ಮಾರ್ಚ್ 31ರ ’ಮೈಕಾಲ್ತೊ ಪಲಕ’ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬ್ಯಾರಿ ಚಿಂತಕ, ಲೇಖಕ, ಶಿಕ್ಷಕರಾದ ಅಬ್ದುಲ್ ರಜಾಕ್ ಅನಂತಾಡಿ ಭಾಗವಹಿಸಿ ’ಬ್ಯಾರಿ ಸಮುದಾಯ ಮತ್ತು ಅಂತರ್ ಸಾಂಸ್ಕೃತಿಕ ಸಂಬಂಧ’ ಈ ವಿಚಾರವಾಗಿ ಮಾತಾಡಿದರು.
ಆರಂಭದಲ್ಲಿ ಬ್ಯಾರಿ ಪದಮೂಲದ ಬಗ್ಗೆ ಬಹುತೇಕ ಚರಿತ್ರೆಗಾರರಲ್ಲಿ ಇದ್ದ ಸಹಮತದ ಬಗ್ಗೆ ತಿಳಿಸಿ, ಬ್ಯಾರಿ ಎಂಬ ಪದ ಸ್ಥಳೀಯ ಭಾಷೆಯಾಗಿದ್ದು, ತುಳುವಿನಿಂದ ಬಂದಿದೆ ಎಂಬುದು ಸಾಮಾನ್ಯ ಅಭಿಮತವಾಗಿದೆ. ಕರಾವಳಿಯ ಮುಸ್ಲಿಮರಲ್ಲಿ ಬಹಳಷ್ಟು ಜನ ಪ್ರಾಚೀನ ಕಾಲದಿಂದಲೂ ವ್ಯಾಪಾರವನ್ನೇ ಮುಖ್ಯ ಕಸುಬಾಗಿರಿಸಿಕೊಂಡಿದ್ದರಿಂದ ಕಸುಬಾಧರಿಸಿ ಪಡೆದ ಕುಲನಾಮ ಅದು ಬ್ಯಾರಿ ತುಳು ಪದವಾಗಿ, ವ್ಯಾಪಾರವನ್ನು ’ಬ್ಯಾರ’ ಎಂದು ಅದನ್ನೇ ಬ್ಯಾರಿ ಕರೆದಿರಬಹುದು ಎಂದು ಇತಿಹಾಸಕಾರರು ತಿಳಿಸಿದ್ದನ್ನು ವಿವರಿಸಿದ ಅವರು ಇನ್ನೊಂದು ಕಡೆ ಅರಬ್ಬರ ಸಂಪರ್ಕದಿಂದುಂಟಾದ ಹೊಸ ಜನಾಂಗವಾದುದರಿಂದ ’ಬಹಾರಿ’ ಎಂಬ ಅರಬಿ ಪದದಿಂದ ಉತ್ಪತ್ತಿಯಾಗಿರಬಹುದು ಎಂದು ತಿಳಿಸಿದರು. ಬಹಾರಿ ಎಂದರೆ ’ಸಮುದ್ರ ವ್ಯಾಪಾರಿ’, ’ಸಮುದ್ರ ದಾಟಿ ಬಂದವ’ ಎಂಬ ಅರ್ಥವಾಗಿದೆ.
