Dr Sunil Kumar: ಚಿತ್ತವಿಕಲತೆ ಯಾರಲ್ಲೂ ಬರಬಹುದು

ಕುಟುಂಬದ ಉತ್ತಮ ಸಹಕಾರದಿಂದ ಚಿತ್ತವಿಕಲತೆಯ ಸಮಸ್ಯೆಯ ಪರಿಣಾಮವನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ. ಸುನಿಲ್ ಕುಮಾರ್ ಅವರು ತಿಳಿಸಿದರು. 
 
ಇವರು ಮೇ 12 ಶುಕ್ರವಾರ ಹಲೋ ವೆನ್ಲಾಕ್ ನೇರಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಮಾತನಾಡಿದರು.
 
 
 
 
 
 
ಚಿತ್ತವಿಕಲತೆ ಎಂದರೆ ಇದು ಒಂದು ತೀವ್ರತರವಾದ ಮಾನಸಿಕ ಕಾಯಿಲೆ. ಈ ಕಾಯಿಲೆ ಒಬ್ಬ ವ್ಯಕ್ತಿಯ ಮನಸ್ಸಿನ ಮೇಲೆ ತೀವ್ರತರವಾಗಿ ಪರಿಣಾಮ ಬೀರುತ್ತದೆ, ಮತ್ತು ವ್ಯಕ್ತಿಯ ಆಲೋಚಿಸುವ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮತ್ತು ನೆನಪಿನ ಶಕ್ತಿಯಲ್ಲಿ ಸ್ಪಲ್ಪ ಕುಂದು ಕೊರತೆ ಉಂಟಾಗುತ್ತದೆ.
 
ಈ ಕಾಯಿಲೆಗೆ ನಿರ್ದಿಷ್ಟ ಕಾರಣವೆಂಬುವುದಿಲ್ಲ. ನಮ್ಮ ಮೆದುಳಿನಲ್ಲಿರುವ ನರವಾಹಕಗಳಲ್ಲಿ ಏರುಪೇರುಗಳಾದರೆ ಚಿತ್ತವಿಕಲತೆ ಸಂಭವಿಸಬಹುದು. ಹುಟ್ಟಿದ ಸಮಯದಲ್ಲಿ ಏನಾದರು ತೊಂದರೆಯಾಗಿದ್ದಲ್ಲಿ, ಮೆದುಳು ಹಾನಿಯಾಗಿದ್ದಲ್ಲಿ ಮಗು ಮುಂದೆ ಬೆಳೆಯುತ್ತಾ ಆ ಮಗುವಿನಲ್ಲಿ ಚಿತ್ತವಿಕಲತೆ ಲಕ್ಷಣಗಳು ಗೋಚರಿಸಬಹುದು, ಎಂದು ತಿಳಿಸಿದರು.
 
ಚಿತ್ತ ವಿಕಲತೆ ಎಂಬುದು ಗಂಡಸರು ಹಾಗೂ ಹೆಂಗಸರಲ್ಲಿ ಸಮಾನವಾಗಿ ಕಂಡುಬರುವ ಕಾಯಿಲೆ. ಇದರಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಹದಿಹರೆಯದವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಮುಖ್ಯವಾಗಿ 20ರಿಂದ 40 ವರ್ಷದ ಒಳಗೆ ಕಂಡುಬರುತ್ತದೆ.
 
ಈ ರೋಗದ ಪ್ರಾರಂಭಿಕ ಲಕ್ಷಣವೆಂದರೆ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆ, ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿ ಇಲ್ಲದಿರುವುದು, ಉದ್ಯೋಗಿಗಳಲ್ಲಿ ಉದ್ಯೋಗದಲ್ಲಿ ಯಾವುದೇ ಆಸಕ್ತಿ ಇಲ್ಲದಿರುವುದು. ಮತ್ತು ಇದು ಮುಖ್ಯವಾಗಿ ಯೋಚನೆಯ ಕಾಯಿಲೆ. ಅಂಥ ವ್ಯಕ್ತಿಗೆ ಯೋಚನೆಗಳು ನಿರಂತರವಾಗಿ ಬರುತ್ತವೆ. ಇದರಿಂದ ಅನುಮಾನಗಳು ಶುರುವಾಗುತ್ತವೆ. ಜನ ನನ್ನನ್ನು ಹಿಂಬಾಲಿಸುತ್ತಿದ್ದಾರೆ, ನನ್ನ ವಿರುದ್ಧ ಸಂಚು ಮಾಡುತ್ತಿದ್ದಾರೆ, ನಂಗೆ ತೊಂದರೆ ಕೊಡಲು ನೋಡುತ್ತಿದ್ದಾರೆ; ಕುಟುಂಬದವರು ಊಟದಲ್ಲಿ ವಿಷ ಹಾಕ್ತಾರೆ. ನಾನು ಹೋದ ಜಾಗದಲ್ಲೆಲ್ಲ ಬರ್ತಾರೆ. ಇಂತಹ ಯೋಚನೆಗಳು ಮೊದಲು ಅನುಮಾನವಾಗಿ ಪ್ರಾರಂಭವಾಗಿ ನಂತರ ಬಲವಾದ ನಂಬಿಕೆಗಳಿಗೆ ಕಾರಣವಾಗುತ್ತವೆ. ಆ ವ್ಯಕ್ತಿಗೆ ವಾಸ್ತವ ಪರಿಸ್ಥಿತಿ ಅರ್ಥವಾಗುವುದಿಲ್ಲ ಮತ್ತು ಅವನು ಯಾವಾಗಲೂ ಅವನ ಭ್ರಮಾಲೋಕದಲ್ಲಿರುತ್ತಾನೆ. ಇಂತಹ ಹಲವಾರು ಲಕ್ಷಣಗಳನ್ನು ಚಿತ್ತವಿಕಲತೆಯ ಸಮಸ್ಯೆ ಹೊಂದಿರುವ ರೋಗಿ ಹೊಂದಿರುತ್ತಾನೆ, ಎಂದರು. ಈ ಕಾಯಿಲೆಗೆ ಮಾತ್ರೆ ಹಾಗು ಆಪ್ತ ಸಮಾಲೋಚನೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ, ಎಂದು ತಿಳಿಸುತ್ತಾ ಹಲವಾರು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು .
 
- ಬಿಂದಿಯಾ ಕುಲಾಲ್ , ರೇಡಿಯೋ ಸಾರಂಗ್