Dr Gurudat Kamath: ಮೆಳ್ಳೆಗಣ್ಣು ಅಥವಾ Squint Eye ಸಮಸ್ಯೆ ಮತ್ತು ಪರಿಹಾರ ಚಿಕಿತ್ಸೆಗಳು

ಕಣ್ಣು ಪ್ರಪಂಚದ ಸೌಂದರ್ಯವನ್ನು ಸವಿಯಲು ಇರುವ ವಿಶೇಷ ಅಂಗವಾಗಿದ್ದು ಕೆಲವೊಂದು ವ್ಯಕ್ತಿಗಳಲ್ಲಿ ಈ ಕಣ್ಣುಗಳು ಮೆಳ್ಳೆಗಣ್ಣು ಸಮಸ್ಯೆಯಿಂದ ಕೂಡಿರಬಹುದು ಎಂದು ಡಾ. ಗುರುದತ್ತ್ ಕಾಮತ್ (ಹಿರಿಯ ನೇತ್ರ ತಜ್ಞರು, ಸರ್ಕಾರಿ ವೆನ್ಲಾಕ್ ಆಸ್ಪತ್ರೆ, ಮಂಗಳೂರು) ಹಲೋ ವೆನ್ಲಾಕ್ ಕಾರ್ಯಕ್ರಮದಲ್ಲಿ ವಿವರಿಸಿದರು.

ಮೆಳ್ಳೆಗಣ್ಣು ಸಮಸ್ಯೆಯು ಹುಟ್ಟಿನಿಂದ ಬರಬಹುದು. ಕೆಲವೊಮ್ಮೆ ಇದು ಅನುವಂಶಿಕ ಸಮಸ್ಯೆ ಆಗಬಹುದು. ಸಾಮಾನ್ಯವಾಗಿ ಈ ಸಮಸ್ಯೆಯು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಎರಡು ಕಣ್ಣುಗಳು ಕಾಣುವಂತಹ ನೋಟಗಳು ವಿಭಿನ್ನವಾಗಿ ಕಾಣುವಂತಾದ್ದು ಆಗಿರಬಹುದು. ವಿಶೇಷವಾಗಿ ಇದು ಸಮೀಪ ದ್ರಷ್ಟಿದೋಷದ ಸಮಸ್ಯೆಯನ್ನು ಒಳಗೊಂಡಿರುತ್ತದೆ, ಎಂದರು.

ಈ ಸಮಸ್ಯೆಯಿಂದ ಒಂದು ಮಗು ಸಾಮಾನ್ಯವಾಗಿ ಹೊರಪ್ರಪಂಚವನ್ನು ನೋಡುವಾಗ ಒಂದೇ ಕಣ್ಣಿಗೆ ಒತ್ತು ನೀಡಿ ಇನ್ನೊಂದು ಕಣ್ಣನ್ನು ತನಗರಿವಿಲ್ಲದೆ ನಿರ್ಲಕ್ಷಮಾಡಿ ಆ ಕಣ್ಣಿನ ನೋಡುವ ಶಕ್ತಿ ಕಳೆದುಕೊಳ್ಳುತ್ತದೆ. ಆರು ವರ್ಷದ ಒಳಗೆ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಿದೆ. ನಂತರ ಇದು ಕಷ್ಟಕರ, ಎಂದರು.

ಇಲ್ಲಿ ಆರಂಭದಲ್ಲಿ ಕೆಲವೊಮ್ಮೆ ಪೆನ್ಸಿಲ್ ತೆರಪಿ ಉಪಯೋಗಕ್ಕೆ ಬರಬಹುದು. ಕೆಲವೊಮ್ಮೆ ಮಗು ಹೆಚ್ಚು ನೋಡುವ ಕಣ್ಣಿಗೆ ಪ್ಲಾಸ್ಟರ್ ಹಾಕಿ ನೋಡಲು ಕಷ್ಟಪಡುವ ಕಣ್ಣನ್ನು ಸುಲಭದಲ್ಲಿ ಸರಿಪಡಿಸುವ ಸಾಧ್ಯತೆ ಇದೆ. ಇದು ಕಷ್ಟಸಾಧ್ಯವಾದಾಗ ಕನ್ನಡಕದ ಬಳಕೆ ವೈದ್ಯರ ಸಲಹೆಯಂತೆ ಉಪಯೋಗಕ್ಕೆ ಬರಬಹುದು. ಮತ್ತು ಕೊನೆಯದಾಗಿ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿ ನಡೆಸಿ ಯಶಸ್ಸು ಕಾಣಬಹುದು, ಎಂದು ಡಾ. ಗುರುದತ್ತ್ ತಿಳಿಸಿದರು.

ಕೆಲವೊಮ್ಮೆ ಮದುವೆ ಸಂಧರ್ಭದಲ್ಲಿ ಸೌಂದರ್ಯ ಕಾಣಲು ಕೂಡ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಇದು ಗಂಭೀರ ಸಮಸ್ಯೆ ಆಗಿದ್ದು, ಇದನ್ನು ಸೂಕ್ತ ನೇತ್ರ ತಜ್ಞರ ಸಲಹೆ ಪಡೆದು ಪರಿಹಾರ ಪಡೆಯುವ ಅವಶ್ಯಕತೆ ಇದೆ,  ಎಂದರು. ಇತ್ತೀಚಿಗೆ ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆ ಕೂಡ ಅಪರೂಪಕ್ಕೆ ಈ ಸಮಸ್ಯೆ ಬರುವಂತೆ ಕಾರಣವಾಗಬಹುದು. ಒಟ್ಟಾರೆ, ಈ ಮೆಳ್ಳೆಗಣ್ಣು ಸಮಸ್ಯೆಯನ್ನು ನಿರ್ಲಕ್ಷಿಸುವ ಬದಲು ಈ ಕುರಿತು ಜಾಗ್ರತೆವಹಿಸುವುದು ಅತೀ ಮುಖ್ಯವಾದುದು ಎಂದು ಡಾ. ಗುರುದತ್ತ್ ಕಾಮತ್ ವಿವರಿಸಿದರು.

ಹಲವಾರು ಕೇಳುಗರು ಪ್ರಶ್ನೆಗಳನ್ನು ಕೇಳಿದರು.

- ರೋಶನ್, ಕುಲಶೇಖರ