Ismail Moodushedde: 'ಮೈಕಾಲ್ತೊ ಪಲಕ' ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮೂಡುಶೆಡ್ಡೆ

ದಿನಾಂಕ ಜೂನ್ 24 ರಂದು  "ಮೈಕಾಲ್ತೊ ಪಲಕ" ಕಾರ್ಯಕ್ರಮದಲ್ಲಿ ಪತ್ರಕರ್ತ, ನಾಟಕ ರಚನೆಕಾರ, ಸಿನೆಮಾ ನಿರ್ದೇಶಕ, ಇಸ್ಮಾಯಿಲ್ ಮೂಡುಶೆಡ್ಡೆ ಅತಿಥಿಯಾಗಿ ಭಾಗವಹಿಸಿದ್ದರು. ಬ್ಯಾರಿ ಕಲಾ ಕ್ಷೇತ್ರದಲ್ಲೂ ಸಾಧನೆಗೈದ ಇವರು  ಅನೇಕ ವಿಚಾರಗಳ ಬಗ್ಗೆ ಮಾತಾಡಿದರು. 

ಆರಂಭದಲ್ಲಿ ತನ್ನ ಬಾಲ್ಯದ ಬಗ್ಗೆ, ಶಾಲಾ ಜೀವನದ ಬಗ್ಗೆ, ಆ ದಿನಗಳ ಒಂದೊಂದು ನೆನಪನ್ನು ಮೆಲುಕು ಹಾಕುತ್ತಾ ಹೋದ ಅವರು, ಶಾಲೆಯಲ್ಲೂ ನಾಟಕ ರಚನೆ ಮಾಡಿ ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದ ಹಲವಾರು ಸನ್ನಿವೇಶಗಳ ಬಗ್ಗೆ ಕೇಳುಗರಿಗೆ ಹೇಳುತ್ತಾ ಹೋದರು. ಮತ್ತೆ ಕಾರಣಾಂತರದಿಂದ ಅರ್ಧದಲ್ಲೇ  ಶಾಲೆ ಮೊಟಕುಗೊಳಿಸಿಯೂ ತಾನು ಯಾಕೆ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ ಎಂಬುದರ ಬಗ್ಗೆಯೂ ವಿವರ ನೀಡಿದರು. ಬಾಲ್ಯದಲ್ಲೇ ಯಕ್ಷಗಾನ, ನಾಟಕ, ಸಿನಿಮಾ ನೋಡೋಕೆ ಹೊಗ್ತಾ ಇದ್ದ ಆ ಸಂದರ್ಭವನ್ನೂ ನೆನೆದು, ನಾನು ಯಕ್ಷಗಾನದ ದೊಡ್ಡ ಅಭಿಮಾನಿಯಾಗಿದ್ದರಿಂದ ರಾತ್ರಿ  ತಂದೆ ಮಲಗಿದ್ದ ಹೊತ್ತಲ್ಲಿ ಯಕ್ಷಗಾನ ನೋಡಲು ಹೋಗಿ ಬೆಳಿಗ್ಗೆ ಬರುತ್ತಿದ್ದ ಆ ಘಟನೆಯ ಬಗ್ಗೆ  ಹೇಳ್ತಾ ಹೋದರು. ಮುಂದೆ ಪತ್ರಕರ್ತನಾಗಿ ಹಲವಾರು ಸುದ್ದಿ ಪತ್ರಿಕೆಗಳಲ್ಲಿ ವರದಿಗಾರನಾಗಿ ದುಡಿಯುತ್ತಿದ್ದೆ. ಮುಂದೆ ತನ್ನದೇ ಆದ 'ಲಾಠಿಚಾರ್ಜ್' ಎಂಬ ಸ್ವಂತ ಪತ್ರಿಕೆಯನ್ನು ಆರಂಭಿಸಿ ಸಮಾಜದ ಅಂಕುಡೊಂಕುಗಳನ್ನು, ಹಗರಣ, ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ವರದಿ ಮಾಡುತ್ತಿದ್ದೆ. ಪ್ರತಿವರ್ಷ ಪತ್ರಿಕಾ ದಿನಾಚರಣೆಯಂದು ಮಂಗಳೂರು ಪುರಭವನದಲ್ಲಿ 'ಲಾಠಿಚಾರ್ಜ್' ಪತ್ರಿಕಾ ವಾರ್ಷಿಕೋತ್ಸವದ ಪ್ರಯುಕ್ತ 'ತುಳು ಬ್ಯಾರಿ - ಸೌಹಾರ್ದ ಸಂಗಮ' ಕಾರ್ಯಕ್ರಮವನ್ನು ಏರ್ಪಡಿಸಿ  ಜಾತಿಮತ ಬೇಧವಿಲ್ಲದೆ ಅನೇಕ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿದ್ದರ ಬಗ್ಗೆಯೂ ಹೇಳಿ ಹೆಮ್ಮೆಪಟ್ಟರು. ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಮಂಗಳೂರು ಪುರಭವನದಲ್ಲಿ ಮೊದಲ ಸನ್ಮಾನ ಆದದ್ದು ಇದೇ ಕಾರ್ಯಕ್ರಮದಲ್ಲಿ ಎಂದೂ ಸಂತಸಪಟ್ಟರು.

