ಆಫರೆಸಿಸ್ ಬಗ್ಗೆ ಯಾವುದೇ ಭಯ ಬೇಡ. ಇದರಲ್ಲಿ ಯಾವುದೇ ದುಷ್ಪರಿಣಾಮವಿಲ್ಲ ಎಂದು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಡಾ. ಶರತ್ ಕುಮಾರ್ ರಾವ್ ಅವರು ತಿಳಿಸಿದರು. ಇವರು ಎಪ್ರಿಲ್ 21 ಶುಕ್ರವಾರ ಹಲೋ ವೆನ್ಲಾಕ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಮಾತನಾಡಿದರು.
ಅಫೇರಿಸಿಸ್ ಅಂದರೆ ರಕ್ತದಲ್ಲಿರುವ ಬೇರೆ ಬೇರೆ ಅಂಶಗಳಾದ ಜೀವಕೋಶ, ಪ್ಲಾಸ್ಮಾ ಹಾಗೂ ರಕ್ತ ಕಣಗಳು ಇವುಗಳಲ್ಲಿ ಯಾವುದು ಬೇಕು ಯಾವುದೂ ಬೇಡವೋ ಅದನ್ನು ಬೇರ್ಪಡಿಸಿ ಉಳಿದ ರಕ್ತ ಕಣಗಳನ್ನು ಮರು ಅಳವಡಿಸುವುದೇ ಆಗಿದೆ, ಎಂದು ಅವರು ತಿಳಿಸಿದರು. ಇದನ್ನು ಅಫೇರಿಸಿಸ್ ಎಂಬ ಯಂತ್ರದ ಮೂಲಕ ಮಾಡಲಾಗುತ್ತದೆ ಮತ್ತು ಚಿಕಿತ್ಸಾತ್ಮಕ ಮತ್ತು ದಾನದ ರೂಪವಾಗಿ ರಕ್ತ ಕಣಗಳನ್ನು ಬೇರ್ಪಡಿಸಲು ಇದನ್ನು ಬಳಸುತ್ತಾರೆ . ಇದು ತುರ್ತು ಸಂದರ್ಭದಲ್ಲಿ ತುಂಬಾ ಸಹಕಾರಿಯಾಗಿದೆ. ಉದಾಹರಣೆಗೆ ವಿಷಕಾರಿ ಪದಾರ್ಥಗಳನ್ನ ಸೇವಿಸಿದ ಸಂದರ್ಭ ರಕ್ತದಲ್ಲಿರುವ ವಿಷದ ಅಂಶವನ್ನು ತೆಗೆದು ಹಾಕಲು ಇದನ್ನು ಬಳಸಬಹುದು. ಅಷ್ಟೇ ಅಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳ ಸಂದರ್ಭಗಳಲ್ಲಿ ಇದನ್ನು ಚಿಕಿತ್ಸಾತ್ಮಕವಾಗಿ ಬಳಸಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇವಲ ಚಿಕಿತ್ಸೆಗೆ ಬಳಸುವುದಲ್ಲದೆ ದಾನದ ರೂಪವಾಗಿ ರಕ್ತಕಣಗಳನ್ನು ಪಡೆಯಲು ಕೂಡ ಇದು ಬಹಳಷ್ಟು ಸಹಕಾರಿ. ಒಬ್ಬ ಮನುಷ್ಯನಿಗೆ ಬೇಕಾಗುವ ಪ್ಲೆಟೆಲೆಟ್ ಅಂಶವನ್ನು ಇದರಿಂದ ಪಡೆಯಲು ಸಾಧ್ಯವಿದೆ. ದಾನದ ರೂಪವಾಗಿ ಕೇವಲ ಗಂಡಸರು ಮಾತ್ರ ನೀಡಬಹುದು; ಹೆಂಗಸರಿಗೆ ಯಾವುದೇ ಅವಕಾಶವಿಲ್ಲ. ಯಾಕೆಂದರೆ ತಿಂಗಳ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಲ್ಲಿ ಹೆಚ್ಚಿನ ಕ್ಯಾಲ್ಸಿಯಂನ ಕೊರತೆ ಉಂಟಾಗುತ್ತದೆ. ಆ ಕಾರಣದಿಂದಾಗಿ ಮಹಿಳೆಯರಿಂದ ದಾನದ ರೂಪವಾಗಿ ಪಡೆಯಲಾಗುವುದಿಲ್ಲ. ದಾನದ ರೂಪವಾಗಿ ಪಡೆಯುವಾಗ ದಾನಿಯಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗಬಹುದು. ಅದಕ್ಕೆ ಕ್ಯಾಲ್ಸಿಯಂ ಮಾತ್ರೆಯನ್ನು ಈ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದರು.
ಡಾ. ಶರತ್ ಅವರು ಈ ಕಾರ್ಯಕ್ರಮದಲ್ಲಿ ಸಿಂಗಲ್ ಡೋನರ್ ಪ್ಲೆಟೆಲೆಟ್ ಹಾಗೂ ರಾಂಡಮ್ ಡೋನರ್ ಪ್ಲೆಟೆಲೆಟ್ ಇದಕ್ಕಿರುವ ವ್ಯತ್ಯಾಸಗಳ ಕುರಿತು ತಿಳಿಸುತ್ತಾ ಹೆಚ್ಚು ಹೆಚ್ಚು ಸಿಂಗಲ್ ಡೋನರ್ ಪ್ಲೆಟೆಲೆಟ್ ನೀಡುವ ದಾನಿಗಳ ಸಂಖ್ಯೆ ಹೆಚ್ಚಾಗಬೇಕು ಮತ್ತು ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಸಂಪೂರ್ಣ ಉಚಿತ ಎಂದು ತಿಳಿಸುತ್ತಾ ಹಲವಾರು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.
- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್