'ನಿಮ್ಮ ಕಣ್ಣನ್ನು ನೀವು ರಕ್ಷಿಸಬೇಕು'ಎಂದು ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಸೌಮ್ಯ ಅವರು ಅಕ್ಟೋಬರ್ 13 ರಂದು ವಿಶ್ವ ದೃಷ್ಟಿ ದಿನದ ಪ್ರಯುಕ್ತ ಹಲೋ ವೆನ್ಲಾಕ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ವರ್ಷ ಅಕ್ಟೋಬರ್ ಎರಡನೇ ಗುರುವಾರ ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ ಮತ್ತು ಕೆಲಸದ ಸ್ಥಳಗಳಲ್ಲಿ ನಿಮ್ಮ ಕಣ್ಣನ್ನು ರಕ್ಷಿಸಿ ಎಂಬುದು ಈ ವರ್ಷದ ಪರಿಕಲ್ಪನೆಯಾಗಿದೆ ಎಂದು ಡಾ.ಸೌಮ್ಯ ಅವರು ತಿಳಿಸಿದರು. ಮುಖ್ಯವಾಗಿ ಬೃಹತ್ ಕೈಗಾರಿಕೆಗಳಲ್ಲಿ ಅತಿ ಸೂಕ್ಷ್ಮವಾದ ಕೆಲಸದ ಸ್ಥಳಗಳಲ್ಲಿ ಕೆಲಸ ಮಾಡುವವರು ಕಣ್ಣಿಗೆ ಸುರಕ್ಷಾ ಕವಚ,ಸೈಡ್ ಶೀಲ್ಡ್ ಗಳು ಇರುವ ಕನ್ನಡಕಗಳನ್ನು ಧರಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ ವೆಲ್ಡಿಂಗ್ ಕೆಲಸ ಮಾಡುವ ಸಮಯದಲ್ಲಿ ಸಣ್ಣ ಸಣ್ಣ ಕಬ್ಬಿಣದ ತುಂಡುಗಳು ಕಣ್ಣಿಗೆ ಬಿದ್ದಾಗ ಅದು ಕಣ್ಣಿನ ಕಾರ್ನಿಯಾದ ಕಪ್ಪುಗುಡ್ಡೆಯಲ್ಲಿ ಅಂಟಿಕೊಳ್ಳುತ್ತದೆ. ಇದು ಕಣ್ಣಿಗೆ ತುಂಬಾ ಹಾನಿ ಉಂಟು ಮಾಡುತ್ತದೆ. ಇದನ್ನು ಶಸ್ತ್ರಚಿಕಿತ್ಸೆ ಮಾಡುವುದಕ್ಕೂ ತುಂಬಾ ಕಷ್ಟ. ಹಾಗಾಗಿ ಈ ಬಗ್ಗೆ ಕೆಲಸದಾತರೂ ತಮ್ಮ ಉದ್ಯೋಗಿಗಳಿಗೆ ಕಣ್ಣಿಗೆ ಸುರಕ್ಷಾ ಕವಚಗಳನ್ನ ನೀಡುವುದು ಅತಿ ಅಗತ್ಯ. ಅಷ್ಟೇ ಅಲ್ಲದೆ ಕಂಪ್ಯೂಟರಿನಲ್ಲಿ ಕೆಲಸ ಮಾಡುವಾಗ 20 ನಿಮಿಷ ಕೆಲಸ ಮಾಡಿದರೆ 20 ಸೆಕೆಂಡುಗಳ ಕಾಲ 20 ಫೀಟ್ ದೂರ ಇರುವ ವಸ್ತುಗಳನ್ನು ನೋಡಬೇಕು. ಹೀಗೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಬಹುದು ಎಂದು ತಿಳಿಸಿದರು.
ಕಣ್ಣಿನ ಆರೋಗ್ಯವನ್ನು ಕಾಪಾಡಲು ಹಸಿರು ಸೊಪ್ಪು ತರಕಾರಿಗಳನ್ನು ಮತ್ತು ಹಳದಿ ಬಣ್ಣದ ಹಣ್ಣುಗಳನ್ನು ತಿನ್ನಬೇಕು ಹಾಗೂ ಮದ್ಯಪಾನ, ಧೂಮಪಾನಗಳನ್ನು ಮಾಡಬಾರದು ಮತ್ತು ಕಣ್ಣಿಗೆ ತೊಂದರೆ ಕೊಡುವ ಕೆಲವು ಔಷಧಿಗಳ ಸೇವನೆಯನ್ನು ನಿಲ್ಲಿಸಬೇಕು ಎಂದರು ಹಾಗೂ ಕಣ್ಣಿನ ಹಲವಾರು ಚಿಕಿತ್ಸೆಗಳ ಬಗ್ಗೆಯೂ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಕಣ್ಣಿನ ಸಮಸ್ಯೆ ಇರುವವರಿಗೆ ಸರಕಾರದಿಂದ ಸಿಗುವ ಕೆಲವು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಉದಾಹರಣೆಗೆ 30 ಶೇಕಡಾದಷ್ಟು ಕಣ್ಣಿನ ಸಮಸ್ಯೆ ಅಂದರೆ ಅವರಿಗೆ ಒಂದು ಕಣ್ಣಿಂದ ಎಲ್ಲಾ ಕೆಲಸವನ್ನು ಮಾಡಲು ಸಾಧ್ಯವಿದೆ ಆದರೆ 40 ಶೇಕಡಕಿಂತ ಹೆಚ್ಚು ಇದ್ದಲ್ಲಿ ಅವರಿಗೇ ಸರಕಾರದ ಕೆಲವು ಸೌಲಭ್ಯಗಳು ಸಿಗುತ್ತದೆ. 80 ಕಿಂತಲು ಅಧಿಕ ಸಮಸ್ಯೆ ಇರುವವರಿಗೆ BPL Card ನವರಿಗೆ ಪಿಂಚಣಿ ಸೌಲಭ್ಯ ಸಿಗುತ್ತದೆ ಮತ್ತು ಉಚಿತ ರೈಲು ಪ್ರಯಾಣದ ಟಿಕೆಟ್ ಸಿಗುತ್ತದೆ ಎಂದು ತಿಳಿಸುತ್ತಾ ವೆನ್ಲಾಕ್ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸುತ್ತಾ ಹಲವಾರು ಕೇಳುಗರ ಪ್ರಶ್ನೆಗೆ ಉತ್ತರಿಸಿದರು.
-RJ ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್