ಹರಿಕಥೆ ಎಂಬ ಮಾಧ್ಯಮ ಮನರಂಜನೆಗಾಗಿ ಅಲ್ಲ ನೀತಿಗಾಗಿ, ಎಂದು ಹಿರಿಯ ಹರಿಕಥಾದಾಸ ಮಹಾಬಲ ಶೆಟ್ಟಿ ಕೂಡ್ಲು ಅಭಿಪ್ರಾಯಪಟ್ಟರು.
ಅವರು ನವೆಂಬರ್ 30ರಂದು ಬುಧವಾರ ರೇಡಿಯೋ ಸಾರಂಗ್ ನಲ್ಲಿ ನಡೆದ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವೃತ್ತಿಯಲ್ಲಿ ವಕೀಲರಾಗಿರುವ ಇವರು ಕಳೆದ 50 ವರ್ಷಗಳಿಂದ ಹರಿಕಥಾ ದಾಸನಾಗಿ ರಾಜ್ಯಾದ್ಯಂತ ಹರಿಕಥೆ ನಡೆಸುತ್ತಿದ್ದಾರೆ. ಪ್ರಸ್ತುತ ಹರಿಕಥಾ ಪರಿಷತ್ ಅಧ್ಯಕ್ಷರಾಗಿದ್ದಾರೆ. ಹವ್ಯಾಸಿ ನಾಟಕ, ಯಕ್ಷಗಾನ, ತಾಳಮದ್ದಳೆ ಅರ್ಥದಾರಿಯಾಗಿದ್ದಾರೆ. 'ನನ್ನ 79 ವರ್ಷದ ಈ ಪ್ರಾಯದಲ್ಲಿ ನನ್ನ ಲವಲವಿಕೆ ಜೀವನೋತ್ಸವಕ್ಕೆ ಆಧ್ಯಾತ್ಮಿಕ ಅನುಭವ ಕೊಡುವ ಹರಿಕಥೆಯೆ ಮೂಲ ದ್ರವ್ಯವಾಗಿದೆ,' ಎಂದರು.
ಹರಿಕಥೆ ಎಂದರೆ ನಿಕೃಷ್ಟವಾಗಿ ಕಾಣುವ ಜನಸಾಮಾನ್ಯರ ದ್ರಷ್ಟಿಕೋನ ಬದಲಾಗಬೇಕು ಎಂದ ಇವರು ಈ ನಿಟ್ಟಿನಲ್ಲಿ ಸರಕಾರ ಹರಿಕಥೆಗೆ ಪ್ರೋತ್ಸಾಹ, ಹರಿಕಥಾದಾಸರ ವೃತ್ತಿ ಜೀವನಕ್ಕೆ ಆರ್ಥಿಕ ಬೆಂಬಲ ನೀಡಬೇಕಿದೆ, ಎಂದು ನುಡಿದರು.
ಅಲ್ಲಲ್ಲಿ ಹರಿಕಥಾಸಪ್ತಾಹ, ಮನೆ ಮನೆ ಹರಿಕಥೆ ಮುಂತಾದ ಕಾರ್ಯಕ್ರಮಗಳಿಂದ ಹರಿಕಥಾ ಪರಿಷತ್ ಹರಿಕಥಾ ಕಲೆಯ ಉಳಿಯುವಿಕೆಗೆ ಗಣನೀಯ ಸೇವೆ ಸಲ್ಲಿಸುತ್ತಿದೆ, ಎಂದರು.
ಹರಿಕಥೆಯ ಕೆಲವೊಂದು ಭಾಗಗಳನ್ನು ಪ್ರಸ್ತುತಪಡಿಸಿದ ಮಹಾಬಲ ಶೆಟ್ಟಿ ಕೇಳುಗರ ಹಲವಾರು ಕರೆಗಳಿಗೆ ಉತ್ತರಿಸಿದರು.
- ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್