K. R. Abbas: ರಾಜಕುಮಾರ್ ಕಂಠ ಸಿರಿ ಜೀವನಕ್ಕೆ ದಾರಿ ಕಲ್ಪಿಸಿತು: ಕೆ. ಆರ್. ಅಬ್ಬಾಸ್ ಕುಂಜತ್ತಬೈಲ್

ನನ್ನೊಳಗೆ ಅಡಗಿದ್ದ ರಾಜಕುಮಾರ್ ಕಂಠ ಸಿರಿ ಜೀವನ ಕ್ಕೆ ದಾರಿ ತೋರಿಸಿತು, ಎಂದು ಜೂನಿಯರ್ ರಾಜಕುಮಾರ್ ಖ್ಯಾತಿಯ ಕೆ. ಆರ್. ಅಬ್ಬಾಸ್ ಕುಂಜತ್ತಬೈಲ್ ನುಡಿದರು.

ಅವರು ಮಾರ್ಚ್ 30ರಂದು  ರೇಡಿಯೋ ಸಾರಾಂಗ್’ನ ಹೃದಯರಾಗ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕುಂಜತ್ತಬೈಲ್ ತನ್ನೂರಿನ ಒಂದು ಕಾರ್ಯಕ್ರಮ ದಲ್ಲಿ ಇವರು ಹಾಡಿದ ಹಾಡಿನಲ್ಲಿ ರಾಜಕುಮಾರ್ ಧ್ವನಿಯನ್ನು ಗುರುತಿಸಿದ ಪ್ರೇಕ್ಷಕರು ಪ್ರಶಂಸಿದರು. ಇದು ಧ್ವನಿಕಲಾವಿದರಾಗಿ  ಜೂನಿಯರ್ ರಾಜಕುಮಾರ್ ಎಂಬ ಖ್ಯಾತಿಯನ್ನು ನೀಡಿತು, ಎಂದರು.

1989ರಿಂದ ಶುರುವಾದ ಹಾಡುವ ಕಾಯಕ ದೇಶ ವಿದೇಶದಲ್ಲೂ ಕಾರ್ಯಕ್ರಮ ನೀಡುವಂತೆ ಮಾಡಿತು. ಇದಲ್ಲದೆ ರಾಜಕುಮಾರ್ ಅವರ ರೀತಿಯಲ್ಲಿ ಉಡುಪು ಹೇರ್ ಕಟ್, ಮೀಸೆ; ಒಟ್ಟಿನಲ್ಲಿ ಪ್ರೇಕ್ಷಕರು ರಾಜಕುಮಾರ್ ಅವರನ್ನು ನನ್ನಲ್ಲಿ ಕಾಣುವಂತೆ  ಅವರ ಆದರ್ಶ ಗುಣಗಳನ್ನು ಬೆಳೆಸಿಕೊಂಡೆ, ಎಂದ ಇವರು ರಾಜಕುಮಾರ್ ಜತೆ  ಗುರುರಾಘವೇಂದ್ರರ  ’ಏನು ದಾಹ ಏನು ಮೋಹ’ ಭಕ್ತಿಗೀತೆ  ಹಾಡಿದ್ದು ಮರೆಯಲಾರದ  ಕ್ಷಣ ಎಂದು ನೆನೆದರು. ಇದಲ್ಲದೆ  ಪಿ. ಬಿ. ಶ್ರೀನಿವಾಸ್, ಎಲ್. ಆರ್. ಈಶ್ವರಿ ಇವರ ಜತೆ ಹಾಡುವ ಅವಕಾಶ ಸಿಕ್ಕಿದ್ದು ಮರೆಯಲಾರದ  ಅನುಭವ ಎಂದರು.

ಆರ್ಕೆಸ್ಟ್ರಾ ಮಾತ್ರವಲ್ಲದೆ ನಾಟಕಗಳಿಗೆ, ಧ್ವನಿಮುದ್ರಿಕೆಗಳಿಗೆ ಹಾಡುಗಳನ್ನು ಡಿದ್ದೇನೆ ಎಂದರು. ಹಿಂದೆ ಹಳ್ಳಿ ಹಳ್ಳಿಗಳಿಗೆ ಕಾರ್ಯಕ್ರಮ ನೀಡಲು ಹೋಗಿ ಬೀದಿ ಬದಿ ನಿದ್ರಿಸಿದ್ದು, ಹಲವಾರು ಕಷ್ಟಗಳನ್ನು ಎದುರಿಸಿದ್ದನ್ನು ನೆನಪು ಮಾಡಿಕೊಂಡರು. ಮೊದಮೊದಲು ಹಾಡುವ ಕಾಯಕಕ್ಕೆ ಮನೆಯವರ  ವಿರೋಧ ವ್ಯಕ್ತವಾದರೂ ನಂತರ ದೊರಕಿದ ಖ್ಯಾತಿ ಮನೆಯವರ ಮನ ಗೆದ್ದಿತು, ಎಂದರು.

ಈಗಿನ ದಿನಗಳಲ್ಲಿ ರಸಮಂಜರಿ ಕಾರ್ಯಕ್ರಮಗಳು ಕಡಿಮೆಯಾದರೂ ಇನ್ನಿತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಜೀವನ ಸಾಗುತ್ತಿದೆ, ಎಂದರು. ನೇರಪ್ರಸಾರ ಕಾರ್ಯಕ್ರಮದಲ್ಲಿ ರಾಜಕುಮಾರ್’ರವರ  ಹಾಡುಗಳನ್ನು ಹಾಡಿ ಕೇಳುಗರನ್ನು ರಂಜಿಸಿದ ಇವರು ಕರೆಗಳಿಗೆ ಉತ್ತರಿಸಿ ಖುಷಿಪಟ್ಟರು

- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್