರಿಯ, ಮರದ ಹಾಗೂ ಕಾಗದ ಹಾಳೆಯ ಎಲೆಯಲ್ಲಿ ಚಿತ್ರಿಸಿದ ಚಿತ್ರಗಳು ಚಿತ್ತಾಕರ್ಷಕವಾಗಿದ್ದು ಇವರ ಸೃಜನಶೀಲತೆಗೆ ಸಾಕ್ಷಿಯಾಗಿವೆ. ಇವರು ಮಹಮ್ಮದ್ ರಫಿ, ಕಿಶೋರ್ ಕುಮಾರ್, ಮುಖೇಶ್ ಕುಮಾರ್ ಅವರ ಹಿಂದಿ ಹಾಡುಗಳನ್ನು ಆಲಿಸುತ್ತಾ ಚಿತ್ರ ರಚಿಸುತ್ತಾರೆ ಎಂದರು.
ಈಗ ವೃತ್ತಿಯಿಂದ ನಿವೃತ್ತರಾದರೂ ಮಾಧವ ರಾವ್ ಅವರ ಪ್ರವೃತ್ತಿ ವೇಗ ಪಡೆದುಕೊಂಡಿದೆ. 67ರ ವಯಸ್ಸಿನಲ್ಲೂ ಕ್ರಿಯಾಶೀಲರಾಗಿರುವ ಇವರು ರೇಡಿಯೋ ಸಾರಂಗ್ ನ ಹೃದಯರಾಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಳುಗರ ಜೊತೆ ಹರ್ಷಭರಿತರಾಗಿ ಮಾತನಾಡಿದರು.