ಎಳವೆಯಿಂದಲೂ ಪತ್ರಿಕೆಗಳೆಂದರೆ ಎಲ್ಲಿಲ್ಲದ ಪ್ರೀತಿ, ಓದುವ ಆಸಕ್ತಿ. ಇದು ನನ್ನನ್ನು ಪತ್ರಕರ್ತನಾಗುವಂತೆ ಮಾಡಿತು, ಎಂದು ಪತ್ರಕರ್ತ, ಸಾಹಿತಿ, ಸಂಘಟಕ ಗಣೇಶ ಪ್ರಸಾದ ಪಾಂಡೇಲು ನುಡಿದರು.
ಅವರು ಫೆಬ್ರವರಿ 16ರಂದು ಬುಧವಾರ ರೇಡಿಯೋ ಸಾರಂಗ್'ನ ಹೃದಯರಾಗ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿಟ್ಲ ಬಂಟ್ವಳದ ಮೂಲತ: ಕೃಷಿ ಕುಟುಂಬದ ಹಿನ್ನೆಲೆಯಿರುವ ಇವರಿಗೆ ಬಡತನ ಕಾಡುತಿದ್ದರೂ ಓದುವ ಆಸಕ್ತಿ ಎಷ್ಟಿತೆಂದರೆ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ಇವರ ಕವನ ಓದಲು ಇವರ ತಂದೆ 2ಕೆಜಿ ಅಕ್ಕಿ ತರಲು ಕೊಟ್ಟ ಹಣದಿಂದ ಪತ್ರಿಕೆ ಕೊಳ್ಳುತ್ತಾರೆ. ಮನೆಗೆ ಬಂದ ಇವರಿಗೆ ತಂದೆಯಿಂದ ಸಿಕ್ಕಿದ ಬಹುಮಾನ ಬೈಗುಳ ಜೊತೆಗೆ ಬಸ್ಕಿ ತೆಗೆಯುವ ಶಿಕ್ಷೆ.
ಹೀಗೆ ಪತ್ರಿಕೆಯ ಒಡನಾಟ ಮೊದಮೊದಲು ಸಣ್ಣಪುಟ್ಟ ಪತ್ರಿಕೆಗಳಲ್ಲಿ ದುಡಿಯುವ ಅವಕಾಶ ನೀಡಿತು. ಇದು ಉದಯವಾಣಿಯಂತ ದೊಡ್ಡ ಪತ್ರಿಕೆಯಲ್ಲಿ 20 ವರ್ಷ ಸೇವೆ ಸಲ್ಲಿಸುವಂತೆ ಮಾಡಿತು, ಎಂದು ನುಡಿದರು.
ಸುದ್ದಿಗಳನ್ನು ಅತಿ ರಂಜನೀಯಗೊಳಿಸದೆ ವಾಸ್ತವತೆಯನ್ನು ಬಿಂಬಿಸುವ ನೈಜ ಸುದ್ದಿಗೆ ಆದ್ಯತೆ ನೀಡುವುದು ಅಗತ್ಯವೆಂದರು. ವರದಿ ಮಾಡುವಾಗ ಟಿಪ್ಪಣಿ ಮಾಡದೇ ಭಾಷಣದ ಸಾರವನ್ನು ಗ್ರಹಿಸಿಕೊಂಡೇ ಬರೆದದ್ದರಿಂದ ಬರಹದಲ್ಲಿ ಗಟ್ಟಿತನ ಕಾಣಿಸಿತು; ಇದು ನನ್ನ ವರದಿಗಾರಿಕೆ ಜನಮೆಚ್ಚಲು ಕಾರಣವಾಯಿತು ಎಂದರು.
ಇವರು ಕನ್ನಡದಲ್ಲಿ 23 ಕೃತಿ, ತುಳುವಿನಲ್ಲಿ 5 ಕೃತಿಗಳನ್ನು ಬರೆದಿದ್ದಾರೆ. ಕವನ, ಚುಟುಕು, ಗಜಲ್, ಹನಿಗವನ, ಟಂಕ, ಕಥೆ ಇವಿಷ್ಟು ನನ್ನ ಇಷ್ಟದ ಪ್ರಕಾರಗಳು ಎಂದು ತಿಳಿಸಿದರು.
ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡ ಇವರಿಗೆ ಸಮಾಜ ನೀಡಿದ ಸನ್ಮಾನ ಗೌರವ ಇನ್ನಷ್ಟು ಶಕ್ತಿ ನೀಡಿದೆ, ಎಂದರು.
ವೃತ್ತಿಯಿಂದ ನಿವೃತ್ತರಾದರೂ ಸಾಹಿತ್ಯ ಚಟುವಟಿಕೆಯಲ್ಲಿ ಸದಾ ನಿರತರಾಗಿದ್ದಾರೆ.
ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಖುಷಿಪಟ್ಟ ಇವರು ಕೇಳುಗರ ಕರೆಗಳಿಗೆ ಉತ್ತರಿಸಿದರು.
- ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್