"ಸರಾಗವಾದ ಮಾತಿನ ಶೈಲಿಗೆ ಹಾಗೂ ಬರವಣಿಗೆಗೆ ಬಲೇ ಪಾತೆರ್'ಗಾ ಕಾರ್ಯಕ್ರಮ ಅತ್ಯುತ್ತಮ ವೇದಿಕೆ"ಎಂಬ ಅಭಿಪ್ರಾಯ ಜೂನ್ 30ರ ತುಳುಪ್ರಸಾರದ ಬಲೇ ಪಾತೆರ್'ಗಾ 100ರ ಸಂಭ್ರಮದ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಕಲಾವಿದರು ಭಾಗವಹಿಸುತ್ತಾ ನುಡಿದರು.
ಅಂದು ಈ ಕಾರ್ಯಕ್ರಮದಲ್ಲಿ ಭಾರತಿ ಟೀಚರ್ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದ ಸಂತ ಅಲೋಶಿಯಸ್ ಪ್ರೌಢ ಶಾಲಾ ವಿಭಾಗದ ಶಿಕ್ಷಕಿ ಶ್ರೀಮತಿ ಫೆಲ್ಸಿ ಲೋಬೋ ಅವರು ಭಾಗವಹಿಸುತ್ತಾ 'ಬಲೇ ಪಾತೆರ್'ಗಾ ನನಗೆ ತುಂಬಾ ಖುಷಿ ಕೊಟ್ಟ ಕಾರ್ಯಕ್ರಮ, ಯಾಕಂದ್ರೆ ಸಾಮಾನ್ಯವಾಗಿ ನಾನು ಕನ್ನಡ, ಕೊಂಕಣಿ ಭಾಷೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ರೇಡಿಯೋ ಸಾರಂಗ್'ನ ಈ ಬಲೇ ಪಾತೆರ್'ಗಾ ತುಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನನ್ನ ತುಳು ಮಾತುಗಾರಿಕೆ ಹಾಗೂ ಬರವಣಿಗೆ ಶೈಲಿ ಕೂಡ ಬೆಳವಣಿಗೆಯಾಗಿದೆ. ಈ ಒಂದು ತಂಡದಲ್ಲಿ ಎಲ್ಲಾ ರೀತಿಯ ವಿಚಾರ ವಿನಿಮಯ ಕೂಡ ಮಾಡಿಕೊಳ್ಳುತ್ತಾ ಕೇಳುಗರ ಜೊತೆಗೂ ಉತ್ತಮ ಭಾಂದವ್ಯ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ನನ್ನ ವೃತ್ತಿ ಜೀವನದ ಕೆಲವೊಂದು ಅನುಭವಗಳನ್ನು ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುವ ಅವಕಾಶ ದೊರೆತಿದೆ. ಹಾಗಾಗಿ ನನ್ನ ವೃತ್ತಿ ಜೀವನಕ್ಕೂ ಹಾಗೂ ಈ ಕಾರ್ಯಕ್ರಮದಲ್ಲಿ ನಾನು ನಿರ್ವಹಿಸುವ ಭಾರತಿ ಟೀಚರ್ ಪಾತ್ರಕ್ಕೂ ತುಂಬಾ ಸಾಮ್ಯತೆ ಇದೆ,' ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದ ಮುಖ್ಯ ಪಾತ್ರಧಾರಿ ಕಾಮತ್ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ರೇಡಿಯೋ ಸಾರಂಗ್'ನ ದಿನನಿತ್ಯದ ಕೇಳುಗರಾದ ಕುಸುಮಾಕರ್ ಕೊಟ್ಟಾರ ಅವರು ಭಾಗವಹಿಸುತ್ತಾ 'ಈ ಕಾರ್ಯಕ್ರಮ ನನ್ನಲ್ಲಿ ಒಂದು ಆತ್ಮವಿಶ್ವಾಸವನ್ನು ಮೂಡಿಸಿದೆ. ನನ್ನ ಪಾತ್ರವನ್ನು ಎಲ್ಲಾ ಕೇಳುಗರು ತುಂಬಾ ಮೆಚ್ಚಿಕೊಂಡಿದ್ದಾರೆ ಮತ್ತು Script Writingಗೆ ಅವಕಾಶವನ್ನು ನೀಡುವ ಮೂಲಕ ಬರೆವಣಿಗೆಯ ಹವ್ಯಾಸವನ್ನು ರೂಡಿಸಿಕೊಳ್ಳುವಲ್ಲಿ ತುಂಬಾನೇ ಸಹಕಾರಿಯಾಗಿದೆ. ಮನಸ್ಸಿನ ಎಲ್ಲಾ ಚಿಂತೆಗಳನ್ನೂ ತಕ್ಕ ಮಟ್ಟಿಗೆ ದೂರವಿರಿಸಿದೆ,' ಎಂದು ಅಭಿಪ್ರಾಯಪಟ್ಟರು.
