ಆಟಿ ಅನಿಷ್ಟ ತಿಂಗಳಲ್ಲ, ಎಂದು ತುಳು ಜಾನಪದ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು.ಇವರು ಜುಲೈ 16ರ ತುಳು ಚಾವಡಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಆಟಿಯಲ್ಲಿ ಹೆಣ ಹೊರಗಿಡಲು ಆಗದಂತ ಜಡಿ ಮಳೆ ಬರುತ್ತದೆ. ನಿರಂತರ ಬರುವ ಮಳೆಯಲ್ಲಿ ಜನಗಳು ಚಳಿ ಹಾಗೂ ಹಸಿವಿನಿಂದ ಸಾಯುತ್ತಿದ್ದರು ಹಾಗಾಗಿ ಆಟಿ ತಿಂಗಳನ್ನು 'ಸೈತಿನಕ್ಲೆ ತಿಂಗೊಲು' ಎಂದು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ, ಎಂದರು.
ಆಟಿ ತಿಂಗಳನ್ನು ಅಂದಿನವರು ಬಡತನದಲ್ಲಿ ಕಳೆದಿದ್ದರೂ ಕೂಡ ಆಟಿ ತಿಂಗಳಲ್ಲಿ ಒಂದು ಜೀವವಿಜ್ಞಾನ ಹಾಗೂ ಮನೋವಿಜ್ಞಾನ ತುಂಬಿದಂತ ತತ್ವ ಅವರ ಬದುಕಲ್ಲಿ ಇತ್ತು. ನಮ್ಮ ಹಿರಿಯರು ಸಾಮಾನ್ಯದ ವಿಜ್ಞಾನಿಗಳು ಅಲ್ಲ.ಅಂದಿನ ಆಟಿಗೂ ಇಂದಿನ ಆಟಿಗೂ ತುಂಬಾ ವ್ಯತ್ಯಾಸ ಇದೆ. ಅಂದಿನವರಿಗೆ ಜೀವವಿಜ್ಞಾನದ ಪರಿಚಯ ಇತ್ತು. ಅಂದು ಆಟಿ ತಿಂಗಳು ಬಡತನದ ಬದುಕಾಗಿತ್ತು. ಇಂದು ಆಟಿ ತಿಂಗಳು ಸಂಭ್ರಮ ಹಾಗೂ ವೈಭವದ ತಿಂಗಳಾಗಿದೆ. ಇದು ಸಂಸ್ಕೃತಿಯ ಪಲ್ಲಟಕ್ಕೆ ದಾರಿಮಾಡಿಕೊಡುವ ಮೂಲಕ ಆಟಿಯ ಬಗೆಗಿನ ನಂಬಿಕೆ ಹಾಗೂ ಸಂಪ್ರದಾಯಗಳು ದಾರಿ ತಪ್ಪುತ್ತಿವೆ, ಎಂದರು.
ಆಟಿ ತಿಂಗಳು ಆಯುರ್ವೇದ ಸತ್ವವಿರುವ ತಿಂಗಳು. ಈ ತಿಂಗಳಲ್ಲಿ ಸಿಗುವ ಪ್ರಾಕೃತಿಕ ಸಂಪತ್ತಿನಲ್ಲಿ, ಅಂದರೆ ಗಿಡಗಳು ಬಳ್ಳಿಗಳಲ್ಲಿ ಔಷದೀಯ ಗುಣಗಳು ಹೆಚ್ಚಿರುತ್ತವೆ ಮತ್ತು ಅದನ್ನೇ ಆಹಾರವನ್ನಾಗಿ ಸೇವನೆ ಮಾಡುತ್ತಿದ್ದರು. ಉದಾಹರಣೆಗೆ ಕೆಸುವಿಂದ ತಯಾರಿಸಿದ ಆಹಾರ, ಹಲಸು ಮತ್ತು ಮಾವು ಇತ್ಯಾದಿ ಇದು ಯಾವುದೇ ರೋಗ ಬರದಂತೆ ತಡೆಗಟ್ಟುತ್ತದೆ. ಈ ಸಾಲಿನಲ್ಲಿ ಹಾಗೆ ಮರದ ಕೆತ್ತೆಯ ಕಷಾಯ ಕೂಡಾ ಒಂದು. ಅಂದಿನ ಆಹಾರ ನಮಗೆ ಮದ್ದು. ಇಂದು ಮದ್ದೇ ನಮಗೆ ಆಹಾರ, ಎಂದು ಅಭಿಪ್ರಾಯಪಟ್ಟರು.
ಆಟಿಯಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ಆಗುವುದಿಲ್ಲ ಏಕೆಂದರೆ ಮೊದಲನೆಯದಾಗಿ ಜೋರು ಮಳೆ. ಈ ಸಂದರ್ಭದಲ್ಲಿ ಯಾವುದೇ ಮದುವೆ ಹಾಗೂ ಇನ್ನಿತರ ಒಳ್ಳೆಯ ಕೆಲಸ ಕಾರ್ಯ ಮಾಡಲು ಅವಕಾಶ ಇಲ್ಲ.ಅಂದು ಈಗಿನ ಹಾಗೆ ಚಪ್ಪರದ ದೇವಾಲಯ ಇರಲಿಲ್ಲ. ಪ್ರಾಕೃತಿಕವಾಗಿ ಗುಡಿಗೋಪುರವಿದ್ದು ಈ ಸಂದರ್ಭದಲ್ಲಿ ಮಳೆ ಬಂದಾಗ ಯಾವುದೇ ಉತ್ಸವ ಮಾಡಲು ಅವಕಾಶ ಇರಲಿಲ್ಲ. ಎರಡನೇದಾಗಿ ಹಣ ಇರಲಿಲ್ಲ. ಹಣವಿಲ್ಲದಿದ್ದಾಗ ಯಾವುದೇ ಸಮಾರಂಭ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆಟಿ ತಿಂಗಳು ನಿಷಿದ್ಧ ಎಂದು ಹಿರಿಯರು ಹೇಳಿದರು. ಇದೇ ತಿಂಗಳಲ್ಲಿ ಜಡಿ ಮಳೆ. ಈ ಮಳೆಯಿಂದಾಗಿ ರೋಗ ಬರುವುದು ಹೆಚ್ಚು ಹಾಗೂ ಅಂದಿನ ದಿನಗಳಲ್ಲಿ ಹೆಚ್ಚಾಗಿ ಇದೇ ತಿಂಗಳು ಅತೀ ಹೆಚ್ಚು ಜನ ಕೆಲವು ರೋಗರುಜಿನಗಳಿಂದ ಮರಣ ಹೊಂದುತ್ತಿದ್ದರು. ಆದ್ದರಿಂದ ಈ ತಿಂಗಳು ಅನಿಷ್ಟ ತಿಂಗಳು ಎಂದು ಅದಕ್ಕೆ ನಂಬಿಕೆಯನ್ನು ಸೇರಿಸಿದರು, ಎಂದರು.
ಆಟಿ ತಿಂಗಳ ಇನ್ನೊಂದು ವಿಶೇಷತೆಯೆಂದರೆ ಆಟಿಕಳೆಂಜ. ಇದು ಜನರನ್ನು ರೋಗದಿಂದ ಕಾಪಾಡಲು, ಊರಿನ ಮಾರಿಯನ್ನು ಕಳೆಯಲು ಪ್ರತಿವರ್ಷ ಮನೆಮನೆಗೆ ಭೇಟಿ ನೀಡಿ ಮಾರಿ ಕಳೆಯುತ್ತಾನೆ ಅನ್ನುವ ನಂಬಿಕೆ. ಪಾಡ್ದನದಲ್ಲಿ ತಿಳಿಸುವಂತೆ ಇದೇ ಆಟಿಕಳಂಜ ಈಶ್ವರ ಅಥವಾ ಬ್ರಹ್ಮನ ಶಕ್ತಿ ಎಂದು ತಿಳಿದುಬರುತ್ತದೆ. ಆಟಿಕಳೆಂಜ ಮನೆಮನೆಗೆ ಭೇಟಿ ನೀಡಿ ಮನೆಯವರು ನೀಡುವಂತಹ ಅಕ್ಕಿ, ತೆಂಗಿನಕಾಯಿ ಪಡೆದುಕೊಂಡು ಆ ಊರಿನ ಮಾರಿಯನ್ನು ಕಳೆಯುತ್ತಾನೆ ಎಂಬ ನಂಬಿಕೆ. ನಿಜವಾಗಿ ಆಟಿಕಳಂಜ ಬರೋದು ಮನೋರೋಗ ನಿವಾರಣೆ ಮಾಡಲು ಮಾಂತ್ರಿಕ ಶಕ್ತಿರೂಪದಲ್ಲಿ ಊರಿಗೆ ಬರುತ್ತಿದ್ದ, ಎಂದು ಅಭಿಪ್ರಾಯಪಟ್ಟರು. ಹೀಗೆ ಡಾ. ಸಂಕಮಾರ್ ಉತ್ತಮ ಮಾಹಿತಿಯನ್ನು ನೀಡುತ್ತಾ ಹಲವಾರು ಕೇಳುಗರ ಕರೆಗಳಿಗೆ ಉತ್ತಮವಾಗಿ ಸ್ಪಂದಿಸಿದರು.