Anuradha Shetty: ಋತುಚಕ್ರ ರೋಗವಲ್ಲ

'ಋತುಚಕ್ರವೆಂಬುದು ಸ್ವಾಭಾವಿಕ, ಇದು ಯಾವುದೇ ರೋಗವಲ್ಲ,' ಎಂದು ಮಂಗಳೂರಿನ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್’ನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಪಕರದ ಅನುರಾಧ ಶೆಟ್ಟಿಯವರು ತಿಳಿಸಿದರು.

ಇವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8ರಂದು ಋತುಚಕ್ರ ಮತ್ತು ಸ್ವಚ್ಛತಾ ಅರಿವು ಎಂಬ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮುಟ್ಟು ಎಂಬುದು ಸ್ವಾಭಾವಿಕ ಪ್ರಕ್ರಿಯೆ. ಇದರ ಬಗ್ಗೆ ಯಾವತ್ತೂ ಕೀಳರಿಮೆ ಪಡಬಾರದು, ಬದಲಾಗಿ ಹೆಮ್ಮೆ ಪಡಬೇಕು. ಏಕೆಂದರೆ ಈ ಒಂದು ಮುಟ್ಟಿನ ಪ್ರಕ್ರಿಯೆಯಿಂದಾಗಿ ನಾವು ಒಂದು ಸಮಾಜಕ್ಕೆ ಸಂತಾನೋತ್ಪತ್ತಿಯ ಮೂಲಕ ಕೊಡುಗೆಯನ್ನು ನೀಡುತ್ತೇವೆ; ಹೊಸ ಜೀವಿಯನ್ನು ಈ ಮುಟ್ಟಿನಿಂದ ಸೃಷ್ಟಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಬೇಗ ಋತುಮತಿಯಾಗುತ್ತಾರೆ. ಆದರೆ ಆ ಬಗ್ಗೆ ಮೊದಲೇ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ಹೆತ್ತವರಿಗೆ ಹಾಗೂ ಶಿಕ್ಷಕರಿಗೆ ಇದೆ. ಈ ಬಗ್ಗೆ ಯಾವುದೇ ರೀತಿಯ ಸಂಕೋಚಪಡದೆ ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ತಿಳಿಸಿಕೊಡಬೇಕು ಮತ್ತು ಋತುಸ್ರಾವದ ಸಂದರ್ಭದಲ್ಲಿನ ರಕ್ತ ಅದು ಕೆಟ್ಟ ರಕ್ತವಲ್ಲ, ಅದು ದೇಹದಲ್ಲಿ ಇರುವವರೆಗೂ ಶುದ್ಧವಾಗಿರುತ್ತದೆ. ಯಾವಾಗ ಅದು ಮಲಿನಗೊಳ್ಳುತ್ತದೆ ಎಂದರೆ ದೇಹದಿಂದ ಹೊರಗೆ ಬಂದು ಬೇರೆ ಮಲಿನಗಳೊಂದಿಗೆ ಸೇರಿಕೊಂಡಾಗ ಅದು ಮಲಿನ ರಕ್ತವಾಗುತ್ತದೆ, ಎಂದರು.

ಋತುಸ್ರಾವದ ಸಮಯದಲ್ಲಿನ ಸ್ವಚ್ಛತೆ ತುಂಬಾ ಮುಖ್ಯ ಮೊದಲು ಮುಟ್ಟಾದಾಗ ಹೆಚ್ಚಿನ ಮಹಿಳೆಯರು ಬಟ್ಟೆಯನ್ನು ಉಪಯೋಗಿಸುತ್ತಿದ್ದರು. ಆದರೆ ಅದರ ಸ್ವಚ್ಛತೆಯ ಬಗ್ಗೆ ಹೆಚ್ಚಿನವರು ಗಮನಕೊಡುತ್ತಿರಲಿಲ್ಲ. ಇದರಿಂದ ಗರ್ಭಕೋಶದ ಸೋಂಕಿಗೆ ಒಳಗಾಗುತ್ತಿದ್ದರು. ಹಾಗಂತ ಬಟ್ಟೆಯನ್ನು ಬಳಕೆ ಮಾಡಬಾರದು ಎಂದು ಹೇಳುತ್ತಿಲ್ಲ. ಬದಲಾಗಿ ಬಟ್ಟೆಯನ್ನು ಸ್ವಚ್ಛವಾಗಿ ತೊಳೆದು ಸೂರ್ಯನ ಬಿಸಿಲಿಗೆ ಒಣಗಿಸಿ ಉಪಯೋಗಿಸಿದರೆ ಉತ್ತಮ ಎಂದರು. ಪ್ಯಾಡ್’ಗಳಲ್ಲಿ ಎರಡು ವಿಧಗಳಿವೆ. ಒಂದು ಮಣ್ಣಿನಲ್ಲಿ ಕರುಗುವ ಪ್ಯಾಡ್, ಮತ್ತೊಂದು ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್’ನಿಂದ ಮಾಡಲ್ಪಟ್ಟ ಪ್ಯಾಡ್. ಈ ಪ್ಯಾಡ್’ನಿಂದ ಪರಿಸರಕ್ಕೆ ತುಂಬಾ ಸಮಸ್ಯೆ ಆಗುತ್ತಿದೆ ಮತ್ತು ಇದರ ವಿಲೇವಾರಿ ಸರಿಯಾದ ರೀತಿಯಲ್ಲಿ ಮಾಡಲು ಆಗುತ್ತಿಲ್ಲ, ಎಂದರು. ಕೃತಕ ನೆರೆಗಳಿಗೂ ಇದು ಕಾರಣವಾಗುತ್ತಿದೆ. ಹಾಗಾಗಿ ಈಗ ಸುಸ್ಥಿರ ಋತುಚಕ್ರ ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರಲ್ಲಿ ನಾವು menstrual cupನ್ನು ಉಪಯೋಗಿಸುವ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಇದು ಸುಸ್ಥಿರ ಋತುಚಕ್ರಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡುತ್ತದೆ ಹಾಗಾಗಿ ಹೆಚ್ಚು ಹೆಚ್ಚು menstrual cupನ್ನು ಬಳಕೆ ಮಾಡಿದ್ದಲ್ಲಿ ನಮ್ಮ ಪರಿಸರದ ಸ್ವಚ್ಚತೆಯನ್ನು ಕಾಪಾಡಬಹುದು, ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಸರಕಾರ ಕೂಡ ಉತ್ತೇಜನ ನೀಡುತ್ತಿದೆ, ಎಂದರು. ಮತ್ತು ಕೇವಲ ವೈಯಕ್ತಿಕ ಸ್ವಚ್ಛತೆ ಮಾತ್ರವಲ್ಲ ಸಮುದಾಯದ ಸ್ವಚ್ಛತೆ ಕಾಪಾಡುವಲ್ಲೂ ನಮ್ಮ ಜವಾಬ್ದಾರಿ ಇದೆ ಎಂದು ಈ ಕಾರ್ಯಕ್ರಮದಲ್ಲಿ ತಿಳಿಸುತ್ತ ಹಲವಾರು ಕೇಳುಗರೊಂದಿಗೆ ಸಂವಾದ ನಡೆಸಿದರು.

- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್