Dr Ajay R. Kamath: ಗ್ಲುಕೋಮಾ ನಿರ್ಲಕ್ಷಿಸಿದರೆ ಶಾಶ್ವತ ಅಂಧತ್ವ

'ಹಲೋ ವೆನ್ಲಾಕ್' ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅಕ್ಟೊಬರ್ 14ರಂದು  ವೆನ್ಲಾಕ್ ಆಸ್ಪತ್ರೆಯ ಹಿರಿಯ ನೇತ್ರ ತಜ್ಞರಾಗಿರುವ ಅಜಯ್ ಆರ್.ಕಾಮತ್ ಭಾಗವಹಿಸಿ 'ಕಣ್ಣಿನ ಶಸ್ತ್ರಚಿಕಿತ್ಸೆಗಳು' ಈ ವಿಚಾರವಾಗಿ ಹಲವಾರು ಉಪಯುಕ್ತ ಮಾಹಿತಿಗಳನ್ನು ಕೇಳುಗರಿಗೆ ನೀಡಿದರು.
 
ಆರಂಭದಲ್ಲಿ ಗ್ಲುಕೋಮಾ ರೋಗದ ಬಗ್ಗೆ ಪ್ರಸ್ತಾಪಿಸಿ, "ಈ ರೋಗದಿಂದ ಭಾರತ ದೇಶದಲ್ಲಿ ಅತೀ ಹೆಚ್ಚಿನ ಜನರು ಈ ಸಮಸ್ಯೆಯಿಂದ ಬಳುತ್ತಿದ್ದಾರೆ. ಇದು ಕಣ್ಣುಗಳ ದೃಷ್ಟಿನರಕ್ಕೆ ಸಂಬಂಧಿಸಿದ ರೋಗವಾಗಿದ್ದು, ನಿರಂತರವಾಗಿ ದೃಷ್ಟಿನರದ ಮೇಲೆ ಉಂಟಾಗುವ ಹಾನಿಯಿಂದಾಗಿ ದೃಷ್ಟಿಯ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಸಾಮಾನ್ಯವಾಗಿ  ಗ್ಲುಕೋಮಾ ರೋಗದ ಆರಂಭದಲ್ಲಿ ಹೊರಭಾಗದ ದೃಷ್ಟಿ ಕುಂಠಿತವಾಗುತ್ತದೆ. ಕ್ರಮೇಣ, ಯಾವುದೇ ಚಿಕಿತ್ಸೆ ನೀಡದಿದ್ದಲ್ಲಿ ಮಧ್ಯಭಾಗ ಕೂಡಾ ಕುಂಠಿತವಾಗಿ ಕುರುಡುತನ ಉಂಟಾಗಬಹುದು.  ಹಾಗಾಗಿ ಕಣ್ಣಿನ ಸಮಸ್ಯೆ ಕಾಣಿಸಿಕೊಂಡ ತಕ್ಷಣ ನಿರ್ಲಕ್ಷಿಸದೆ ವೈದ್ಯರಿಂದ ತಪಾಸಣೆ ಮಾಡಿಸಿ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಜೀವನವಿಡೀ ತೊಂದರೆ ಅನುಭವಿಸಬೇಕಾಗುತ್ತದೆ. ಗ್ಲುಕೋಮಾಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯದೆ ನಿರ್ಲಕ್ಷಿಸಿದರೆ ಶಾಶ್ವತ ಅಂಧತ್ವ ಉಂಟಾಗುತ್ತದೆ,"ಎಂದು ಎಚ್ಚರಿಸಿದರು.
 
 
 
 
 
ಇನ್ನು "ಮನೆಯಲ್ಲಿ ಯಾರಾದರೂ  ಗ್ಲುಕೋಮಾದಿಂದ ಬಳಲುತ್ತಿದ್ದರೆ ಇತರ ಸದಸ್ಯರು ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆ ತಪ್ಪದೇ ಪಾಲಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ  ಗ್ಲುಕೋಮಾ  ಕಾಣಿಸುತ್ತಿದೆ. ಮೊಬೈಲ್‌, ಕಂಪ್ಯೂಟರ್‌, ಟಿ.ವಿ ವೀಕ್ಷಣೆಯಿಂದ ಮಕ್ಕಳಲ್ಲಿ ದೃಷ್ಟಿದೋಷ ಉಂಟಾಗುತ್ತಿದೆ," ಎಂದು ಆತಂಕ ವ್ಯಕ್ತಪಡಿಸಿದರು. ಈ ನಡುವೆ  ಗ್ಲುಕೋಮಾ ರೋಗಕ್ಕೆ ಸಂಭಂದಪಟ್ಟು ಕೇಳುಗರ ಕಡೆಯಿಂದ ಬಂದ ಮೂರು ಕರೆಗಳಿಗೆ ಉತ್ತರಿಸಿದರು.
 
