Dr. Raghavendra: ಪಿತ್ತಕೋಶದ ಕಲ್ಲು, ಕಾಯಿಲೆಯ ಸ್ವರೂಪದ ಬಗ್ಗೆ ತಿಳಿದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಸಹ ಪಿತ್ತಕೋಶ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.ಪಿತ್ತಕೋಶದ ಕಲ್ಲು ಕಾಯಿಲೆಯ ಸ್ವರೂಪ ಮತ್ತು ಆರೋಗ್ಯದ ಮೇಲೆ ಅದರ ಪ್ರಭಾವದ ಬಗ್ಗೆ ಹೆಚ್ಚಿನ ಜನರು ಅಜ್ಞಾನ ಹೊಂದಿರುವುದೇ ಇದಕ್ಕೆ ಕಾರಣ ಎಂದು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ರಾಘವೇಂದ್ರ ಅವರು ಇತ್ತೀಚೆಗೆ ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಿತ್ತಕೋಶ ಎಂದರೆ, ಉದರದಲ್ಲಿ ಪಿತ್ತಜನಕಾಂಗದ (ಲಿವರ್‌) ಕೆಳಭಾಗದಲ್ಲಿ ಪಿತ್ತಜನಕಾಂಗದ ನಾಳಕ್ಕೆ ಅಂಟಿಕೊಂಡಂತೆ ಇರುವ ಒಂದು ಅಂಗ. ಪಿತ್ತಜನಕಾಂಗದಲ್ಲಿ ಉತ್ಪಾದಿತವಾಗುವ ಪಿತ್ತರಸದ ತುಸು ಭಾಗವನ್ನು ಶೇಖರಿಸಿ ಇಟ್ಟುಕೊಳ್ಳುವುದೇ ಪಿತ್ತಕೋಶದ ಕೆಲಸ. ಪಿತ್ತಕೋಶದ ನಾಳ ಹಾಗೂ ಪಿತ್ತ ಜನಕಾಂಗದ ನಾಳ ಒಟ್ಟು ಸೇರಿಕೊಂಡು ಸಾಮಾನ್ಯ ಪಿತ್ತನಾಳವಾಗಿ ಮಾರ್ಪಟ್ಟು, ಸಣ್ಣ ಕರುಳಿಗೆ ಜೋಡಣೆಯಾಗುತ್ತದೆ. ಸಣ್ಣ ಕರುಳಿನಲ್ಲಿ ಜಿಡ್ಡುಯುಕ್ತ ಆಹಾರದ ಪಚನಕ್ರಿಯೆಯಲ್ಲಿ ಪಿತ್ತರಸದ ಪಾತ್ರ ಮಹತ್ವದ್ದು.ಆದರೆ ಪಿತ್ತರಸ ಸ್ರವಿಸುವುದು ಪಿತ್ತಜನಕಾಂಗದಲ್ಲಿಯೇ ಹೊರತು ಪಿತ್ತಕೋಶದಲ್ಲಲ್ಲ ಎಂಬುದು ಗಮನಿಸಬೇಕಾದ ಅಂಶ. ಪಿತ್ತಕೋಶದಲ್ಲಿ ಕಲ್ಲಿನ ಇರುವಿಕೆಯಿಂದಾಗಿ ನಿರ್ದಿಷ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುವಂತಿಲ್ಲ. ಕೆಲವರಿಗಂತೂ ಕಲ್ಲುಗಳ ಇರುವಿಕೆಯ ಅರಿವೇ ಇರುವುದಿಲ್ಲ. ಇನ್ನು ಕೆಲವರಿಗೆ ಊಟದ ನಂತರ ಉದರದ ಮೆಲ್ಬಾಗದಲ್ಲಿ ಹಿಡಿದಿಟ್ಟ ಅನುಭವ ಅಥವಾ ನೋವು ಕಾಣಿಸಬಹುದು. ಹಲವರು ಇದನ್ನು ಗ್ಯಾಸ್ಟ್ರಿಕ್‌ ಸಮಸ್ಯೆ ಎಂದುಕೊಳ್ಳುವುದುಂಟು. ಆ ರೀತಿಯ ನೋವು ಕಂಡು ಬಂದರೆ ಸೂಕ್ತ ವೈದ್ಯರಿಗೆ ತೋರಿಸುವುದು ಅಗತ್ಯ ಎಂದು ಕೇಳುಗರಿಗೆ ಸಲಹೆ ನೀಡಿದರು.

ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಭಾರತದಲ್ಲಿ ಪುರುಷರಿಗಿಂತ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಹಾಗೂ ಕಡಿಮೆ ವಯಸ್ಸಿನ ಮಹಿಳೆಯರಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಗಳಿರಬಹುದು. ಹಾಗಾಗಿ ಅಧಿಕ ತೂಕ ಹೊಂದಿರುವ ಮಹಿಳೆಯರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಅಧಿಕ ಕೊಲೆಸ್ಟ್ರಾಲ್ ಮತ್ತು ಕಡಿಮೆ ನಾರಿನಂಶ ಇರುವ ಆಹಾರ ಸೇವಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುವುದು. ಕೆಲವರಿಗೆ ಆನುವಂಶಿಕತೆಯಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದರು. ಭುಜದಿಂದ ಪಿತ್ತಕೋಶ ಇರುವ ಜಾಗದ ನಡುವೆ ಏನಾದರೂ ತೀವ್ರವಾದ ನೋವನ್ನು ಅನುಭವಿಸುತ್ತಿದ್ದರೆ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಅಗತ್ಯ ಎಂದರು.

ಪಿತ್ತಕೋಶವನ್ನು ತೆಗೆಯುವುದರಿಂದ ವ್ಯಕ್ತಿಯ ಆರೋಗ್ಯ ಅಥವಾ ಪಚನ ಕ್ರಿಯೆಯಲ್ಲಿ ಯಾವುದೇ ಏರುಪೇರು ಉಂಟಾಗುವುದಿಲ್ಲ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಹೇಳುತ್ತಾ ಅನೇಕ ಕೇಳುಗರ ಪ್ರಶ್ನೆಗಳಿಗೂ, ಸಂಶಯಗಳಿಗೂ ಉತ್ತರಿಸಿದರು.

-RJ Saifulla Kuthar