Dr Sharanya Shetty: ಮಹಿಳೆಯರು ಖಿನ್ನತೆ ಎದುರಾದಾಗ ಜಾಗರೂಕರಾಗಬೇಕು

"ಖಿನ್ನತೆ ಇತ್ತೀಚಿನ ದಿನಗಳಲ್ಲಿ ಜನರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯ. ಅದರ ರೋಗಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಒಳ್ಳೆಯದು," ಎಂದು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮನೋರೋಗ ತಜ್ಞೆ ಡಾ. ಶರಣ್ಯ ಶೆಟ್ಟಿ ನುಡಿದರು. ಅವರು ಎಪ್ರಿಲ್ 28ರಂದು ಹಲೋ ವೆನ್ಲ‍ಾಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

'ಮಹಿಳೆಯರನ್ನು ಕಾಡುವ ಖಿನ್ನತೆ' ಎಂಬ ವಿಚಾರದಲ್ಲಿ ಮಾತನಾಡಿದ ಅವರು, ಮಹಿಳೆಯ ನರ ಮಂಡಲಗಳಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು ಖಿನ್ನತೆಗೆ ಪ್ರಮುಖ ಕಾರಣ. ಕೇವಲ ದುಃಖ ಪಡುವುದು, ಬೇಜಾರಾಗುವುದು ಮಾತ್ರ ಖಿನ್ನತೆ ಅಲ್ಲ. ನಿರಂತರವಾಗಿ ಎರಡು ವಾರಗಳ ಕಾಲ ಬೇಜಾರಲ್ಲೇ ಇರುವುದು, ಯಾವುದರಲ್ಲೂ ಆಸಕ್ತಿ ಇರದೇ ಇರುವುದು, ನೆಚ್ಚಿನ ವಿಷಯಗಳಲ್ಲಿ ಆಸಕ್ತಿ ಹೊಂದುವುದನ್ನು ಸಹ ನಿಲ್ಲಿಸುವುದು, ಯಾವುದರ ಬಗ್ಗೆಯೂ ಆಸಕ್ತಿ ಹೊಂದಿಲ್ಲದಿದ್ದರೆ, ನೆಚ್ಚಿನ ಚಲನಚಿತ್ರವನ್ನು ನೋಡುವುದು, ಸ್ನೇಹಿತರೊಂದಿಗೆ ಸುತ್ತಾಡುವುದು, ಎಲ್ಲವೂ ನಿಷ್ಪ್ರಯೋಜಕವೆಂದು ತೋರಿದರೆ, ಅದು ಖಿನ್ನತೆಯ ಲಕ್ಷಣವಾಗಿರಬಹುದು ಎಂದು ಹೇಳಿದರು.

ಮಹಿಳೆಯರಲ್ಲಿ ಖಿನ್ನತೆಗೆ ಕಾರಣವಾಗಬಹುದಾದ ಕೆಲವು ಅಂಶಗಳ ಬಗ್ಗೆ ತಿಳಿಸಿ ಅಂತ ಕೇಳಿದಾಗ, ಅನೇಕ ಕಾರಣಗಳ ಪಟ್ಟಿಯ ಬಗ್ಗೆ ಹೇಳುತ್ತಾ ಹೋದರು. ಋತುಚಕ್ರದಲ್ಲಿನ ಬದಲಾವಣೆಗಳು, ಅದಕ್ಕೆ ಸಂಬಂಧಿತ ತೊಂದರೆಗಳು ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್ (PMS), ಮುಟ್ಟುತೀರಿಕೆ, ಲೈಂಗಿಕತೆ ಸಮಸ್ಯೆಗಳು ಮತ್ತು ದೇಹದ ಆಕೃತಿಯ ಬಗ್ಗೆ ಚಿಂತೆ ಮಾಡುವುದು, ಕೆಲಸ, ಮದುವೆ ಅಥವಾ ವಲಸೆಗಳ ಕಾರಣಗಳಿಂದಾಗುವ ಜೀವನಶೈಲಿಯ ಬದಲಾವಣೆಗಳು, ದಾಂಪತ್ಯ ಜೀವನದ ಸಮಸ್ಯೆಗಳು, ಪ್ರಸವಾ ನಂತರದ ಖಿನ್ನತೆ, ಸಾಮಾಜಿಕ ಬೆಂಬಲದ ಕೊರತೆ ಹೀಗೆ ಖಿನ್ನತೆಗೆ ಕಾರಣವಾಗಬಹುದಾದ ಅಂಶಗಳ ಬಗ್ಗೆ ವಿವರವಾಗಿ ತಿಳಿಸಿದರು.

