Abdul Rahiman Kuttettoor ಮೈಕಾಲ್ತೊ ಪಲಕ ಕಾರ್ಯಕ್ರಮದಲ್ಲಿ ಕವಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು

ದಿನಾಂಕ ಮಾರ್ಚ್ 17 ರಂದು ಮೈಕಾಲ್ತೊ ಪಲಕ ಬ್ಯಾರಿ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕವಿ ಅಬ್ದುಲ್ ರಹಿಮಾನ್ ಕುತ್ತೆತೂರು ಭಾಗವಹಿಸಿದ್ದರು.

ಆರಂಭದಲ್ಲಿ ಬಾಲ್ಯದ ರಮಣೀಯ ನೆನಪುಗಳನ್ನ ಒಂದೊಂದಾಗಿ ಹೇಳುತ್ತಾ ಹೋದ ಅವರು, ಕೃಷಿ ಪ್ರಧಾನ ಕುಟುಂಬದಿಂದ ಬಂದವನು ನಾನು; ನಾನು ಬೆಳೆದ ಸುತ್ತಮುತ್ತಲಿನ ನಿಸರ್ಗದ ಸೊಬಗೇ ನನ್ನ ಸಾಮಾಜಿಕ ಮಾನಸಿಕ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರಿತ್ತು. ಶಾಲೆಗೆ 5 ಕಿಲೋಮೀಟರ್ ದೂರ ನಡೆದುಕೊಂಡೇ ವಿದ್ಯಾಭ್ಯಾಸ ಮಾಡಿದ್ದು. ಅಲ್ಲಿ ಶಿಕ್ಷಕರ ಒಡನಾಟದಿಂದಾಗಿ ಬರವಣಿಗೆ, ಸಾಹಿತ್ಯ ಮತ್ತು ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಯಿತು.  ಪಠ್ಯವಲ್ಲದೇ ಇತರೆ ಅತ್ಯುತ್ತಮ ಸಾಹಿತ್ಯ ಕೃತಿಗಳು, ಪತ್ರಿಕೆಗಳನ್ನು ಓದುವುದು, ಹೀಗೆ ಕ್ರಮೇಣ ಅದು ಓದುವ ಹವ್ಯಾಸಕ್ಕೆ ತಿರುಗಿ ನಾನು ಒಳ್ಳೊಳ್ಳೆ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವಂತೆ ಮಾಡಿತು, ಎಂದರು.

ಮಹಾಭಾರತ, ರಾಮಾಯಣ ಇಂತಹ ಪುಸ್ತಕಗಳನ್ನು ಆ ಸಮಯದಲ್ಲಿ ಓದುತ್ತಿದ್ದೆ. ಯಕ್ಷಗಾನವನ್ನು ವೀಕ್ಷಿಸಲು ಹೋಗುತ್ತಿದ್ದೆ. ಆಗ ಅನೇಕ ಹೊಸ ಹೊಸ ಪದ ಸಂಪತ್ತು ಹೇರಳವಾಗಿ ಸಿಗುತಿತ್ತು. ಕಾಲೇಜು ಜೀವನದಲ್ಲೂ ನಾನು ಅನೇಕ ಪತ್ರಿಕೆಗಳಿಗೂ ಕನ್ನಡದಲ್ಲೇ ಲೇಖನ ಬರೆಯುತಿದ್ದೆ. ನಂತರದಲ್ಲಿ  ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಬರವಣಿಗೆ ಆರಂಭಿಸಿದೆ. ಹಾಗೆಯೇ ಬ್ಯಾರಿ ಭಾಷೆಗೆ ಸಂಭಂಧಪಟ್ಟ ಒಂದಿಷ್ಟು ವಿಚಾರಗಳನ್ನು ಹೇಳಿದರು.

ಬ್ಯಾರಿ ಭಾಷೆಯು ಹಲವು ಭಾಷೆಗಳ ಸಂಗಮದಿಂದ ಹುಟ್ಟಿಕೊಂಡ ಒಂದು ಭಾಷೆ. ಮಲಯಾಳಮ್, ತುಳು, ತಮಿಳು, ಕನ್ನಡ, ಉರ್ದು, ಅರೆಬಿಕ್ ಭಾಷೆಗಳ ಸಂಗಮದಿಂದುಂಟಾದ ಭಾಷೆ ಬ್ಯಾರಿ ಭಾಷೆ. ಬ್ಯಾರಿ ಭಾಷೆಯು ದ್ರಾವಿಡ ಭಾಷಾ ಪರಿವಾರದ ಒಂದು ಭಾಷೆಯಾದರೂ ಬ್ಯಾರಿಗಳು ಮುಸ್ಲಿಮರಾಗಿರುವುದರಿಂದ ಬ್ಯಾರಿ ಭಾಷೆಯಲ್ಲಿ ಧಾರಾಳ ಅರಬಿ ಪದಗಳೂ ಇವೆ. ಕೆಲವೊಂದು ಅರಬಿ ಪದಗಳು ಬ್ಯಾರಿಗಳ ಮಾತಿನಲ್ಲಿ ಅಪಭ್ರಂಶಗೊಂಡು ಈಗ ಸ್ವತಂತ್ರ ಬ್ಯಾರಿ ಪದಗಳೇ ಎಂಬಷ್ಟರ ಮಟ್ಟಿಗೆ ಮಾರ್ಪಾಟಾಗಿವೆ, ಎಂದರು.

ಈಗೀಗ ಅನೇಕ ಪುಸ್ತಕಗಳು ಬ್ಯಾರಿ ಭಾಷೆಯಲ್ಲಿ ಬರುತ್ತಿವೆ. ನಾನು ಪಂಚತಂತ್ರದ ಕಥೆಗಳು, ಕನಕದಾಸರ ಮುಂಡಿಗೆ ಮತ್ತು ಕೀರ್ತನೆಗಳು, ಸರ್ವಜ್ಞನ ವಚನಗಳನ್ನು ಬ್ಯಾರಿ ಭಾಷೆಗೆ ಅನುವಾದ ಮಾಡಿದ್ದನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪುಸ್ತಕ ಮಾಡಿ ಪ್ರಕಟಿಸಿದೆ ಅಂದರು.

ಕಾರ್ಯಕ್ರಮದಲ್ಲಿ ಅನೇಕ ಕೇಳುಗರು ಕರೆ ಮಾಡಿ ನಿಮ್ಮ ರಚನೆಯ ಕವನಗಳನ್ನು ಓದಿ ಕೇಳಿಸಿ ಅಂದಿದಕ್ಕೆ ಕೇಳುಗರಿಗೋಸ್ಕರ ಅನೇಕ ಕವನಗಳನ್ನು ಓದಿದರು. ಕೊನೆಯಲ್ಲಿ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಾರದಂತೆ ಎಲ್ಲರೂ ಸೌಹಾರ್ದತೆಯಿಂದ ಬದುಕೋಣ. ಮಾತೃ ಭಾಷೆಯನ್ನು ಹೃದಯಾಂತರಾಳದಿಂದ ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸುವ. ಇದರಿಂದ ಭಾಷಾ ತಾರತಮ್ಯ ನಿವಾರಣೆಯಾಗಲು ಸಾಧ್ಯವಿದೆ. ಎಲ್ಲ ಭಾಷೆಗಳನ್ನು ಗೌರವಿಸುವ ಭಾಷಾ ಸಾಮರಸ್ಯ ಮೈಗೂಡಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ, ಎಂದು ಹೇಳಿದರು.

- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್