ಕಣ್ಣಿನ ಗಂಭೀರ ಖಾಯಿಲೆಯಾದ ಕಣ್ಣಿನ ಪೊರೆ ರೋಗ, ಅದಕ್ಕಿರುವ ಶಸ್ತ್ರಚಿಕಿತ್ಸೆಯ ಬಗ್ಗೆ ಕೇಳಿದ ಪ್ರಶ್ನೆಗೆ ವಿಸ್ತೃತವಾಗಿ ಉತ್ತರಿಸಿದ ಡಾ. ಕಾಮತ್, "ಭಾರತದಲ್ಲಿ ಕಣ್ಣಿನ ಪೊರೆಯಿಂದಾಗಿಯೇ ಬಹಳಷ್ಟು ಮಂದಿ ಕುರುಡುತನ ಅನುಭವಿಸುತ್ತಿದ್ದಾರೆ ಎಂದು ಕೆಲವು ದಾಖಲೆಗಳು ಹೇಳುತ್ತವೆ. ಈಗಿನ ದಿನಗಳಲ್ಲಿ ಕಣ್ಣಿನ ಪೊರೆ ನಿವಾರಣೆಗೆ ಹಲವು ಬಗೆಯ ಶಸ್ತಚಿಕಿತ್ಸಾ ಪದ್ಧತಿಗಳು ಕಾಲಿಟ್ಟಿವೆ  -  ಫೇಕೋಎಮಲ್ಸಿಫಿಕೇಶನ್‌, ಮೈಕ್ರೋ ಇನ್ಸಿಷನ್‌ ಇತ್ಯಾದಿ. ಈ ಎಲ್ಲವೂ ವೈದ್ಯರನ್ನು ಅವಲಂಭಿಸಿದ ಶಸ್ತ್ರಕ್ರಿಯೆ­ಗಳು. ಅದರಲ್ಲೂ ಫೇಕೋಎಮಲ್ಸಿಫಿಕೇಶನ್‌ ಎಂಬ ಅಲ್ಟ್ರಾಸೌಂಡ್‌ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ಈಗ ಚಾಲ್ತಿಯಲ್ಲಿರುವ ಕಣ್ಣಿನ ಶಸ್ತ್ರಚಿಕಿತ್ಸೆ. ಆದರೆ ಅಲ್ಲಿಯೂ ಕಣ್ಣಿನ ಒಂದು ಭಾಗದಲ್ಲಿ ಸಣ್ಣದೊಂದು ರಂಧ್ರಮಾಡಿ ಅದರ ಮೂಲಕ ಪಾರದರ್ಶಕತೆ ಕಳೆದುಕೊಂಡಿರುವ ಕಣ್ಣಿನ ಪೊರೆಯನ್ನು ಸಂಪೂರ್ಣವಾಗಿ ಕತ್ತರಿಸಿ, ತುಂಡು ತುಂಡುಗಳನ್ನಾಗಿ ಮಾಡಲಾಗುತ್ತದೆ. ಅದನ್ನು ಪುಟ್ಟದೊಂದು ವ್ಯಾಕ್ಯೂಮ್‌ ಉಪಕರಣದ ಮೂಲಕ ಹೊರತೆಗೆಯಲಾಗುತ್ತದೆ. ನಂತರ ಅದೇ ರಂಧ್ರದ ಮೂಲಕ ಲೆನ್ಸ್‌ ಅಳವಡಿಸಲಾಗುತ್ತದೆ," ಎಂದು ತಿಳಿಸಿದರು.
 
ಅನೇಕ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿ, "ಕಣ್ಣಿನ ಪೊರೆ ಎಂಬುದು ವಯಸ್ಸಾದವರಲ್ಲಿ ಸಾಮಾನ್ಯ ಸಮಸ್ಯೆ. ಹಾಗಾಗಿ 50 ವರ್ಷ ದಾಟಿದ ನಂತರ ಕಣ್ಣಿನ ಪರೀಕ್ಷೆ ಮಾಡಿಸುತ್ತಿರಿ. ವಯಸ್ಸಾದಂತೆ ನಮಗೆ ಕಣ್ಣುಗಳ ಸಮಸ್ಯೆ ಎದುರಾಗುವುದು ಸಾಮಾನ್ಯ. ಕಣ್ಣುಗಳಲ್ಲಿ ಪೊರೆ ಕಂಡು ಬರುವುದು, ಇದ್ದಕ್ಕಿದ್ದಂತೆ ಕಣ್ಣುಗಳು ಮಂಜಾಗುವುದು, ದೂರದಲ್ಲಿರುವ ವಸ್ತುಗಳು ಕಾಣದೆ ಇರುವುದು. ಇವೆಲ್ಲವೂ ನಂತರದ ದಿನಗಳಲ್ಲಿ ನಾವು ಒಂದೊಂದಾಗಿ ಕಾಣುತ್ತೇವೆ. ಹಾಗಾಗಿ ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ ಪೊರೆ ತೆಗೆದು ಹಾಕದಿದ್ದರೆ ಇದು ಅಂಧತ್ವಕ್ಕೆ ಕಾರಣವಾಗುತ್ತದೆ," ಎಂದು ತಿಳಿಸಿದರು.
 
- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್