ನಮ್ಮದು ಯಕ್ಷ ಕುಟುಂಬ. ಅಜ್ಜ, ದೊಡ್ಡಪ್ಪ, ಅಪ್ಪ, ಹಾಗೂ ಕೌಟುಂಬಿಕರಲ್ಲಿದ್ದ ಯಕ್ಷಪ್ರೀತಿ ಜತೆಗೆ ತಾಯಿಂದಾಗಿ ಒಲಿದು ಬಂದ ಸಂಗೀತದ ಸಾಂಗತ್ಯ ಭಜನೆ ಹಾಡುಗಳು ಭಾಗವತನಾಗಲು ಶಕ್ತಿ ನೀಡಿದವು, ಎಂದು ಯಕ್ಷಗಾನದ ಮೇರು ಯುವ ಭಾಗವತ ಧೀರಜ್ ರೈ ಸಂಪಾಜೆ ನುಡಿದರು.
ಅವರು ಜುಲೈ 13ರಂದು ಬುಧವಾರ ರೇಡಿಯೋ ಸಾರಂಗ್'ನಲ್ಲಿ ನಡೆದ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಪಾಜೆ ಗ್ರಾಮೀಣ ಪ್ರದೇಶದವರಾದ ಇವರು ದೊಡ್ಡಪ್ಪ ಯಕ್ಷಗಾನ ಕಲಾವಿದರಾದ ಶೀನಪ್ಪ ರೈ ಜೊತೆ ಯಕ್ಷಗಾನ ಪ್ರದರ್ಶನಗಳಿಗೆ ಹೋದಾಗ ಸಿಕ್ಕಿದ ಸಣ್ಣ ಸಣ್ಣ ವೇಷಗಳು ರಾಜ ವೇಷ ಬಣ್ಣದ ವೇಷಗಳವರೆಗೆ ಬೆಳೆಸಿತು, ಎಂದರು. ಭಾಗವತ ದಿನೇಶ್ ಅಮ್ಮಣ್ಣಾಯ ಭಾಗವತಿಕೆಗೆ ಮನಸೋತ ಇವರು ಮಾಂಬಾಡಿಯವರಿಂದ ಭಾಗವತಿಕೆ, ಬೊಟ್ಟಿಕೆರೆಯವರಿಂದ ಯಕ್ಷಗಾನ ಸಾಹಿತ್ಯ ವಿದ್ವಾನ್ ಗಣೇಶ್ ರಾಜ್'ರವರಿಂದ ಕರ್ನಾಟಕ ಸಂಗೀತಾಭ್ಯಾಸ ಮಾಡಿ ಭಾಗವತಿಕೆ ಸುರು ಮಾಡಿದೆ, ಎಂದರು. ಸೂಡ, ಸಸಿಹಿತ್ಲು, ಭಗವತಿ ಮೇಳಗಳಲ್ಲಿ ಭಾಗವತರಾಗಿ ಕಟೀಲು, ಮಂಗಳಾದೇವಿ, ಬೆಂಕಿನಾಥೇಶ್ವರ ಮೇಳಗಳಲ್ಲಿ ಅತಿಥಿ ಭಾಗವತನಾಗಿ ಭಾಗವಹಿಸಿದನ್ನು ನೆನೆದರು.
ಆಂಗ್ಲ ಯಕ್ಷಗಾನ ತಾಳಮದ್ದಳೆಗೆ ಭಾಗವತಿಕೆ, ಯಕ್ಷಗಾನ ವೈಭವ, ಯಕ್ಷಹಾಸ್ಯ ವೈಭವ, ಏಕವ್ಯಕ್ತಿ ಯಕ್ಷಗಾನ, ಯಕ್ಷ-ಗಾಯನ-ಪ್ರವಚನ, ಇದಲ್ಲದೆ ಯಕ್ಷಗಾನದಲ್ಲಿ ಹಾರ್ಮೋನಿಯಂ, ಕೊಳಲು, ವೀಣೆ, ಸ್ಯಾಕ್ಸೋಫೋನ್, ತಬಲ, ಉಡಿಕೆಯ ಬಳಸಿ ವಿಶಿಷ್ಟ ರೀತಿಯಲ್ಲಿ ರಂಗಪ್ರಯೋಗ ನಡೆಸಿದ ಇವರು ಯಕ್ಷಗಾನ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಬೇಕು, ಎಂದರು.
ಯಕ್ಷಸೇವಕ ಹರೀಶ್ಚಂದ್ರ ನಾಯ್ಕ ಇವರ ಜೊತೆ ಶಿರ್ವ ಮೇಳದ ಯಕ್ಷಗಾನ ನೋಡಲು ಹೋಗಿ ಪದ್ಯ ಹಾಡಿ ಅ ಮೇಳಕ್ಕೆ ಭಾಗವತನಾದದ್ದು ಆಕಸ್ಮಿಕ ಘಟನೆ ಎಂದರೆ ಸಮರ್ಪಕವಾಗಿ ಮುಂಡಾಸು ಕಟ್ಟಲು ಕಲಿಸಿದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ನಿಧನರಾದಾಗ ಅವರ ಶವದ ತಲೆಗೆ ಮುಂಡಾಸು ಕಟ್ಟಿದ್ದು ಮರೆಯಲಾಗದ ಘಟನೆ ಎಂದು ಭಾವುಕರಾದರು. ತನ್ನ ಸಾಧನೆಗೆ ನೆರವಾದ ಹಲವರನ್ನು ನೆನಪಿಸಿಕೊಂಡರು.