''ನಮ್ಮ ಜೀವನ ಶೈಲಿ ಉತ್ತಮಗೊಳ್ಳಲು ಯೋಗ ಅತ್ಯಗತ್ಯ,'' ಎಂದು ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ತಿಳಿಸಿದರು. ಇವರು ಜೂನ್ 20 ರಂದು ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ರೇಡಿಯೋ ಸಾರಂಗ್ ಜನದನಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
'ಮಾನವೀಯತೆಗಾಗಿ ಯೋಗ' ಎಂಬ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧೈಯೋದ್ದೇಶಗಳನ್ನು ತಿಳಿಸುತ್ತ,ಯೋಗ ಎಂದರೇನು, ಯೋಗದ 8 ಮೆಟ್ಟಿಲುಗಳು ಯಾವುವು ಎಂಬುದನ್ನು ಶ್ರೀ ಗೋಪಾಲಕೃಷ್ಣ ದೇಲಂಪಾಡಿ ತಿಳಿಸಿಕೊಟ್ಟರು. ಪ್ರಾತಃಕಾಲ ಯೋಗಾಭ್ಯಾಸ ಮಾಡುವುದರಿಂದ ಆ ದಿನವಿಡೀ ಮನಸ್ಸು ಶಾಂತವಾಗಿರುತ್ತೆ; ಎಲ್ಲರೂ ಯೋಗ ಮಾಡಬಹುದು, ಆದರೆ ತೀವ್ರತರವಾದ ಆರೋಗ್ಯ ಸಮಸ್ಯೆ ಇರುವವರು ಯೋಗ ಗುರುಗಳ ಮಾರ್ಗದರ್ಶನದ ಮೂಲಕ ಅಭ್ಯಾಸ ಮಾಡುದು ಉತ್ತಮ, ಎಂದರು.
ಶ್ರೀಯುತರು ಮುದ್ರಾ ಯೋಗದ ಬಗ್ಗೆಯೂ ಸಾಕಷ್ಟು ಮಾಹಿತಿ ನೀಡಿದರು. ಮುದ್ರಾ ಯೋಗವು ಯಾರು ಬೇಕಾದರೂ ಮಾಡಬಹುದು. ವಯಸ್ಸಾದವರು ಮನೆಯಲ್ಲೇ ಕುಳಿತು ಈ ಯೋಗ ಮಾಡಬಹುದು; ಇದು ಅತ್ಯುತ್ತಮ ಎಂದರು. ಮಾನಸಿಕ ಒತ್ತಡ ನಿವಾರಣೆ, ಏಕಾಗ್ರತೆ ಹೆಚ್ಚಿಸಲು, ಹೀಗೆ ಬೇರೆ ಬೇರೆ ಸಮಸ್ಯೆಗಳಿಗೆ ಇದು ತುಂಬಾ ಪರಿಣಾಮಕಾರಿ ಎಂದರು.
ಮನುಷ್ಯನಲ್ಲಿ ಇರುವ ಎಲ್ಲಾ ರೋಗದ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಯೋಗ ಮಾನಸಿಕ ಹಾಗು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಅಸ್ತಮಾ, ಕ್ಯಾನ್ಸರ್ ಹೀಗೆ ಅನೇಕ ರೋಗಗಳಿಂದ ಬಳಲುವವರಿಗೆ ಒಂದು ಉತ್ತಮ ಚಿಕಿತ್ಸೆಯ ರೀತಿ ಇದು ಕೆಲಸ ಮಾಡಿದೆ, ಎಂದರು.
ಯೋಗದ ಕುರಿತು ಸಂಪೂರ್ಣವಾಗಿ ಅರಿತು ಯೋಗಾಭ್ಯಾಸ ಮಾಡುವುದರಿಂದ ನಮ್ಮ ಜೀವನ ಶೈಲಿ ಉತ್ತಮವಾಗಿರುತ್ತದೆ ಎಂದು ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಸಂದೇಶ ನೀಡುತ್ತಾ ಹಲವಾರು ಕೇಳುಗರ ಕರೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದರು.
- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್