'ತುಳುವರ ಬದುಕಿನ ಭಾಗವಾಗಿದ್ದ ಅನೇಕ ಭೌತಿಕ ವಸ್ತುಗಳಲ್ಲಿ ಹಲವಾರು ಕಥೆಗಳಿವೆ ಹಾಗೂ ವಿಶೇಷ ಹಿನ್ನಲೆಗಳಿವೆ,' ಎಂದು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯ ಇದರ ಸ್ಥಾಪಕಾಧ್ಯಕ್ಷರಾದ ಡಾ. ತುಕಾರಾಮ ಪೂಜಾರಿ ತಿಳಿಸಿದರು.
ಅವರು ಡಿಸೆಂಬರ್ 1 ಗುರುವಾರದ ತುಳು ಚಾವಡಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಮಾತನಾಡಿದರು.
ಪೋರ್ಚುಗೀಸರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ವೀರ ವನಿತೆ ರಾಣಿ ಅಬ್ಬಕ್ಕ ಇವರು ನಮ್ಮ ತುಳುನಾಡಿನ ಮಾತ್ರ ಅಲ್ಲ ಇಡೀ ದೇಶದ ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗಾಗಿ ಈ ರಾಣಿ ಅಬ್ಬಕ್ಕ ಯಾವ ರೀತಿಯ ಸಾಹಸ ತೋರ್ಪಡಿಸಿದ್ದಾರೆ ಅಂತಹ ಸಾಧನೆಯನ್ನು ನಮ್ಮ ಯುವ ಪೀಳಿಗೆ ತಿಳಿಯಬೇಕು. 'ಇತಿಹಾಸ ತಿಳಿಯದವ ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿಲ್ಲ' ಎಂಬ ಮಾತನ್ನು ನೆನಪಿಸುತ್ತಾ ನಮ್ಮ ಇತಿಹಾಸದ ಬಗ್ಗೆ ನಮಗೆ ಹೆಮ್ಮೆ ಬರಬೇಕು. ಆ ಕಾರಣಕ್ಕಾಗಿ ಅಬ್ಬಕ್ಕನ ಹೆಸರನ್ನು ತುಳು ಅಧ್ಯಯನ ಕೇಂದ್ರಕ್ಕೆ ಇಟ್ಟಿದ್ದೇನೆ, ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ರಾಜ ಮನೆತನದ ಹೆಸರು, ಅವರು ಸ್ಥಾಪಿಸಿದ ಹಲವಾರು ಕೋಟೆ, ಕೊತ್ತಲಗಳು ಇಂದು ನಮಗೆ ಆ ರಾಜಮನೆತನದ ದಿನಗಳು ಹೇಗಿದ್ದವು ಎಂಬುದನ್ನು ಆ ಕಾಲದ ವಸ್ತುಗಳು ತಿಳಿಸುತ್ತವೆ. ಆದರೆ ಅದೇ ಪ್ರದೇಶದಲ್ಲಿ ವಾಸಿಸಿದ ಕೆಳಸ್ತರದ ಜನಗಳ ಇತಿಹಾಸ ಕಟ್ಟುವ ಕೆಲಸ ಅತ್ಯಗತ್ಯ. ಒಂದು ಪ್ರದೇಶದ ಅಥವಾ ಒಂದು ಜನಸಮುದಾಯದ ಚರಿತ್ರೆಯನ್ನು ನಾಲ್ಕು ಮುಖ್ಯ ಆಧಾರದಲ್ಲಿ ಕಟ್ಟಬಹುದು: ಅದು ಮೌಖಿಕ ಇತಿಹಾಸ, ಭೌತಿಕ ಸಂಸ್ಕೃತಿ, ಸಾಮಾಜಿಕ ಮತ್ತು ಧಾರ್ಮಿಕ ಆಚರಣೆ ಹಾಗೂ ರಂಗ ಕಲೆ ಇವುಗಳನ್ನು ಅಧ್ಯಯನ ಮಾಡಿದರೆ ಆ ಪ್ರದೇಶದ ಚರಿತ್ರೆಯನ್ನು ಬರೆಯಬಹುದು. ಹೇಗೆಂದರೆ ನಮ್ಮ ಹಿರಿಯರು ಬಳಸುತ್ತಿದ್ದ ಒಂದು ಭೌತಿಕ ವಸ್ತುವಿನ ಜೊತೆ ಮಾತನಾಡಲು ಪ್ರಯತ್ನಿಸಿದರೆ ಅದು ಅದ್ಭುತವಾದ ಚರಿತ್ರೆಯನ್ನು ಅದರದೇ ಆದ ರೀತಿಯಲ್ಲಿ ತಿಳಿಸುತ್ತದೆ, ಎಂದು ಅವರು ತಿಳಿಸಿದರು. ಅದಕ್ಕೆ ಪೂರಕವಾಗಿ ನಾವು ಮೌಖಿಕ ಸಾಹಿತ್ಯವನ್ನು ತೆಗೆದುಕೊಳ್ಳಬೇಕು. ಈ ಮೌಖಿಕ ಸಾಹಿತ್ಯ ಒಂದು ಕಡೆಯಿಂದ ಭೌತಿಕ ವಸ್ತು ಇನ್ನೊಂದು ಕಡೆಯಿಂದ ಇದನ್ನು ನಾವು ಸಮಗ್ರವಾಗಿ ಅಧ್ಯಯನ ಮಾಡಿದರೆ ಒಂದು ಮಗ್ಗುಲಿನ ಒಂದು ಚಿತ್ರಣ ನಮಗೆ ಸಿಗುತ್ತದೆ. ನಮ್ಮ ತುಳುನಾಡು ಕೃಷಿ ಯೋಗ್ಯ ಭೂಮಿ ಅಲ್ಲದಿದ್ದರೂ ನಮ್ಮ ಹಿರಿಯರು ಅದನ್ನು ಕೃಷಿಯೋಗ್ಯ ಭೂಮಿಯಾಗಿ ಪರಿವರ್ತನೆ ಮಾಡಿದ್ದಾರೆ. ಹಾಗಾಗಿ ನಮ್ಮ ಉದ್ಯೋಗವೇ ಇಲ್ಲಿ ಕೃಷಿ. ಈ ಕೃಷಿಗೆ ಸಂಬಂಧಪಟ್ಟ ಹಲವಾರು ವಸ್ತುಗಳು ಇಂದು ನಮಗೆ ವಿಶೇಷವಾದ ಒಂದು ಕಾಲಘಟ್ಟದ ಚರಿತ್ರೆಯನ್ನೂ ಹೇಳುತ್ತವೆ, ಎಂದರು.
ತುಳು ಬದುಕು ವಸ್ತು ಸಂಗ್ರಹಾಲಯ ಇಲ್ಲಿ 4000ಕ್ಕೂ ಅಧಿಕ ನಮ್ಮ ತುಳುವರ ಬದುಕಿಗೆ ಸಂಬಂಧಪಟ್ಟ ವಸ್ತುಗಳು ಇದ್ದರೆ ಅದು ನಾಲ್ಕು ಸಾವಿರ ರೀತಿಯಲ್ಲಿ ಅದರದೇ ಆದ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ನಾವು ಹೊಲದಲ್ಲಿ ಉಳುವಾಗ ಎತ್ತುಗಳನ್ನು ಸರಿಯಾಗಿ ಉಳುಮೆ ಮಾಡಲು ಬಳಸುತ್ತಿದ್ದ ಉರ ಬಡು (ಉರ ಬೆತ್ತ) ಎಂಬ ಸಾಧನವನ್ನು ತಯಾರಿಸುವಾಗ ಎಷ್ಟು ಆಲೋಚನೆ ಮಾಡಿದ್ದಾರೆ, ಎಷ್ಟು ವೈಜ್ಞಾನಿಕವಾಗಿ ಆಲೋಚನೆ ಮಾಡಿದ್ದಾರೆ! ಈ ಉರ ಬಡು (ಉರ ಬೆತ್ತ) ಇದನ್ನು ಕಾಯರು ಅಥವಾ ಕೊರಜಿ ಎಂಬ ಮರದ ಗೆಲ್ಲಿನಿಂದ ತಯಾರಿಸುತ್ತಾರೆ. ಇದು ನಿರ್ದಿಷ್ಟ ಅಳತೆಯಲ್ಲಿ ಇರಬೇಕು ಎಂಬುದನ್ನೂ ಈ ಸಂದರ್ಭಲ್ಲಿ ತಿಳಿಸಿದರು ಹಾಗೂ ಈ ವಿಚಾರಕ್ಕೆ ಸಂಬಂಧಪಟ್ಟ ಹಲವಾರು ವಿಷಯಗಳ ಮಾಹಿತಿ ನೀಡಿದರು.