ಪ್ರಾಚೀನ ಪಾಡ್ದನಗಳ ಕಾಲದಿಂದ ಇಂದಿನವರೆಗೂ ಬ್ಯಾರಿಗಳಿಗೂ ಸ್ಥಳೀಯ ಇತರ ಮುಸ್ಲಿಮೇತರ ಜನರಿಗೂ ಇರುವ ಆತ್ಮೀಯ ಸೌಹಾರ್ದತೆ ತುಳುನಾಡಿನ ಚರಿತ್ರೆಯುದ್ದಕ್ಕೂ ಕಂಡುಬರುವುದನ್ನು ವಿವರಿಸುತ್ತಾ ಹೋದ ಅವರು, ಬ್ಯಾರಿ ಭಾಷೆಯ ಇತಿಹಾಸವನ್ನು ನಾವು ಅವಲೋಕಿಸಿದರೆ ಅದರ ಪ್ರಾಚೀನತೆ ಮತ್ತು ಸಾಂಸ್ಕೃತಿಕ ಪ್ರಾಧಾನ್ಯದ ಬಗ್ಗೆ ಅರಿವುವಾಗಬಹುದು. ಹಿಂದೆ ಇದು ನಮ್ಮದು, ಅದು ನಿಮ್ಮದು, ಎಂಬ ಸ್ವಾರ್ಥ ಜಾತಿ, ಮತ ಯಾವುದೂ ಕೂಡ ಅಡ್ಡ ಬರುತ್ತಿರಲಿಲ್ಲ. ನೆರೆಹೊರೆಯ ಆಂತರಿಕ ಸಂಬಂಧಗಳು ತಾಯಿ, ತಂದೆ. ಮಕ್ಕಳು, ಅಣ್ಣ. ತಮ್ಮಂದಿರಂತೆ ಪವಿತ್ರವಾಗಿತ್ತು. ಗಟ್ಟಿಯಾಗಿತ್ತು. ಅಂದಿನ ತುಳು ಮತ್ತು ಬ್ಯಾರಿಗಳ ಸಂಸ್ಕೃತಿ ಸಂಪ್ರದಾಯಗಳನ್ನು ಗಮನಿಸಿದರೆ ಬಹಳಷ್ಟು ಸಾಮ್ಯತೆ ಇರುವುದು ಕಂಡುಬರುತ್ತದೆ. ಹೊಸ ಅಕ್ಕಿ (ಪುದಾರ್) ಉಣ್ಣೋದು, ಮದುವೆ, ಮುಂಜಿ ಸಂದರ್ಭಗಳಲ್ಲಿ ಬ್ಯಾಂಡ್, ಗರ್ನಲ್; ತಾಲೀಮ್’ನಲ್ಲಿ ಮೆರವಣಿಗೆ ಹೋಗುವುದು - ಈ ರೀತಿಯ ಸಂಪ್ರದಾಯಗಳನ್ನು ಆಚರಿಸುತ್ತಿದ್ದರು. ಹೊಸ ಅಕ್ಕಿ ಉಣ್ಣುವ ದಿನ ತುಳು ಬ್ಯಾರಿಗಳ ಮನೆಯಲ್ಲಿ ಒಂದೇ ತರಹದ ಅಡುಗೆಗಳು, ಸಂಪ್ರದಾಯಗಳು ಇರುತ್ತಿದ್ದವು. ಆಗ ದೇವಸ್ಥಾನದಲ್ಲಿ ನಡೆಯುವ ಜಾತ್ರೆ, ಉರೂಸಿಗೆ ಜಾತಿ, ಮತ ನೋಡದೆ ಹೋಗುತ್ತಿದ್ದೆವು. ಯಾಕೆಂದರೆ ಅದು ಊರಿನ ನಾಡಹಬ್ಬವಾಗಿದ್ದು ಅದರಲ್ಲಿ ಸಂಭ್ರಮ ಪಡುತ್ತಿದ್ದೆವು. ಜಾತ್ರೆ ಮತ್ತು ಉರೂಸಿನಲ್ಲಿ ಸುತ್ತಲ ಗದ್ದೆಗಳಲ್ಲಿ ಸಂತೆಯೂ ತುಂಬಿರುತ್ತಿತ್ತು. ಅದು ನೋಡಲು ಚೆಂದ. ಇನ್ನು ಕೋಲದಲ್ಲೂ, ಯಕ್ಷಗಾನ ಬಯಲಾಟದಲ್ಲೂ ಬ್ಯಾರಿಗಳು ಭಾಗವಹಿಸುತ್ತಿದ್ದನ್ನು ನೆನಪಿಸಿದರು. ಕೋಲದಲ್ಲಿ ಮುಖ್ಯ ವಾದ್ಯ ನುಡಿಸುತ್ತಿದ್ದ ಬ್ಯಾರಿ ಆಗಿದ್ದ ಉಡುಪಿಯ ಜಲೀಲ್ ಎಂಬಾತನ ಬಗ್ಗೆ ಹೇಳಿ ಇದು ಸಾಂಸ್ಕೃತಿಕ ಅಂತರ ಸಂಬಂಧಕ್ಕೆ ಉತ್ತಮ ಉದಾಹರಣೆ ಎಂದು ತಿಳಿಸಿದರು.
