ಶಿಲೀಂಧ್ರಗಳ ಬೆಳವಣಿಗೆಗೆ ತೇವಾಂಶವೇ ಕಾರಣವಾಗಿರುತ್ತದೆ. ದೇಹದ ಯಾವುದೇ ಭಾಗ ತೇವಾಂಶದಿಂದ ಕೂಡಿರದಂತೆ ನೋಡಿಕೊಳ್ಳುವುದು, ದಿನನಿತ್ಯ ದೇಹ ಶುದ್ದಿಯ ಕಡೆ ಗಮನಹರಿಸುವುದರಿಂದ ಚರ್ಮದ ಫಂಗಸ್ ಭಾದಿಸದಂತೆ ತಡೆಗಟ್ಟಬಹುದು ಎಂದು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ. ಸುಬೋಧ್ ಕುಮಾರ್ ರೈ ಹೇಳಿದರು. ಇತ್ತೀಚೆಗೆ ಇವರು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ಹಾಗೂ ರೇಡಿಯೋ ಸಾರಂಗ್ ಸಹಯೋಗದಲ್ಲಿ ನಡೆಯುತ್ತಿರುವ ’ಹಲೋ ವೆನ್ಲಾಕ್" ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ನಾನ ಮಾಡಿದ ಅನಂತರ ದೇಹವನ್ನು ಬಾತ್ ಟವೆಲ್‌ನಿಂದ ಸರಿಯಾಗಿ ಒರೆಸಿಕೊಳ್ಳಬೇಕು. ಸ್ವಚ್ಚ ಕಾಲುಚೀಲ, ಟವೆಲ್, ಬಟ್ಟೆಗಳನ್ನು ಪ್ರತಿನಿತ್ಯ ಬಳಸಬೇಕು. ತೇವಾಂಶರಹಿತ ಒಳ ಉಡುಪುಗಳನ್ನು ಬಳಸಬೇಕು. ಸಾಬೂನು, ಬಾಚಣಿಗೆಯನ್ನು ಇನ್ನೊಬ್ಬರು ಬಳಸದಂತೆ ಜಾಗೃತೆ ವಹಿಸಿಕೊಳ್ಳಬೇಕು . ವಾರದಲ್ಲಿ ಕನಿಷ್ಠ ಎರಡು ಬಾರಿ ತಲೆ ಸ್ನಾನ ಮಾಡುವುದರಿಂದ ಶಿಲೀಂದ್ರಗಳ ಹಾವಳಿಯಿಂದ ರಕ್ಷಣೆ ಪಡೆಯಬಹುದು ಎಂದು ತಿಳಿಸಿದರು.
ಅನೇಕ ಕೇಳುಗರ ಪ್ರಶ್ನೆಗೆ ಉತ್ತರಿಸಿದ ಅವರು ಕೇಳುಗರಿಗೆ ಸಲಹೆ ನೀಡುತ್ತಾ, ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವವರು, ಮಧುಮೇಹಿಗಳು ಈ ಶಿಲೀಂಧ್ರಗಳಿಂದ ಜಾಗ್ರತೆ ವಹಿಸಬೇಕು. ಅವರು ಸ್ವಚ್ಚತೆಯೆಡೆಗೆ ಹೆಚ್ಚಿನ ಗಮನ ಕೊಡಬೇಕಾಗುತ್ತೆ . ಸಣ್ಣ ಲಕ್ಷಣ ಕಂಡು ಬಂದರೂ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
-RJ Saifulla