‘ಬದುಕೆಂಬ ಪಯಣವು ಕವಿತೆಗಳಿಂದ ತುಂಬಿರಬೇಕು,’ ಎಂದು ಕವಿ ಆಂಡ್ರ್ಯೂ ಎಲ್. ಡಿ. ಕುನ್ಹಾ ಅವರು ಅಭಿಪ್ರಾಯಪಟ್ಟರು. ಇದೇ ಜನವರಿ 29ರಂದು ರೇಡಿಯೋ ಸಾರಂಗ್ 107.8FM ಇದರ ‘ತಾಳೊ ಉಮಾಳೊ’ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ನಾಲ್ವತ್ತು ವರುಷಗಳ ಸಾಹಿತ್ಯಮಯ ಬದುಕಿನ ಅನಾವರಣವನ್ನು ಕವಿತಾಮಯಾವಾಗಿ ಬಣ್ಣಿಸಿದರು.
ಆಂಡ್ರ್ಯೂ ಅವರ ಜನನ ಗುರುಪುರ ಕಿನ್ನಿಕಂಬ್ಳದಲ್ಲಿ ಆಯಿತು. ಈಗಾಗಲೇ ಅದ್ಭುತ ಕವಿತೆಗಳನ್ನು ರಚಿಸಿರುವ ಇವರು, 600ಕ್ಕೂ ಮಿಕ್ಕಿ ಕವಿತೆಗಳನ್ನು ರಚಿಸಿದ್ದಾರೆ. ಮೂರು ಕವಿತಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಅವರ ‘ಅಂಜೂರಾಚೆಂ ಪಾನ್’ ಪುಸ್ತಕಕ್ಕೆ ನಾಲ್ಕು ಪ್ರಶಸ್ತಿಗಳು ಬಂದಿವೆ.
‘ಪೆನ್ನು ಬೇಕಾ ಪೆನ್ನು’ ಈ ಕವಿತೆಯೊಂದಿಗೆ ಈ ಸಂವಾದ ಆರಂಭಿಸಿದ ಅವರು, ಈ ಕವಿತೆ ಕೊರೊನಾ ಸಂಧರ್ಭದಲ್ಲಿ ಮೂಡಿದ್ದು ಜೀವನದ ಹಲವಾರು ವರ್ಣನೆಗಳ ಬಗ್ಗೆ ತಿಳಿಸುತ್ತದೆ, ಎಂದರು.
ಹಸಿವು ಈ ಕಷ್ಟದ ಕಾಲದಲ್ಲಿ ನನ್ನೊಂದಿಗೆ ಇರುವಾಗ ನನಗೆ ಯಾವುದರ ಭಯವಿಲ್ಲ ಎಂಬ ಮೌಲ್ಯಕ್ಕೆ ಈ ಕವಿತೆ ಬೆಲೆ ಕೊಡುತ್ತದೆ.
ಫಲ್ಗುಣಿ ನದಿ ಹರಿಯುವ ತನ್ನ ಊರು ಸೌಂದರ್ಯದಿಂದ ಕೂಡಿದೆ. ನಾನು ಮನೆಯಲ್ಲಿ ಕಿರಿಯ ಮಗ. ನನ್ನ ಶಾಲೆಯ ದಿನದಲ್ಲೇ ಶ್ರೀಧರ ಮಾಸ್ಟರ್ ಅವರು ಗದ್ಯಕ್ಕಿಂತ ಪದ್ಯದ ಆಸಕ್ತಿಯನ್ನು ಗಮನಿಸಿದ್ದರು. ಉತ್ತಮ ಕವಿಯಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ಅವರು ಭವಿಷ್ಯವಾಣಿ ನುಡಿದಿದ್ದರು ಎಂದರು.
ನನ್ನ ಕಾಲೇಜು ಮತ್ತು ಶೈಕ್ಷಣಿಕ ಹಂತದಲ್ಲಿ ಉತ್ತಮ ಶಿಕ್ಷಕರು ಸಾಥ್ ನೀಡಿದ್ದರಿಂದ ನನ್ನ ಬದುಕು ನಿರ್ಮಾಣವಾಯಿತು, ಎಂದರು.
ವಿಲ್ಫಿ ರೆಬಿಂಬಸ್ ಮತ್ತು ಕವಿ ಮೆಲ್ವಿನ್ ರೋಡ್ರಿಗಸ್ ಅವರ ಪ್ರಭಾವ ಬಹುಮಟ್ಟದಲ್ಲಿ ತನ್ನ ಮೇಲೆ ಇದೆ ಎಂದು ಆಂಡ್ರ್ಯೂ ಅವರು ವಿವರಿಸಿದರು.
ಕವಿತೆ ಓದುವಾಗ ನನಗೆ ದೊರಕುತ್ತಿದ್ದ ಆ ಪ್ರಪುಲ್ಲತೆ, ಗದ್ಯ ಸಾಹಿತ್ಯದಲ್ಲಿ ನನಗೆ ದೊರಕಲಿಲ್ಲ. ಒಂದು ಕಾವ್ಯಾತ್ಮಕ ಬದುಕಿಗೆ ಇದು ನನ್ನನು ಒಳಪಡಿಸಿತು. ಅನ್ನವನ್ನು ಬೇಯಿಸುವಾಗ ಕುದಿದು ಕುದಿದು ಬರುವಂತಹ ನೊರೆಯನ್ನೇ ಕವಿತೆ ಎನ್ನುತ್ತಾರೆ, ಎಂದರು
ತಮ್ಮ ಬಾಂಯ್ ಎಂಬ ಕವಿತೆ ಕುರಿತು ಹಲವಾರು ವಿಚಾರಗಳನ್ನು ವ್ಯಕ್ತಪಡಿಸಿದ ಕವಿ, ಮೂರು ತಲೆಮಾರಿನ ಬದುಕಿನ ಅನಾವರಣ ಈ ಕವಿತೆ ಮಾಡುತ್ತದೆ, ಎಂದರು.
ತಾವು ಕಥೆಗಾರರು ಆಗಿದ್ದೀರಿ, ಆದರೆ ಈ ಕಥೆಗಳಿಗೆ ಈಗ ವಿರಾಮ ನೀಡಿದ್ದೀರಿ, ಎಂದಾಗ, ಹೌದು ತಾತ್ಕಾಲಿಕ ವಿರಾಮ ನೀಡಿದ್ದೇನೆ, ಮುಂದಿನ ದಿನಗಳಲ್ಲಿ ಕಥೆಗಳನ್ನು ಬರೆಯುವ ಪ್ರಯತ್ನ ಮುಂದುವರೆಯಲಿದೆ, ಎಂದರು.
ಒಂದೆರಡು ಕವಿತೆ ಬರೆದು ತಾನೇ ದೊಡ್ಡ ಕವಿ ಎಂದು ಬೀಗುವ ಬದಲು, ತಾನು ಇತರರಿಂದ ಗೌರವವನ್ನು ಪಡೆಯಬೇಕು. ಕವಿತೆ ಯಾವತ್ತೂ ನಿಂತ ನೀರು ಆಗಬಾರದು ಬದಲಿಗೆ ಹರಿಯುವ ನೀರು ಆಗಬೇಕು, ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಆಂಡ್ರ್ಯೂ ಅವರು ಕೊಂಕಣಿ ಕವಿತೆಗೆ ಭವಿಷ್ಯವಿದೆ, ಅದನ್ನು ಮುಂದುವರಿಸಬೇಕು, ಎಂದರು.
- ರೋಶನ್ ಕ್ರಾಸ್ತಾ, ರೇಡಿಯೋ ಸಾರಂಗ್