ಸಿನಿಮಾ ಪ್ರೇಮಿಯಾದ ನನ್ನ ತಾಯಿ ಜೊತೆ ನಾನು ವೀಕ್ಷಿಸಿದ ಮೊದಲ ಚಿತ್ರ ಅಪ್ಪು. ಈ ಚಿತ್ರದಲ್ಲಿನ ಪುನೀತ್ ರಾಜಕುಮಾರ್ ಅಭಿನಯ ನನಗೆ ಪ್ರೇರಣೆ ನೀಡಿತು ಎಂದು ಸಿನಿಮಾ ನಟ, ಕಲಾನಿರ್ದೇಶಕ ದೇವಿಪ್ರಕಾಶ್ ಅಭಿಪ್ರಾಯಪಟ್ಟರು. ಅವರು ಆಗಸ್ಟ್ 23 ಬುಧವಾರದಂದು ರೇಡಿಯೋ ಸಾರಂಗ್ ನಲ್ಲಿ ನಡೆದ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಚಿತ್ರ ನಟನಾಗಲು ಬೆಂಗಳೂರಿನ ಗಾಂಧಿನಗರಕ್ಕೆ ಕಾಲಿರಿಸಿ ಅವಕಾಶಕ್ಕಾಗಿ ಅಲೆದಾಡಿದಾಗ ನನ್ನ ಕನಸು ನನಸು ಮಾಡುವುದು ಕಠಿಣವೆನಿಸಿತು. ಆದರೂ ಸೋಲನ್ನು ಸ್ವೀಕರಿಸಲು ಮನ ಕೇಳಲಿಲ್ಲ. ಸಿಕ್ಕಿದ ಸಣ್ಣ ಪುಟ್ಟ ಅವಕಾಶಗಳು, ಹಿರಿತೆರೆ ಸಿನಿಮಾ "ಅನುಕ್ತ"ದ ಮೂಲಕ ಸಿನಿಮಾ ನೆಲೆ ಗಟ್ಟಿಯಾಗಿಸಿತು ಎಂದರು. ಸಿನಿಮಾರಂಗದ ಬಗ್ಗೆ ಹೆಚ್ಚಿನ ತಾಂತ್ರಿಕ ಕೌಶಲ್ಯವನ್ನು ಅರಗಿಸಿಕೊಂಡ ಇವರಿಗೆ ಸಿನಿಮಾ ನಿರ್ದೇಶಕನಾಗಿ, ಕಲಾ ನಿರ್ದೇಶಕನಾಗಿ ಅವಕಾಶ ಲಭಿಸಿತಲ್ಲದೆ ತುಳು ಸಿನಿಮಾ ಕುದ್ಕನ ಮದಿಮೆಯ ದ್ವಿತೀಯ ನಾಯಕ ಪಾತ್ರ, ಜೊತೆಗೆ ವಿಜಯ ರಾಘವೇಂದ್ರ ಇವರ ಜೊತೆ ಕನ್ನಡ ಚಿತ್ರದಲ್ಲಿ ನಟಿಸಿದ್ದು ಮರೆಯಲಾರದ ಅನುಭವ ಎಂದು ಭಾವಪೂರ್ಣವಾಗಿ ನುಡಿದರು. ನೇರಪ್ರಸಾರ ಕಾರ್ಯಕ್ರಮದಲ್ಲಿ ಹಾಡು ಹಾಡಿ ರಂಜಿಸಿದ ಇವರು ಕೇಳುಗರೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದರು.
-ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್.