ಕಾಂತಪ್ಪ ಎಂಬ ಪಾತ್ರ ನಿರ್ವಹಿಸುತ್ತಿದ್ದ ರೇಡಿಯೋ ಸಾರಂಗ್'ನ ಮತ್ತೊಬ್ಬ ದಿನನಿತ್ಯದ ಕೇಳುಗರಾದ ಶ್ರೀಪತಿ ಕಲಂಬಾಡಿ ಅವರು ಭಾಗವಹಿಸುತ್ತಾ 'ಈ ಒಂದು ತುಳು ಕಾರ್ಯಕ್ರಮ ನನ್ನ ತುಳು ಮಾತುಗಾರಿಕೆಗೆ ತುಂಬಾನೇ ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ನಮ್ಮೆಲ್ಲರ ಪಾತ್ರಗಳನ್ನು ಕೇಳುಗರು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಅದು ಎಸ್ಟರ ಮಟ್ಟಿಗೆ ಎಂದರೆ ಕೆಲವರು ಪಾತ್ರದ ಹೆಸರಿನಿಂದಲೇ ಕರೆಯುತ್ತಾರೆ,' ಎಂದು ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಇನಾಸ್ ಪೊರ್ಬು ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟರ್ ಆಗಿರುವ ಡಾ. ಆಲ್ವಿನ್ ಡೆ'ಸಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ 'ಈ ಕಾರ್ಯಕ್ರಮದ ಆರಂಭದಲ್ಲಿ ನನಗೆ ತುಳು ಭಾಷಾ ಜ್ಞಾನ ತುಂಬಾ ಕಡಿಮೆ ಇತ್ತು. ತುಳು ಮಾತನಾಡಲು ಅಷ್ಟಾಗಿ ಬರುತ್ತಿರಲಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ನನ್ನ ತುಳು ಮಾತು, ಉಚ್ಚಾರ ಬೆಳವಣಿಗೆಯಾಗುತ್ತಾ ಹೋಯಿತು. ಈಗ ಯಾವುದೇ ಅಳುಕಿಲ್ಲದೆ ಸ್ಪಷ್ಟವಾಗಿ ತುಳು ಮಾತನಾಡುತ್ತೇನೆ. ಅದಕ್ಕೆ ಈ ಕಾರ್ಯಕ್ರಮ ಕಾರಣ,' ಎಂದರು. ಹಾಗೆ 'ಈ ಕಾರ್ಯಕ್ರಮ ಒಂದು ವಿಶ್ವವಿದ್ಯಾಲಯ ಇದ್ದಂತೆ, ಯಾಕಂದ್ರೆ ಎಲ್ಲಾ ರೀತಿಯ ಮಾಹಿತಿ ಹಾಗೂ ಮನರಂಜನೆ ಈ ಕಾರ್ಯಕ್ರಮದ ಮೂಲಕ ದೊರಕುತ್ತಿತ್ತು ಮತ್ತು ಎಲ್ಲಾ ಜಾತಿ ಧರ್ಮದ ಜೊತೆಗೆ ಸಾಮರಸ್ಯ ಈ ಕಾರ್ಯಕರ್ಮದಲ್ಲಿ ಕಾಣಸಿಗುತ್ತಿತ್ತು,' ಎಂದರು.
ಈ ಕಾರ್ಯಕ್ರಮದ ಇನ್ನೊಬ್ಬ ಪಾತ್ರಧಾರಿ ರೇಡಿಯೋ ಸಾರಂಗ್ ಸಿಬ್ಬಂದಿ ಎಡ್ವರ್ಡ್ ಲೋಬೋ ಇವರು ಶೇಖರ ಎಂಬ ಪಾತ್ರವನ್ನು ನಿರ್ವಹಿಸಿದ್ದು 'ಬಲೇ ಪಾತೆರ್'ಗಾ ಈ ಕಾರ್ಯಕ್ರಮ ನಮ್ಮಲ್ಲಿ ಒಂದು ಹೊಸ ಹುರುಪನ್ನು ತಂದುಕೊಟ್ಟಿದೆ. ನನ್ನ ಪಾತ್ರವನ್ನು ತುಂಬಾ ಇಷ್ಟ ಪಟ್ಟು ಮಾಡಿದ್ದೇನೆ. ಜನನಾಯಕನಂತೆ ಸಮಾಜ ಸೇವೆ ಮಾಡುವ ಪಾತ್ರ ಅದು,' ಎಂದರು.
ಇನ್ನೊಬ್ಬ ಪಾತ್ರಧಾರಿ ಗೋಪಾಲಕೃಷ್ಣ ಕುಂಪಲ ಇವರು ಖಾಸಿಂ ಸಾಹಿಬ್ ಅನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇವರು ತಿಳಿಸುವಂತೆ 'ಸಮಾಜದಲ್ಲಿ ಸಾಮರಸ್ಯದ ಬದುಕು ಸಾಗಿಸುವ ಚಿತ್ರಣವನ್ನು ಈ ಕಾರ್ಯಕ್ರಮ ನೀಡಿದೆ. ನಾನು ನನ್ನ ಪಾತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದೇನೆ ಹಾಗೂ ಕೇಳುಗರು ಇಷ್ಟ ಪಟ್ಟಿದ್ದಾರೆ,' ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಹಲವಾರು ಕೇಳುಗರು ಭಾಗವಹಿಸಿ ಕಲಾವಿದರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ರೇಡಿಯೋ ಸಾರಂಗ್ ನಿರ್ದೇಶಕರಾದ ಡಾ.ಫಾ ಮೆಲ್ವಿನ್ ಪಿಂಟೋ ಅವರು ಉಪಸ್ಥಿತರಿದ್ದು ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್