ಇವರು ನಾಟಕ ರಚನೆಕಾರರು ಕೂಡಾ ಹೌದು. ಬ್ಯಾರಿ ಮತ್ತು ತುಳುವಿನಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸಿ  ರಚನೆ ಮಾಡಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ , 1997ರ ಇಸವಿಯಲ್ಲಿ ನನ್ನ ನಿರ್ದೇಶನೆ ಮತ್ತು ರಚನೆಯ 'ಕಾಕಜಿ ಪಾಡ್ಲೆ' ಎಂಬ ನಾಟಕ ಪುರಭವನದಲ್ಲಿ ಪ್ರದರ್ಶನವಾಗಿತ್ತು. ಹೀಗೆ ಆರು ನಾಟಕಗಳನ್ನು ತುಳುವಿನಲ್ಲಿ ನಾನು ರಚನೆ ಮಾಡಿದ್ದೆ ಎಂದರು. ಹಾಗೆನೇ 2007ರಲ್ಲಿ 'ಬಿರ್ಂದರ' ಎಂಬ ಬ್ಯಾರಿ ನಾಟಕ ಕೂಡ ಮೊದಲ ಬಾರಿಗೆ ಪುರಭವನದಲ್ಲಿ  ಪ್ರದರ್ಶನವಾಯಿತು. ಹೀಗೆ ಬ್ಯಾರಿಯಲ್ಲೂ 'ಕುಙಲಿ MBBS', 'ಕಾಸಿಲ್ಲೆಂಗುಂ ಆರುಂಮಿಲ್ಲೆ', 'ಪೊಕರಾಕೊಗು ಪುರುಸೊತ್ತಿಲ್ಲೆ', 'ಕಾಸಿಮಾಕರೊ ಪಿತ್ತ್'ಲ್' ಎಂಬ ಐದು ನಾಟಕಗಳನ್ನು ಬ್ಯಾರಿಯಲ್ಲಿ ರಚನೆ ಮಾಡಿ ನಿರ್ದೇಶಿಸಿದ್ದೇನೆ ಎಂದರು. ಇದರಲ್ಲಿ 'ಕಾಸಿಮಾಕರೊ ಪಿತ್ಲ್' ಎಂಬ ನಾಟಕ ಆಳ್ವಾಸ್ ನುಡಿಸಿರಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸಹಯೋಗದೊಂದಿಗೆ ಪ್ರದರ್ಶನವಾಗಿತ್ತು ಎನ್ನುವುದು ವಿಶೇಷ ಎಂದರು. ಮುಂದೆ 'ಕಿನಾವು ಕಾನುಂಬೊ' ಎಂಬ ಬ್ಯಾರಿ ಟೆಲಿ ಸಿನೆಮಾ ಮಾಡಿ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದೆ, ಎಂದರು.
 
 
 
 

ಬ್ಯಾರಿ ಭಾಷಿಕನಾಗಿದ್ದ ಇವರು ಮುಂದೆ ಕನ್ನಡ ಸಿನೆಮಾ ನಿರ್ದೇಶಕರಾಗಿಯೂ, ಕನ್ನಡದಲ್ಲಿ ಇವರ ಮೊದಲ ನಿರ್ದೇಶನದ ಕರಾವಳಿ ಕರ್ನಾಟಕದ ಯಕ್ಷಗಾನ ಕಲಾವಿದನೊಬ್ಬನ ಜೀವನದ ಕಥೆ ಸಾರುವ 'ಬಣ್ಣ ಬಣ್ಣದ ಬದುಕು' ಎಂಬ ಸಿನೆಮಾವನ್ನು ಮಾಡಿ ಜನರಿಂದ ಬಂದ ಪ್ರಶಂಸೆಯ ಬಗ್ಗೆಯೂ, ಆ ಸಿನೆಮಾದ ಒಂದಿಷ್ಟು ಅನುಭವಗಳನ್ನೂ ಹಂಚಿಕೊಂಡರು. ತುಳು ಸಿನೆಮಾ ನಿರ್ದೇಶಕರಾಗಿಯೂ 'ಪಮ್ಮಣ್ಣ ದಿ ಗ್ರೇಟ್' ಹಾಗೂ 'ಭೋಜರಾಜ್ MBBS' ನಂತಹ ಸಿನೆಮಾಗಳನ್ನು ಕಲಾ ಪ್ರೇಕ್ಷಕರು ಮೆಚ್ಚುವ ರೀತಿಯಲ್ಲಿ ಮಾಡಿದ್ದಾರೆ. 

ಅನೇಕ ಕೇಳುಗರು ಕರೆ ಮಾಡಿ ಇವರು ಮಾಡಿದ್ದ ನಾಟಕ, ಸಿನೆಮಾಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಬ್ಯಾರಿಯಲ್ಲೂ ಒಳ್ಳೆಯ ಸಂದೇಶಗಳಿರುವ ಸಿನೆಮಾಗಳು ಮೂಡಿಬರಬೇಕು, ಎಲ್ಲರ ಪ್ರೋತ್ಸಾಹ ದೊರೆತಾಗ ಖಂಡಿತ ಬರುತ್ತೆ, ಅದೆಷ್ಟೋ ಕಲಾವಿದರು, ಉತ್ತಮ ನಟರು ಬ್ಯಾರಿಯಲ್ಲೂ ಇದ್ದಾರೆ; ಅವರಿಗೆ ಬೆಂಬಲ ಸಿಗುವ ಕಾರ್ಯ ಆಗಬೇಕು, ಎಂದರು. 
 
- ಸೈಫುಲ್ಲಾ ಕುತ್ತಾರ್, ರೇಡಿಯೋ ಸಾರಂಗ್