“ಸರಕಾರ ಕ್ರೀಡಾಪಟುಗಳಿಗೆ ಈಗ ನೀಡುತ್ತಿರುವ ಸೌಲಭ್ಯ ಆಗ ನನಗೆ ದೊರೆತಿದ್ದರೆ ನಾನು ಕೂಡಾ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿದ್ದೆ. ಇದುವರೆಗೂ ಕ್ರೀಡಾಕ್ಷೇತ್ರದಲ್ಲಿ ನಾನು ಮಾಡಿದ ಸಾಧನೆಯ ಹಿಂದೆ ನನ್ನ ಪರಿಶ್ರಮದ ಜೊತೆಗೆ ಸ್ವಂತ ಹಣ ಇತರರನ್ನು ಕಾಡಿಬೇಡಿ ಪಡೆದ ಸಹಕಾರ ಮೂಲ ಕಾರಣ,” ಎಂದು ರಾಜ್ಯ ರಾಷ್ಟ್ರೀಯ ಅತ್ಲೆಟಿಕ್ ಪ್ರೀತಂ ಕುಮಾರ್ ಮನದಾಳದ ಮಾತು ನುಡಿದರು.
ಆಗಸ್ಟ್ 11 ರಂದು ರೇಡಿಯೋ ಸಾರಂಗ್ ನ ಹೃದಯರಾಗ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮೂಲತ: ಕೋಟೆಕಾರು ಗ್ರಾಮದ ಕೊಲ್ಯದಲ್ಲಿ ನೆಲೆ ನಿಂತು ಬಡತನದಲ್ಲಿ ಅರಳಿದ ಪ್ರತಿಭೆ ಪ್ರೀತಂ ಕುಮಾರ್ ಬಾಲ್ಯದಲ್ಲಿ ಅಂಗನವಾಡಿಯಿಂದಲೇ ದೇಶದ ಹಲವಾರು ಮೈದಾನಗಳಲ್ಲಿ ಮೆರೆದಾಡಿದ್ದು ರಾಜ್ಯ ರಾಷ್ಟೀಯ ಮನ್ನಣೆ ಪಡೆದಿದ್ದಾರೆ.
ಕೋಟೆಕಾರಿನ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಕಲಿಕೆ ಸಾಗಿದಾಗ ಇವರಲ್ಲಿದ್ದ ಸುಪ್ತ ಕ್ರೀಡಾ ಪ್ರತಿಭೆಯನ್ನು ಗುರುತಿಸಿದವರು ಅಲ್ಲಿನ ದೈಹಿಕ ಶಿಕ್ಷಕರಾದ ದಿ| ಜಲಂದರ ರೈ ಇವರು. ನಂತರ ಪುರುಷೋತ್ತಮ ಪುಜಾರಿ ಇವರ ಗರಡಿಯಲ್ಲಿ ಅಪಾರ ಜ್ಞಾನವನ್ನು ಸಂಪಾದಿಸಿದ್ದು ಜೊತೆಗೆ ಗ್ರೇಸ್ ನೊರೋನ್ಹಾ ಮತ್ತು ಫಾ. ವಿಕ್ಟರ್ ಮಚಾದೊ ಇವರು ಮಾಡಿದ ಉಪಕಾರ, ಸಹಕಾರ ಅನನ್ಯ ಎಂದು ಸಂದರ್ಶನದಲ್ಲಿ ನುಡಿದರು.
ಇವರಿಗೆ ಕ್ರೀಡೆಯ ಜೊತೆಗೆ ಕೃಷಿಯಲ್ಲಿ ಕೂಡ ಆಸಕ್ತಿ. ಪ್ರಸ್ತುತ ಇವರು ಕಾರ್ಯನಿರ್ವಹಿಸುತ್ತಿರುವ ಉಳ್ಳಾಲದ ಭಾರತ ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗೆಗೆ ಆಸಕ್ತಿ ಬೆಳೆಸುತ್ತಿದ್ದಾರೆ, ಮಾತ್ರವಲ್ಲ ಉಳ್ಳಾಲ ನಗರಸಭೆಯವರು ನೀಡಿದ ಹಸಿಕಸದಿಂದ ಗೊಬ್ಬರ ತಯಾರಿಸಿ ತಾರಸಿ ಕೃಷಿ, ಬಾಳೆ ಕೃಷಿ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿ ಮಾದ್ಯಮಗಳು ನೀಡಿದ ಸಹಕಾರದಿಂದ ಈಗಲೂ ಕೃಷಿ ಬಗೆಗಿನ ಒಲವು ಜೀವಂತವಾಗಿದೆ ಎನ್ನುತ್ತಾರೆ.
“ನಾನು ಕ್ರೀಡಾ ತರಬೇತುದಾರ, ದೈಹಿಕ ಶಿಕ್ಷಕನಾಗದೆ ಇರುತ್ತಿದ್ದರೆ ಕಟ್ಟಡ ಕಾರ್ಮಿಕನಾಗಿ ಇರುತ್ತಿದ್ದೆ. ನಾನು ಪಡೆದ ಬಿ.ಪಿ.ಎಡ್,, ಎಮ್.ಪಿ.ಎಡ್. ಪದವಿ, ಹಿರಿಯರ ಮಾರ್ಗದರ್ಶನ, ಗೆಳೆಯರ, ಕುಟುಂಬದ ಪ್ರೋತ್ಸಾಹ ನನ್ನನ್ನು ಬೆಳೆಸಿದೆ,” ಎಂದು ಮಾರ್ಮಿಕವಾಗಿ ನುಡಿದರು.
ಸಾರಂಗ್ ರೇಡಿಯೋ ಸಂದರ್ಶನಕ್ಕೆ ಸಂತ ಅಲೋಶಿಯಸ್ ಕಾಲೇಜಿಗೆ ಬಂದ ಪ್ರೀತಂ ಕುಮಾರ್ ಅವರು ಕಾಲೇಜಿನಲ್ಲಿ ಪಡೆದ ಕ್ರೀಡಾನುಭವ ನೆನೆಸಿಕೊಂಡರು. ಕ್ರೀಡೆಯ ಜೊತೆಗೆ ಗಾಯನ ಸಹ ಇವರ ಚಿತ್ತವನ್ನು ಆಕರ್ಷಿಸಿದ್ದು, ಭಕ್ತಿಗೀತೆ, ಹಾಡುಗಳನ್ನು ರಚಿಸಿ ಹಾಡುವುದು ಇವರ ಹವ್ಯಾಸ. ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಬಳಗದಲ್ಲಿ ಇವರು ಚಾಟ್ ಕೂಡ ನಡೆಸುತ್ತಾರೆ.
ಹಲವಾರು ಕೇಳುಗರು ದೂರವಾಣಿ ಕರೆ ಮಾಡಿ ಪ್ರೀತಂ ಕುಮಾರ್ ಅವರ ಜೊತೆ ಸಂವಾದ ನಡೆಸಿದರು.
- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್