'ಮನುಷ್ಯ ಧರ್ಮದ ಪ್ರತಿಪಾದಕ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀನಾರಾಯಣಗುರು' ಎಂದು ತುಳು ಜನಪದ ವಿದ್ವಾಂಸರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇಲ್ಲಿನ ಶ್ರೀನಾರಾಯಣಗುರು ಅಧ್ಯಯನಪೀಠದ ನಿರ್ದೇಶಕರಾದ ಡಾ.ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು. ಇವರು ಸೆಪ್ಟೆಂಬರ್ 11 ಶನಿವಾರದ ತುಳು-ಚಾವಡಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ರಹ್ಮಶ್ರೀ ನಾರಾಯಣ ಗುರು ಇವರ 168ನೇ ಜನ್ಮದಿನೋತ್ಸವದ ಪ್ರಯುಕ್ತ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅಂದು ಕೇರಳದಲ್ಲಿ ಇದ್ದ ಜಾತಿ ವ್ಯವಸ್ಥೆ ಮೇಲು ಕೀಳೆಂಬ ತಾರತಮ್ಯ ಇದನ್ನೆಲ್ಲ ಗಮನಿಸಿದ ಸ್ವಾಮಿ ವಿವೇಕಾನಂದರು ಲೋಕ ಸಂಚರಿಸುತ್ತ 'ಈ ವ್ಯವಸ್ಥೆಯನ್ನು ಸರಿಪಡಿಸಬೇಕಾದರೆ ದೇವರೇ ಮತ್ತೊಮ್ಮೆ ಹುಟ್ಟಿ ಬರಬೇಕು', ಎಂದು ತಿಳಿಸಿದರಂತೆ. ಅದರಂತೆ 30 ವರುಷಗಳ ನಂತರ ಸ್ವಾಮಿ ವಿವೇಕಾನಂದರು ಅಲ್ಲಿಗೆ ಭೇಟಿ ಇತ್ತ ಸಂದರ್ಭ ಅಲ್ಲಿ ಆದ ಬದಲಾವಣೆಗಳಿಂದ ಅವರಿಗೆ ತಿಳಿಯಿತು ಈ ಕೆಲಸ ನಾರಾಯಣಗುರು ಮಾಡಿರಬಹುದು ಎಂದು.
ಈ ವಿಷಯದ ಬಗ್ಗೆ ಮಾತನ್ನು ಮುಂದುವರಿಸುತ್ತಾ ಅಲ್ಲಿ ಹಲವಾರು ಚಿತ್ರ-ವಿಚಿತ್ರ ತೆರಿಗೆ ಪದ್ಧತಿಗಳು ಇದ್ದವು. ಮುಖ್ಯವಾಗಿ ದೇವದಾಸಿ ಪದ್ಧತಿ, ಪಾಂಡವರ್, ಮುಂಡುಕೊಡು ಎಂಬ ಪದ್ದತಿ ಹಾಗೂ 16 ರಿಂದ 60 ವರ್ಷದವರೆಗಿನ ಗಂಡಸರಿಗೆ ವಿಶೇಷ ತೆರಿಗೆ ವ್ಯವಸ್ಥೆಗಳು ಇದ್ದವು. ಮದುವೆಯ ತೆರಿಗೆ, ವೃತ್ತಿ ತೆರಿಗೆ, ಸತ್ತ ನಂತರ ಮರಣ ತೆರಿಗೆ ಮತ್ತು ತಾಯಿಯು ಮಗುವಿಗೆ ಹಾಲುಣಿಸವ ತೆರಿಗೆ, ಹೀಗೆ ಕೆಳಜಾತಿಯವರಿಗೆ ವಿಚಿತ್ರ ತೆರಿಗೆ ವ್ಯವಸ್ಥೆಗಳು ಇದ್ದವು. ಈ ರೀತಿಯ ವ್ಯವಸ್ಥೆಯನ್ನು ಕಂಡು ನಾರಾಯಣಗುರು ಪ್ರಶ್ನೆ ಮಾಡಿದ ಸಂದರ್ಭ ಅವರನ್ನು ಮೇಲ್ವರ್ಗದವರು ವಿರೋಧಿಸಲು ಪ್ರಾರಂಭಿಸಿದರು, ಎಂದು ಡಾ. ಅಮೀನ್ ತಿಳಿಸಿದರು.