ವಸ್ತುಗಳ ಪ್ರದರ್ಶನ ಹೇಗಿರಬೇಕು ಎಂದರೆ ಅದರ ಕತೆಯನ್ನೂ ಅದೇ ತಿಳಿಸುವಂತೆ ಇರಬೇಕು. ಹೆಚ್ಚಿನ ವಸ್ತು ಸಂಗ್ರಹಾಲಯಗಳ ದೋಷ ಏನೆಂದರೆ ಒಟ್ಟು ವಸ್ತುಗಳನ್ನು ಅಸ್ತವ್ಯಸ್ತ ವಾಗಿ ಇಡುವುದು. ಹಾಗಾದರೆ ಅದರ ಪ್ರಾಮುಖ್ಯತೆ ಎದ್ದು ಕಾಣುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹುಲಿ ಓಡಿಸುವ ಸಾಧನದ ಕುರಿತು ಈ ಸಂದರ್ಭದಲ್ಲಿ ವಿವರವಾಗಿ ತಿಳಿಸುತ್ತಾ, ರಾಷ್ಟ್ರದ ಏಕೈಕ 'ರಾಣಿ ಅಬ್ಬಕ್ಕ ಗ್ಯಾಲರಿ'ಯ ಬಗ್ಗೆಯೂ ವಿವರಿಸುತ್ತ ಇಲ್ಲಿ ರಾಣಿ ಅಬ್ಬಕ್ಕನ ಕುರಿತಾದ ಪೈಂಟಿಂಗ್ ನೋಡುವ ಮುಖಾಂತರ ಅಬ್ಬಕ್ಕ ನ ಜೀವನ ಚರಿತ್ರೆಯನ್ನು, ಸಾಹಸಾಗಾಥೆಯನ್ನು ಸ್ಪಷ್ಟವಾಗಿ ತಿಳಿಯಬಹುದು. ಈ
ಗ್ಯಾಲರಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ 24 ಕಲಾವಿದರನ್ನೂ ಕೇಂದ್ರಕ್ಕೆ ಕರೆದು ಅವರನ್ನು ಉಳ್ಳಾಲಕ್ಕೆ ಕರೆದುಕೊಂಡು ಹೋಗಿ ಅವರಿಗೆ ಅಬ್ಬಕ್ಕನ ಜೀವನ ಚರಿತ್ರೆಯನ್ನು ತಿಳಿಸಿ ಐದು ದಿನ ಅವರನ್ನು ಅಧ್ಯಯನ ಕೇಂದ್ರದಲ್ಲಿ ಕೂರಿಸಿ, ಒಬ್ಬರಿಗೆ ಒಂದೊಂದು ವಿಷಯ ಕೊಟ್ಟು ಆ ರೀತಿಯ ಚಿತ್ರ ಅವರಿಂದ ಚಿತ್ರಿಸಲಾಯಿತು. ಇದನ್ನು ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದ್ದಾರೆ, ಎಂದು ನೆನಪಿಸುತ್ತ, ಎಸ್ ಯು ಪಣಿಯಾಡಿ ಗ್ರಂಥಾಲಯ ಹಾಗೂ ನಾಣ್ಯಶಾಸ್ತ್ರಕ್ಕೆ ಸಂಭಂದಪಟ್ಟ ವಿಷಯಗಳ ಬಗ್ಗೆಯೂ ತಿಳಿಸುತ್ತಾ ಹೋದರು. ಹಲವಾರು ಕೇಳುಗರು ಡಾ. ತುಕಾರಮ ಪೂಜಾರಿ ಅವರ ಜೊತೆ ಮಾತನಾಡಿದರು.
- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್