ಯಕ್ಷಗಾನದ ಆಕರ್ಷಣೆ, ವೀಕ್ಷಣೆ, ಯಕ್ಷಗಾನ ಕಲಾವಿದರ ಸಾಂಗತ್ಯ ಲಭಿಸಿದ್ದು ನನಗೆ ನನ್ನ ತಂದೆ ಯಕ್ಷಗಾನ ಕಲಾವಿದರಾದ ಕಾರಣಕ್ಕೆ ಹೀಗೆ ಮನೆ ಮನದಲ್ಲಿ ಆವರಿಸಿದ ಯಕ್ಷ ಐಸಿರಿಗೆ ಮನಸೋತು ನಾನು ಯಕ್ಷಸೇವಕನಾದೆ ಎಂದು ಯಕ್ಷಗಾನ ಕಲಾವಿದ ಹರಿಶ್ಚಂದ್ರ ನಾಯ್ಗ ಮಾಡೂರು ಅವರು ನುಡಿದರು.
ಅವರು ಫೆಬ್ರವರಿ 2ರಂದು ರೇಡಿಯೋ ಸಾರಂಗ್’ನ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಾಲ್ಯದಲ್ಲಿ ಸ್ಥಿತಿವಂತರಾಗಿದ್ದ ಇವರು ಭೂಮಸೂದೆ ಕಾರಣದಿಂದ ಇದ್ದ ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾಗಬೇಕಾಯಿತು. ತಂದೆಯ ಅನಾರೋಗ್ಯ ವಿದ್ಯಾಭ್ಯಾಸದ ಮುನ್ನಡೆಗೆ ತಡೆಯಾಯಿತು. ನಂತರ ಸೈಕಲ್ ರಿಪೇರಿ, ತರಕಾರಿ ವ್ಯಾಪಾರ ಇನ್ನಿತರ ಕೆಲಸಗಳು ಬದುಕು ಚಿಗುರಲು ಸಹಕರಿಸಿದವು. ಇದಲ್ಲದೆ ಈಜು ಕುಸ್ತಿ ಮುಂತಾದ ಹವ್ಯಾಸಗಳು ಚೈತನ್ಯ ತುಂಬಿದವು, ಎಂದು ಹೇಳಿದರು.
ಯಕ್ಷಗಾನದ ಅತೀವ ಮೋಹ ಯಕ್ಷಗಾನದ ಆಳವಾದ ಅನುಭವ ಪಡೆಯಲು ಆಂತರಿಕ ಪ್ರೇರಣೆ ನೀಡಿದ್ದಲ್ಲದೆ ಭಾರತೀಯ ವಿದ್ಯಾಭವನದಲ್ಲಿ ಎರಡು ವರ್ಷ ಯಕ್ಷಗಾನದ ಡಿಪ್ಲೋಮಾ ಕೋರ್ಸ್ ಪಡೆಯುವ ಹಾದಿ ಸುಗಮಗೊಳಿಸಿತು. ಡಾ. ಶಿವರಾಮ ಕಾರಂತ ಮತ್ತು ಡಾ. ಅಮೃತ ಸೋಮೇಶ್ವರ ಅವರು ತರಬೇತಿ ಸಂದರ್ಭದಲ್ಲಿ ನೀಡಿದ ಸಾಂಪ್ರದಾಯಿಕ ಸೈದ್ಧಾಂತಿಕ ಅನುಭವಾಮೃತ ನುಡಿಗಳು ಯಕ್ಷರಂಗದಲ್ಲಿ ಸುದೃಢ ಹೆಜ್ಜೆಯೂರಲು ಶಕ್ತಿ ವೃದ್ಧಿಸಿತು, ಎಂದರು.
ಕಳೆದ 42 ವರ್ಷಗಳಿಂದ ಯಕ್ಷಗಾನ ರಂಗದ ಕಲಾ ಸೇವಕನಾಗಿ ದುಡಿದ ಇವರು ಯಕ್ಷಗಾನದ ಪ್ರಸರಣದಲ್ಲಿ ಪ್ರಮುಖ ಪಾತ್ರವಹಿಸಿ ಹಲವಾರು ಯುವ ಪ್ರತಿಭೆಗಳಿಗೆ ತರಬೇತಿ ನೀಡಿದ್ದಲ್ಲದೆ ವಿವಿಧ ಪಾತ್ರ ನಿರ್ವಹಿಸಿ ಯಕ್ಷರಂಗದ ಆಪತ್ಬಾಂಧವ ಎನಿಸಿದ್ದಾರೆ. ಯಕ್ಷಗಾನ ತಾಳಮದ್ದಳೆ ಸಂಘಟಿಸಿ ಹಿಮ್ಮೇಳ, ಮುಮ್ಮೇಳ, ಪ್ರಸಾಧನ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಚರ್ಮವಾದ್ಯಗಳ ತಯಾರಿಕೆ, ರಿಪೇರಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.
ಇವರ ಯಕ್ಷಸೇವೆಗೆ ಜನ ನೀಡಿದ ಸನ್ಮಾನ ಸನ್ಮಿತ್ರರ ಪ್ರೋತ್ಸಾಹ ನೆನಪಿಸುತ್ತಾ ಇವರು ಭಾವುಕರಾಗುತ್ತಾ ಯಕ್ಷರಂಗವು ಕಥಾವಸ್ತುವಿನ ಸಮಗ್ರ ಪ್ರಸ್ತುತಿಯಿಂದ ವಿಮುಖವಾಗಿ ಪಾತ್ರಧಾರಿಯ ವೈಯಕ್ತಿಕ ಪ್ರತಿಷ್ಠೆಯಲ್ಲದೆ ಇನ್ನಿತರ ವಿಷಯಗಳನ್ನು ವೈಭವೀಕರಿಸುವ ವೇದಿಕೆಯಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯತೆಯನ್ನು ವ್ಯಕ್ತಪಡಿಸುತ್ತಾ ಹಲವಾರು ಕೇಳುಗರ ಕರೆಗೆ ಉತ್ತರಿಸಿದರು.
- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್