ಇನ್ನು ಪ್ರಾಚೀನ ಬ್ಯಾರಿಗಳು ಕೃಷಿಗೆ ಬಹಳಷ್ಟು ಒತ್ತು ನೀಡುತ್ತಿದ್ದರು. ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದರು. ಬ್ಯಾರಿಗಳು ತುಳುನಾಡಿನ ಸಂಪ್ರದಾಯದ ಸುಗ್ಗಿಯ ಕಾಲದಲ್ಲಿ ಬೆಳೆದ ಹೊಸ ಅಕ್ಕಿ (ಪುದಿಯೊ ಅರಿರೊ ಚೋರು) ಊಟನ್ನು ಕನಿಷ್ಠಪಕ್ಷ ನಲವತ್ತು ಮಕ್ಕಳಿಗೆ ಕೊಡುತ್ತಿದ್ದುದ್ದನ್ನು ನೆನಪಿಸಿ, ಹೊಸಬೆಳೆಯ ಭತ್ತದ ಅಕ್ಕಿಯನ್ನು ಮನೆಯ ಒಳಗಡೆ ಇಡುವ ಮುಂಚೆ ಹೊಸತುಣ್ಣುವ ಹಬ್ಬವನ್ನು ಆಚರಿಸುತ್ತಿದ್ದುದ್ದನ್ನೂ, ತೆನೆಯ ಕೆಲವು ಭತ್ತವನ್ನು ಸುಲಿದು ಬೆಳೆ ಸಮೃದ್ಧಿಗಾಗಿ ವಿಶೇಷ ದುಆ ಮಾಡುತ್ತಿದ್ದುದ್ದನ್ನು ನೆನಪಿಸುತ್ತಾ ಹೋದರು. ಆಗಿನ ಕಾಲದಲ್ಲಿ ಮಹಿಳೆಯರು ತಮ್ಮ ಮನೆಯಲ್ಲಿ ಪುಟ್ಟ ಮಕ್ಕಳು ಖಾಯಿಲೆ ಬಿದ್ದಾಗ ಹತ್ತು ಮಕ್ಕಳಿಗೆ ’ಮಕ್ಕಳ ಗಂಜಿ ಕೊಡ್ತೀನಿ’ ಅಂತ ಹರಕೆ ಇಡುತ್ತಿದ್ದರು. ಗಂಧಸಾಲೆ ಬೆಳ್ತಿಗೆಯ ಗಂಜಿಗೆ ತೆಂಗಿನಕಾಯಿ, ಹಾಲು, ಏಲಕ್ಕಿ, ಗೋಡಂಬಿ, ದ್ರಾಕ್ಷಿ, ತುಪ್ಪ, ಬೆಲ್ಲ ಹಾಕಿ ಮಕ್ಕಳಿಗೆ ಕೊಡುತ್ತಿದ್ದುದ್ದನ್ನು ನೆನಪಿಸಿದರು.
ಬ್ಯಾರಿಗಳ ಉಡುಪು ತನ್ನದೆಯಾದ ವೈಶಿಷ್ಟ್ಯತೆಯನ್ನು ಹೊಂದಿದ್ದುದ್ದನ್ನು, ಆಹಾರಕ್ರಮ ವೈವಿಧ್ಯತೆ ಮತ್ತು ಸರಳತೆಯಿಂದ ಹೇಗೆ ಕೂಡಿತ್ತು ಎಂಬುದರ ಕುರತೂ ತಿಳಿಸುತ್ತಾ ಹೋದರು. ಈ ಸಂದರ್ಭದಲ್ಲಿ ಅನೇಕ ಕೇಳುಗರು ಕರೆ ಮಾಡಿಅವರೂ ಪ್ರಶ್ನೆಗಳನ್ನು ಕೇಳಿದರು.