’ಗೇನದ ನಡೆ’ 100ರ ಸಂಭ್ರಮದಲ್ಲಿ ಡಾ. ಗಣೇಶ್ ಅಮೀನ್ ಸಂಕಮಾರ್

"ತುಳು ಪಾದ೯ನದ ಮೂಲದಿಂದ ತುಳುಭಾಷೆ ಬೆಳೆಯಬೇಕು," ಎಂದು ತುಳು ಜಾನಪದ ವಿದ್ವಾಂಸರಾದ ಡಾ.ಗಣೇಶ್ ಅಮೀನ್ ಸಂಕಮಾರ್ ನುಡಿದರು. ಅವರು ಡಿಸೆಂಬರ್ 04, ಶನಿವಾರದ ತುಳು ಚಾವಡಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಗೇನದ ನಡೆ 100ನೇ ಅನುಭವ ಸಂಚಿಕೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

"ರೇಡಿಯೋ ಸಾರಂಗ್ ನನ್ನ ಬರವಣಿಗೆ ಎಂಬ ಬೆಳೆಗೆ ನೀರು, ಗೊಬ್ಬರ ಹಾಕಿ ಪೋಷಿಸಿದ ಮಾಧ್ಯಮ,"ಎಂದರು; ಹಾಗೂ ಗೇನದ ನಡೆಯ 100 ಸಂಚಿಕೆಗಳಲ್ಲಿ ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ, ಕೃಷಿ ಹಾಗೂ ದೈವಾರಾಧನೆ ಈ ವಿಚಾರಗಳಿಗೆ ಸಂಬಂಧಪಟ್ಟು 100 ವಿಷಯಗಳು ಇದರಲ್ಲಿ ತುಂಬಿಕೊಂಡಿವೆ ಎಂದು ಅಭಿಪ್ರಾಯಪಟ್ಟರು.

ಗೇನದ ನಡೆಯ "ಬಾನ ಮಂಡಲ, ಭೂಮಿ ಗುಂಡಲ" ಎಂಬ ಶೀಷಿ೯ಕೆ ಗೀತೆಯ ಅಥ೯ವನ್ನು ಈ ಕಾರ್ಯಕ್ರಮದಲ್ಲಿ ನೀಡಿದರು. ಬಾನು ಹಾಗೂ ಭೂಮಿಗೆ ಅತ್ಯುತ್ತಮ ಸಂಬಂಧವಿದೆ ಎಂದರು ಮತ್ತು ಅವರೇ ರಚಿಸಿದ "ಬಂಗಾರೆನ್ನ ತೊಟ್ಟಿಲ್’ಡ್ ಪುಂಚದ ಬಾಲೆ" ಎಂಬ ಸಾಹಿತ್ಯದ ಹಿಂದಿನ ನಿಜವಾದ ಕಥೆಯನ್ನು ಅತ್ಯುತ್ತಮವಾಗಿ ತಿಳಿಸಿದರು.

"ತುಳು ಭಾಷೆ ಬೆಳೆದರೆ ಮಾತ್ರ ಬದುಕು ಮುಂದುವರಿಯಬಹುದು," ಎಂಬ ತಮ್ಮ ಗುರುಗಳಾದ ಕೆದಂಬಾಡಿ ಜತ್ತಪ್ಪ ರೈಗಳ ಮಾತುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ತಮ್ಮ ಕೃಷಿ ಬದುಕಿನ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ತಿಳಿಸಿದರು.

ಇವರು ಈ ಕಾರ್ಯಕ್ರಮದಲ್ಲಿ ತಮ್ಮ ತುಳು ಪಾದ೯ನದ ಅಧ್ಯಯನದ ಗುರುಗಳಾದ ಪ್ರೊ. ಬಿ. ಎ. ವಿವೇಕ್ ರೈ ಅವರನ್ನು ನೆನಪಿಸಿಕೊಳ್ಳುತ್ತಾ,"ತುಳು ಭಾಷೆ ಅಥ೯ವಾಗಬೇಕಾದರೆ ತುಳು ಪುಸ್ತಕ, ಪಾದ೯ನ ಓದಬೇಕು, ತುಳು ಪಾದ೯ನ ಲೋಕಕ್ಕೆ ಪ್ರವೇಶಿಸಿ ಅದರ ಅಥ೯ವನ್ನು ತಿಳಿಯಬೇಕು ಆ ಮೂಲಕ ತುಳು ಭಾಷೆಯನ್ನು ಬೆಳೆಸಬೇಕು," ಎಂದು ಡಾ. ಸಂಕಮಾರ್ ಯುವಜನತೆಗೆ ಸಂದೇಶ ನೀಡಿದರು.

ಈ ಕಾರ್ಯಕ್ರಮದಲ್ಲಿ ಕೇಳುಗರು ಪ್ರಶ್ನೆಗಳನ್ನು ಕೇಳಿ ಡಾ. ಗಣೇಶ್ ಅಮೀನ್ ಸಂಕಮಾರ್ ಅವರ ಜೊತೆ ಸಂವಾದ ನಡೆಸಿದರು.

- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್