ಇನ್ನು ಮೂಡ್ ಸ್ವಿಂಗ್ (mood swing) ಬಗ್ಗೆ ಕೇಳುಗರೊಬ್ಬರು ಕೇಳಿದ ಪ್ರಶ್ನೆಗೆ, ಇದು ಮಹಿಳೆಯರಲ್ಲಿ ಖಿನ್ನತೆಯ ಸಾಮಾನ್ಯ ಲಕ್ಷಣವಾಗಿದೆ. ಋತುಚಕ್ರದ ಸಮಯದಲ್ಲಿ ಮೂಡ್ ಸ್ವಿಂಗ್ ಆಗೋದು ಸಾಮಾನ್ಯ. ಆದರೆ ಆ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲೂ ಪದೇ ಪದೇ ಮೂಡ್ ಸ್ವಿಂಗ್ ಆಗುತ್ತಿದ್ದರೆ ಕಿರಿಕಿರಿ ಅನುಭವಿಸುತ್ತೀರಿ. ಕೆಲವೊಮ್ಮೆ ಅದರ ಬಗ್ಗೆ ನೀವು ಮಾತನಾಡದೆ ಅಳುತ್ತೀರಿ ಎಂದಾದರೆ ಆವಾಗ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು. ಹೀಗೆ ಕೇಳುಗರ ಐದು ಪ್ರಶ್ನೆಗಳಿಗೂ ಉತ್ತರಿಸಿದರು.

ಕೊನೆಗೆ ಕೇಳುಗರಿಗೆ ನೀಡುವ ಸಂದೇಶದಲ್ಲಿ ಮಹಿಳೆಯರು ಚಿಂತೆ ಮಾಡುವುದು ಜಾಸ್ತಿ. ಸಮಸ್ಯೆಯೊಂದು ಎದುರಾದಾಗ ಅದನ್ನು ಆಪ್ತರ ಜತೆ ಚರ್ಚಿಸುವ ಬದಲು ತಮ್ಮಲ್ಲಿಯೇ ಇಟ್ಟುಕೊಂಡು ಚಿಂತಿಸುವುದರಿಂದ ಒತ್ತಡ ಉಂಟಾಗುತ್ತದೆ. ಇದೇ ಮುಂದೆ ಖಿನ್ನತೆಗೆ ಎಡೆಮಾಡಿಕೊಡುತ್ತದೆ. ಹಾಗಾಗಿ ಒತ್ತಡ ಎದುರಾದಾಗ ಅದನ್ನು ನಿಭಾಯಿಸಲು ಕಲಿಯಬೇಕು. ಹಿರಿಯರೊಂದಿಗೆ, ಅನುಭವಿಗಳೊಂದಿಗೆ ಚರ್ಚಿಸಬೇಕು. ಖಿನ್ನತೆಯ ಆರಂಭಿಕ ಹಂತದಲ್ಲೇ ಮನೋವೈದ್ಯರಿಂದ ಸೂಕ್ತ ಸಲಹೆ ಪಡೆದುಕೊಂಡರೆ ಅದು ಇನ್ನಷ್ಟು ಗಾಢವಾಗದಂತೆ ತಡೆಯಬಹುದು ಎಂದು ತಿಳಿಸಿದರು.

- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್